ದಳಪತಿ ವಿಜಯ್‌ಗೆ ಸರ್ಕಾರ ರಚನೆಯೇ ಸವಾಲು – ಇಂದಾದ್ರೂ ಸಿಗಲಿದ್ಯಾ ಸ್ಪಷ್ಟತೆ?

– ತಮಿಳಿಗ ವೆಟ್ರಿ ಕಳಗಂ ಪಕ್ಷಕ್ಕೆ ಮೈತ್ರಿ ಬಹು`ಬಲ’..!

ಚೆನ್ನೈ: ತಮಿಳುನಾಡಿನಲ್ಲಿ (TamilNadu) ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿರುವ ನಟ ರಾಜಕಾರಣಿ ವಿಜಯ್‌ಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. ನಮ್ಮ ಬೆಂಬಲ ಇಲ್ಲ ಎಂದು ಅಣ್ಣಾಡಿಎಂಕೆ (AIADMK) ಸ್ಪಷ್ಟಪಡಿಸಿದೆ. ಹೀಗಾಗೀ ಕಡೆಯದಾಗಿ ಉಳಿದಿರುವುದು ಡಿಎಂಕೆ ಮಿತ್ರ ಪಕ್ಷಗಳಷ್ಟೇ. ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಾಗಿರುವ ದಳಪತಿಗೆ ಇಂದು ಉಳಿದ ಪಕ್ಷಗಳು ಬೆಂಬಲ ಘೋಷಣೆ ಮಾಡಲಿವೆಯೇ ಎಂಬುದು ಇಂದು ಸ್ಪಷ್ಟವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿರುವ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ (Thalapathy vijay) ಅವರಿಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. ನಿನ್ನೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಹೊರಟ ದಳಪತಿಗೆ ರಾಜ್ಯಪಾಲರ ಪ್ರಶ್ನೆಯೊಂದು ಗಂಟಲಿಗೆ ಸಿಕ್ಕ ತುತ್ತಾಗಿ ಪರಿಣಮಿಸಿದೆ.

ಹೌದು. ಅಗತ್ಯ ಸಂಖ್ಯಾಬಲದ ಪ್ರದರ್ಶನಕ್ಕೆ ತಮಿಳುನಾಡು ರಾಜ್ಯಪಾಲರು (Governor) ನೀಡಿದ ಸಲಹೆ, ತಮಿಳಿಗ ವೆಟ್ರಿ ಕಳಗಂ ಪಕ್ಷ, ಮೈತ್ರಿ ಮಾತುಕತೆಗಳನ್ನ ಚುರುಕುಗೊಳಿಸುವ ಅನಿವಾರ್ಯತೆಗೆ ದೂಡಿದೆ.

