ಬೆಂಗಳೂರು: ಕರ್ನಾಟಕ, ದೆಹಲಿ, ಪಂಜಾಬ್ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಹಿನ್ನೆಲೆ ರಾಜ್ಯದಲ್ಲೂ ಫಾರ್ಮ್ (ನಮೂನೆ) ಹಿಂದಿರುಗಿಸಲು ಅವಧಿ ವಿಸ್ತರಿಸಿ ಚುನಾವಣಾ ಆಯೋಗ (Election Commission) ಆದೇಶ ಹೊರಡಿಸಿದೆ.
ಈ ತಿಂಗಳ ಅಂತ್ಯದ ವರೆಗೆ ಬಿಎಲ್‌ಒಗಳಿಗೆ (BLOs) ಎಸ್‌ಐಆರ್ ನಮೂನೆ ವಿಸ್ತರಣೆಗೆ ಸಮಯ ಇತ್ತು. ಇದೀಗ ಆಗಸ್ಟ್ 8 ರ ಅವಧಿ ವಿಸ್ತರಿಸಲಾಗಿದೆ. ಬಿಎಲ್‌ಒಗಳು ಮನೆ ಮನೆಗೆ ತೆರಳಿ ನಮೂನೆ ಸಂಗ್ರಹಕ್ಕೆ ಆಗಸ್ಟ್ 8ರ ವರೆಗೆ ಅವಕಾಶ ನೀಡಿ ಚುನಾವಣಾ ಆಯೋಗ ಆದೇಶಿಸಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ – ಮೋದಿಗೆ ಪತ್ರ ಬರೆದು ಸಿಎಂ ಡಿಕೆಶಿ ಮನವಿ

ಇನ್ನೂ ರಾಜ್ಯದಲ್ಲಿ ಮತದಾರರ ಪಟ್ಟಿ (Voters List) ವಿಶೇಷ ತೀವ್ರ ಪರಿಷ್ಕರಣೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಚುನಾವಣಾ ಆಯೋಗ ಮತ್ತಷ್ಟು ವೇಗ ನೀಡಿದೆ. ಈಗಾಗಲೇ 5.27 ಕೋಟಿಗೂ ಹೆಚ್ಚು ಎನ್ಯೂಮರೇಷನ್ ಫಾರ್ಮ್‌ಗಳನ್ನ ವಿತರಿಸಲಾಗಿದ್ದು, 13 ಜಿಲ್ಲೆಗಳಲ್ಲಿ ಶೇ.100ರಷ್ಟು ವಿತರಣೆ ಪೂರ್ಣಗೊಂಡಿದೆ. ವಾರಾಂತ್ಯದಲ್ಲೂ ವಿಶೇಷ ಅಭಿಯಾನ ನಡೆಸುವುದಾಗಿ ತಿಳಿಸಿದರು.
ಮತದಾರರ ಗಣತಿ ನಮೂನೆ ವಿತರಣೆ ರಾಜ್ಯಾದ್ಯಂತ ಭರದಿಂದ ಸಾಗುತ್ತಿದ್ದು, ಇಲ್ಲಿತನಕ 5 ಕೋಟಿ 27 ಲಕ್ಷ 15 ಸಾವಿರ 809 ಎನ್ಯೂಮರೇಷನ್ ಫಾರ್ಮ್‌ಗಳನ್ನ ವಿತರಿಸಲಾಗಿದೆ. ಈಗಾಗಲೇ 1 ಕೋಟಿ 99 ಲಕ್ಷ 51 ಸಾವಿರ 635 ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಸುಮಾರು ಶೇ.40 ರಷ್ಟು ಡಿಜಿಟಲೀಕರಣ ನಡೆದಿದೆ ಎಂದರು. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ – ಜು.20ರೊಳಗೆ ಸಿದ್ಧವಾಗುತ್ತಾ ಫೈನಲ್ ಲಿಸ್ಟ್? ಆಯ್ಕೆಯಲ್ಲಿ `ಹೈ’ ಟ್ವಿಸ್ಟ್!

ಇನ್ನೂ ಯಾದಗಿರಿ, ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಹಾವೇರಿ, ವಿಜಯನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಶೇ.100ರಷ್ಟು ಫಾರ್ಮ್ ವಿತರಣೆ ಪೂರ್ಣಗೊಂಡಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ 1 ಕೋಟಿ 3 ಲಕ್ಷ 88 ಸಾವಿರ 363 ಮತದಾರರ ಪೈಕಿ 81 ಲಕ್ಷ 30 ಸಾವಿರ 826 ಮಂದಿಗೆ ಎನ್ಯೂಮರೇಷನ್ ಫಾರ್ಮ್ ವಿತರಿಸಲಾಗಿದೆ. ಡಿಜಿಟಲೀಕರಣದ ವೇಗ ಹಾಗೂ ಗುಣಮಟ್ಟ ಹೆಚ್ಚಿಸಲು ಪ್ರತಿಯೊಂದು ಜಿಲ್ಲೆಗೂ ಜಂಟಿ ಮುಖ್ಯ ಚುನಾವಣಾಧಿಕಾರಿಗಳನ್ನು ಕಳುಹಿಸಲಾಗುತ್ತದೆ ಎಂದು ವಿವರಿಸಿದರು.
ಉದ್ಯೋಗ, ವ್ಯವಹಾರ ಕಾರಣಗಳಿಂದ ವಾರದ ದಿನಗಳಲ್ಲಿ ಮನೆಗಳಲ್ಲಿ ಲಭ್ಯವಿರದ ಮತದಾರರ ಅನುಕೂಲಕ್ಕಾಗಿ ಶನಿವಾರ ಹಾಗೂ ಭಾನುವಾರ ರಾಜ್ಯಾದ್ಯಂತ ವಿಶೇಷ ಕ್ಯಾಂಪೇನ್ ಡೇ ನಡೆಸಲಾಗುತ್ತದೆ. ನಗರ ಪ್ರದೇಶಗಳಲ್ಲೂ ಇದೇ ಮಾದರಿಯ ವಿಶೇಷ ಅಭಿಯಾನ ನಡೆಯಲಿದೆ ಎಂದರು.
