ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಪ್ತರ ನಡುವಿನ ಮುನಿಸು ಮುಂದುವರಿದಂತೆ ಕಾಣುತ್ತಿದ್ದು, ಸಿದ್ದರಾಮಯ್ಯ(Siddaramaiah) ಅವರ ನೇತೃತ್ವದಲ್ಲಿ ನಡೆದ ಮಹತ್ವದ ಪೂರ್ವಭಾವಿ ಸಭೆಗೆ ಅವರ ಪರಮಾಪ್ತ ಸಚಿವ ಡಾ. ಹೆಚ್.ಸಿ. ಮಹದೇವಪ್ಪ(Mahadevappa) ಅವರು ಗೈರಾಗುವ ಮೂಲಕ ಮತ್ತೊಮ್ಮೆ ಅಂತರ ಕಾಯ್ದುಕೊಂಡಿದ್ದಾರೆ.
ನವೆಂಬರ್ 26ರಂದು ಮೈಸೂರಿನಲ್ಲಿ(Mysuru) ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ದಿನಾಚರಣೆ (Constitution Day) ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಲು ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಬುಧವಾರ(ನ.18) ರಾತ್ರಿ ಕಾಂಗ್ರೆಸ್ ನಾಯಕರ ಸಭೆ ಆಯೋಜಿಸಲಾಗಿತ್ತು.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ಎನ್. ಚೆಲುವರಾಯಸ್ವಾಮಿ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಕೆ.ಎಂ. ಶಿವಲಿಂಗೇಗೌಡ, ಗಣಿಗ ರವಿ, ರಮೇಶ್ ಬಂಡಿಸಿಡ್ಡೆಗೌಡ, ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಶಿವಕುಮಾರ್ ಸೇರಿದಂತೆ ಹಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗವಹಿಸಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.
ಆದರೆ, ಮೈಸೂರು ಜಿಲ್ಲೆಯವರೇ ಆದ ಹಾಗೂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಈ ಪೂರ್ವ ಸಿದ್ಧತಾ ಸಭೆಗೆ ಗೈರಾಗಿದ್ದಾರೆ. ಸಿದ್ದರಾಮಯ್ಯ ಅವರಿಂದ ಮಹದೇವಪ್ಪ ಅವರು ಮತ್ತೆ ಅಂತರ ಕಾಯ್ದುಕೊಂಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