ಚೆನ್ನೈನಲ್ಲಿರುವ (Chennai) ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನ ವಿಜಯ್ ಭೇಟಿ ಮಾಡಿದ್ರು. ಸರ್ಕಾರ ರಚನೆಗೆ ಹಕ್ಕೋತ್ತಾಯ ಮಂಡಿಸಿದರು. ಟಿವಿಕೆಗೆ 118 ಶಾಸಕರ ಬೆಂಬಲಬೇಕು. ಆದರೆ, ವಿಜಯ್ 112 ಶಾಸಕರ ಬೆಂಬಲ ಪತ್ರವನ್ನ ರಾಜ್ಯಪಾಲರಿಗೆ ನೀಡಿ ಹಕ್ಕು ಮಂಡಿಸಿದ್ರು. ಆದರೆ ರಾಜೇಂದ್ರ ಅರ್ಲೇಕರ್ ಅವರು ಬಹುಮತ ಸಾಬೀತುಪಡಿಸುವಂತೆ ಟಿವಿಕೆ ಮುಖ್ಯಸ್ಥರಿಗೆ ಸೂಚಿಸಿದರು.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆಗೆ ಬಹುಮತಕ್ಕೆ 118 ಸ್ಥಾನ ಅಗತ್ಯವಿದೆ. ಬಾಕಿ 10 ಸ್ಥಾನಗಳನ್ನು ಗಳಿಸಲು ಟಿವಿಕೆ ಪ್ರಯತ್ನಿಸುತ್ತಿದೆ. ಟಿವಿಕೆಗೆ ಷರತ್ತು ಬೆಂಬಲ ಘೋಷಿಸಿರುವ ಕಾಂಗ್ರೆಸ್, ತನ್ನ ಐವರು ಶಾಸಕರ ಬೆಂಬಲವನ್ನು ವಿಜಯ್ ಕಡೆಗೆ ತಿರುಗಿಸಿದೆ. ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾರು ವಿಜಯ್ ತಂಡದ ಭಾಗವಾಗುತ್ತಾರೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಎರಡು ಸ್ಥಾನಗಳನ್ನು ಗೆದ್ದಿರುವ ವಿಸಿಕೆ, ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ಸಾಧಕ-ಬಾಧಕಗಳ ಬಗ್ಗೆ ಆಂತರಿಕ ಚರ್ಚೆಗಳನ್ನು ನಡೆಸುತ್ತಿದೆ. ಅದೇ ರೀತಿ ತಲಾ 2 ಸ್ಥಾನಗಳನ್ನ ಗೆದ್ದಿರುವ ಸಿಪಿಐ ಮತ್ತು ಸಿಪಿಎಂ ಪಕ್ಷಗಳ ಜೊತೆಗೂ ಟಿವಿಕೆ ಮಾತುಕತೆ ನಡೆಸಲು ಉತ್ಸುಕತೆ ತೋರಿಸಿದೆ. ಎರಡೂ ಪಕ್ಷಗಳೂ ನಿರ್ಧಾರ ತೆಗೆದುಕೊಳ್ಳಲು ಮೇ 8ರವರೆಗೆ ಸಮಯ ಕೇಳಿವೆ ಎಂದು ಮೂಲಗಳು ತಿಳಿಸಿವೆ.

ಪ್ರಮಾಣ ಸ್ವೀಕಾರಕ್ಕೆ ದಳಪತಿ ವಿಜಯ್ ಸಿದ್ಧತೆ
ಕಾಂಗ್ರೆಸ್ ಬೆಂಬಲದ ಬಳಿಕ ಟಿವಿಕೆಗೆ ಇನ್ನು 6 ಶಾಸಕರ ಬಲ ಬೇಕು. ಹೀಗಾಗಿ ಟಿವಿಕೆ ಇತರೆ ಪಕ್ಷಗಳ ಮೇಲೆ ಅವಲಂಬನೆಯಾಗಿದೆ.

* ಯಾರ ಬೆಂಬಲ ನಿರೀಕ್ಷೆಯಲ್ಲಿದೆ ಟಿವಿಕೆ?
ಟಿವಿಕೆ-107
ಕಾಂಗ್ರೆಸ್-5
ಒಟ್ಟು- 112
ಕೊರತೆ-6

* ಬೆಂಬಲ ನಿರೀಕ್ಷೆಯಲ್ಲಿ ವಿಜಯ್
> ಪಿಎಂಕೆ- 4
> ಎಡಪಕ್ಷಗಳು- 4
> ವಿಸಿಕೆ- 2
ಒಟ್ಟು- 10

ಈ ಎಲ್ಲ ಬೆಳವಣಿಗೆ ನಡುವೆ ವಿಜಯ್ ಚೆನ್ನೈನಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ರಾಜ್ಯಪಾಲರು ಬೆಂಬಲ ಪತ್ರ ತರಲು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗೀ ಮೈತ್ರಿ ಮಾಡಿಕೊಳ್ಳಲು ನಿಶ್ಚಯಿಸಿರುವ ಪಕ್ಷಗಳ ಜೊತೆಗೆ ವಿಜಯ್ ಮಾತುಕತೆ ತೀವ್ರಗೊಳಿಸುವ ಸಾಧ್ಯತೆ ಇದೆ. ಇಂದು ಬೆಂಬಲ ಘೋಷಣೆಯಾಗಲಿದ್ಯಾ ಎನ್ನುವ ಕುತೂಹಲ ಹೆಚ್ಚಿಸಿದೆ.

Share This Article