ಬೆಂಗಳೂರು: ಮೈ. ಚ. ಜಯದೇವ ಅವರು ವಿರಚಿತ ‘ಅವಿಶ್ರಾಂತ ಧ್ಯೇಯಜೀವಿ‘ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಾಳೆ (ಮೇ 14) ಸಂಜೆ ನಡೆಯಲಿದೆ.
ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯ ಪ್ರಚಾರಕರು, ಸಂಘಟನೆಯ ರೂವಾರಿ ಮತ್ತು ಕರ್ನಾಟಕದಲ್ಲಿ ಸಂಘದ ತಳಹದಿ ಬಲಪಡಿಸಿದ ಶಿಸ್ತಿನ ಸಿಪಾಯಿ ಮೈ. ಚ. ಜಯದೇವ (ಮೈಸೂರು ಚನ್ನಬಸಪ್ಪ ಜಯದೇವ) ಅವರ ಬದುಕು–ನೆನಪನ್ನು ತೆರೆದಿಡುವ ‘ಅವಿಶ್ರಾಂತ ಧ್ಯೇಯಜೀವಿ‘ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ (ಮೇ 14) ಸಂಜೆ 6.30ಕ್ಕೆ ಸರ್ ಪುಟ್ಟಣ್ಣಚೆಟ್ಟಿ ಪುರಭವನ (ಟೌನ್‌ಹಾಲ್) ಬೆಂಗಳೂರಿನಲ್ಲಿ ನಡೆಯಲಿದೆ. ಇದನ್ನೂ ಓದಿ: ನೀಟ್ ಪರೀಕ್ಷೆ ಪೇಪರ್ ಲೀಕ್ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು: ಮಧು ಬಂಗಾರಪ್ಪ
ಈ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಶ್ರೀ ಕ್ಷೇತ್ರ ಸುತ್ತೂರು ಇಲ್ಲಿನ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಪುಸ್ತಕ ಲೋಕಾರ್ಪಣೆ ಮಾಡಿ, ದಿವ್ಯಸಾನಿಧ್ಯ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾನ್ಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಲೇಖಕರಾದ ಡಾ. ಬಾಬು ಕೃಷ್ಣಮೂರ್ತಿ, ಶ್ರೀ ಬೇಳೂರು ಸುದರ್ಶನ ಹಾಗೂ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಎಂ. ಪಿ. ಕುಮಾರ್ ಅವರ ಉಪಸ್ಥಿತರಿರಲಿದ್ದಾರೆ.
ಮೈ.ಚ. ಜಯದೇವ ಅವರ ಕುರಿತು:
ಶ್ರೀ ಮೈ.ಚ. ಜಯದೇವ ಅವರು ರಾಷ್ಟ್ರೋತ್ಥಾನ ಪರಿಷತ್ತನ್ನು ಆರಂಭದ ದಿನಗಳಿಂದಲೂ (1965) ಕಟ್ಟಿ ಬೆಳೆಸಿದವರು. ವ್ಯವಸ್ಥಾಕುಶಲರೂ, ಅಸಾಮಾನ್ಯ ದಕ್ಷರೂ, ಸಂಘಟನೆಯ ರೂವಾರಿಗಳೂ ಆಗಿ ಒಂದು ಜೀವನ, ಒಂದು ಧೈಯಾನುಸಂಧಾನ ಎಂಬ ಸೂತ್ರವನ್ನು ಜೀವನದುದ್ದಕ್ಕೂ ಪಾಲಿಸುತ್ತ ತಮ್ಮ ದೂರದರ್ಶಿ ಚಿಂತನೆ, ರಾಷ್ಟ್ರನಿಷ್ಠ ಕರ್ತವ್ಯಪ್ರಜ್ಞೆ, ಕಠಿಣ ಪರಿಶ್ರಮದ ಮೂಲಕ ಸ್ವಸ್ಥ ಸಮಾಜ ನಿರ್ಮಾಣದ ವಿವಿಧ ಕ್ಷೇತ್ರಗಳಲ್ಲಿ ರಾಷ್ಟೋತ್ಥಾನ ಪರಿಷತ್ತು ಸ್ಥಿರ ಹೆಜ್ಜೆಗಳನ್ನಿಟ್ಟು ಮುನ್ನಡೆಯಲು ಕಾರಣೀಭೂತರಾದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾರ್ಯವಾಹ, ಪ್ರಾಂತ ಕಾರ್ಯವಾಹ, ಕ್ಷೇತ್ರೀಯ ಕಾರ್ಯವಾಹ, ಕ್ಷೇತ್ರೀಯ ಪ್ರಚಾರಕ, ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯರು – ಹೀಗೆ 5 ದಶಕಗಳಿಗೂ ಹೆಚ್ಚು ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದವರು. ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಅಮೃತ ಶಿಶುನಿವಾಸ, ಅಬಲಾಶ್ರಮ – ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ನಿಂತವರು. ಈ ಎಲ್ಲ ಸಂಸ್ಥೆಗಳು ಮೂಲೋದ್ದೇಶದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡುವುದರ ಜೊತೆಜೊತೆಗೆ ಅಗತ್ಯ ವ್ಯವಸ್ಥೆ-ವ್ಯಕ್ತಿ ಜೋಡಣೆಯಂತಹ ಕೆಲಸಗಳನ್ನೂ ತೆರೆಯ ಹಿಂದೆ ನಿಂತು ಮಾಡಿದವರು ಮೈ.ಚ. ಜಯದೇವ್.ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್‌ನ್ಯೂಸ್| ಎ ಖಾತೆಗೆ ಭರ್ಜರಿ ಡಿಸ್ಕೌಂಟ್ ಆಫರ್ – ಗೈಡೆನ್ಸ್ ವ್ಯಾಲ್ಯೂ ಭಾರೀ ಇಳಿಕೆ

