ಬೆಂಗಳೂರು: ಬಿಡದಿ ಟೌನ್‌ಶಿಪ್ ವಿರೋಧಿಸಿ ರೈತರ 500 ದಿನಗಳ ಹೋರಾಟ, ಸರ್ವೇಗೆ ಹೋದ ಅಧಿಕಾರಿಗಳು, ಲೀಸರ ಮೇಲೆ ಮಹಿಳೆಯರು ಪೊರಕೆ ದಾಳಿ ನಡೆಸಿದ್ದ ಬೆನ್ನಲ್ಲೇ, ಯೋಜನೆಯನ್ನ 2 ತಿಂಗಳು ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರೈತರ ಅಭಿಪ್ರಾಯ ಸಂಗ್ರಹಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಇದು ಕೊಡುವ ವರದಿಯ ಮೇಲೆ ಮುಂದಿನ ಹೆಜ್ಚೆ ಇಡಲು ಸರ್ಕಾರ ತೀರ್ಮಾನಿಸಿದೆ. ಆದ್ರೆ, ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಲ್ಲ ಅಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ರೈತರ ಜಮೀನನ್ನು ಬಲವಂತವಾಗಿ ಪಡೆಯುವುದಿಲ್ಲ. ಯಾರು ಸ್ವಇಚ್ಛೆಯಿಂದ ಕೊಡ್ತಾರೆ ಅವರದು ಮಾತ್ರ ಪಡೆಯುತ್ತೇವೆ. ಯಾವ ಸ್ಟ್ರೈಕ್ ಬೇಡ. ನೆಮ್ಮದಿ ಆಗಿರಿ. ಬೇಕಾದ್ರೆ ನನಗೆ ಪೊರಕೆಯಲ್ಲಿ ಹೊಡೀರಿ, ಹೊಡೆಸ್ಕೋತೀನಿ, ತಪ್ಪು ಮಾಡಿದ್ರೆ ಹೊಡೆಯಲಿ. ಅಧಿಕಾರಿಗಳಿಗೆ ಹೊಡೆಯುವುದು ಬೇಡ ಅಂದ್ರು.

ಅಲ್ಲದೆ, ಕುಮಾರಸ್ವಾಮಿ ಅವರ ನಿರ್ಧಾರವನ್ನು ನಾನು ಮುಂದುವರಿಸಿದ್ದೇನೆ. ಕುಮಾರಣ್ಣ 8,000 ಅಡಿ ಅಂದಿದ್ದರು, ನಾನು 9000 ಅಡಿ ಅಂತ ಮಾಡಿದ್ದೆ. ಈಗಾಗಲೇ ಜಾರಿ ಇರುವ ರೆಡ್ ಝೋನ್ ಮುಂದುವರಿಯುತ್ತದೆ ಅಂತ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ಯೋಜನೆ 2 ತಿಂಗಳು ತಾತ್ಕಾಲಿಕ ಸ್ಥಗಿತ ಮಾಡ್ತೇನೆ ಅಂತ ಸಿಎಂ ಹೇಳಿದರೂ ಕೂಡ ಟೌನ್‌ಶಿಪ್ ವ್ಯಾಪ್ತಿಯ 4 ಕಂದಾಯ ಗ್ರಾಮಗಳಾದ ಬನ್ನಿಗಿರಿ, ಅರಳಾಳುಸಂದ್ರ, ಕೆ.ಜಿ.ಗೊಲ್ಲರಪಾಳ್ಯ, ಹೊಸೂರು ಗ್ರಾಮಗಳ ಜಮೀನು ಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆ 2ನೇ ಹಂತದಲ್ಲಿ ಅಂತಿಮ ಅಧಿಸೂಚನೆ ಪ್ರಕಟಿಸಿದೆ.
4 ಗ್ರಾಮಗಳ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ – ಯಾವ ಗ್ರಾಮದಲ್ಲಿ ಎಷ್ಟು ಎಕ್ರೆ ಸ್ವಾಧೀನ?
* ಕೆ.ಜಿ.ಗೊಲ್ಲರಪಾಳ್ಯ ಗ್ರಾಮದ 221 ರೈತರ 315 ಎಕರೆ
* ಬನ್ನಿಗಿರಿ ಗ್ರಾಮದ 1,205 ರೈತರ 775 ಎಕರೆ
* ಅರಳಾಳುಸಂದ್ರ ಗ್ರಾಮದ 2,087 ರೈತರ 1,460 ಎಕರೆ
* ಹೊಸೂರು ಗ್ರಾಮದ 2,995 ರೈತರ 2,390 ಎಕರೆ
