– ಮನೆ ಬಾಗಿಲಿಗೆ ಆಸ್ತಿ ದಾಖಲೆ
– ಸರ್ಕಾರಿಂದ ನಮ್ಮ ಖಾತೆ ನಮ್ಮ ಹಕ್ಕು ಅಭಿಯಾನ
– 100 ದಿನಗಳ ವರೆಗೆ ಮಾತ್ರ ಆಫರ್
ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ‘ನಮ್ಮ ಖಾತೆ ನಮ್ಮ ಹಕ್ಕು’ ಅಭಿಯಾನದ ಮೂಲಕ ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದೆ.
ಸದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ, ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್, ಬೆಂಗಳೂರು (Bengaluru) ನಗರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ನಾಗರಿಕ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಒಟ್ಟು 23 ಲಕ್ಷ ಆಸ್ತಿಗಳಿದ್ದು, ಇವುಗಳ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಪಾರದರ್ಶಕತೆ ತರಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಬಿಡಿಎ ಅಧ್ಯಕ್ಷ ಹ್ಯಾರಿಸ್, ಸಚಿವ ಕೆ.ಜೆ ಜಾರ್ಜ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಆಡಳಿತಾಧಿಕಾರಿ ಮಹೇಶ್ವರ್ ರಾವ್ ಪಾಲ್ಗೊಂಡಿದ್ದರು.
ಮನೆ ಬಾಗಿಲಿಗೆ ಆಸ್ತಿ ದಾಖಲೆ
ಸರ್ಕಾರವು ಇದನ್ನು ಆರನೇ ಗ್ಯಾರಂಟಿ ಎಂದು ಕರೆದಿದ್ದು, ಪ್ರತಿಯೊಬ್ಬ ಆಸ್ತಿ ಮಾಲೀಕರಿಗೆ ಅವರ ಹಕ್ಕಿನ ದಾಖಲೆಗಳನ್ನು ತಲುಪಿಸುವ ಗುರಿ ಹೊಂದಿದೆ. ಪ್ರತಿಯೊಂದು ಆಸ್ತಿಯನ್ನು ಜಿಪಿಎಸ್ ಮೂಲಕ ಮ್ಯಾಪಿಂಗ್ ಮಾಡಿ, ಸೈಟ್ ಲೊಕೇಶನ್ ಮತ್ತು ಮಾಲೀಕರ ಫೋಟೋ ಇರುವ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ.
ನಕಲಿ ದಾಖಲೆ ಸೃಷ್ಟಿ ತಡೆಯಲು ಈಗಾಗಲೇ 7 ಸಾವಿರಕ್ಕೂ ಹೆಚ್ಚು ಪ್ರಮುಖ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ ಮೇ 16ರಿಂದ ಈ ಅಭಿಯಾನ ಆರಂಭವಾಗಲಿದ್ದು, ಅಧಿಕಾರಿಗಳು ಮತ್ತು ಗ್ಯಾರಂಟಿ ಯೋಜನೆಯ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಫೈಲ್ ತಲುಪಿಸಲಿದ್ದಾರೆ.
100 ದಿನಗಳ ಆಫರ್
ಬೆಂಗಳೂರಿನಲ್ಲಿ ಪ್ರಸ್ತುತ 16 ಲಕ್ಷ ಎ-ಖಾತೆ ಹಾಗೂ 7 ಲಕ್ಷ ಬಿ-ಖಾತೆಗಳಿವೆ. ಬಿ-ಖಾತೆ ಹೊಂದಿರುವವರು ತಮ್ಮ ಆಸ್ತಿಯನ್ನು ಎ-ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಲು ಸರ್ಕಾರ ಭರ್ಜರಿ ರಿಯಾಯಿತಿ ಘೋಷಿಸಿದೆ.
ಈ ಹಿಂದೆ ಬಿ-ಖಾತೆಯಿಂದ ಎ-ಖಾತೆ ಮಾಡಲು 5% ಗೈಡೆನ್ಸ್ ವ್ಯಾಲ್ಯೂ ಪಾವತಿಸಬೇಕಿತ್ತು. ಈಗ ಈ ಶುಲ್ಕವನ್ನು ಕೇವಲ 2% ಕ್ಕೆ ಇಳಿಸಲಾಗಿದೆ. ಇದರಿಂದಾಗಿ 5 ಲಕ್ಷ ರೂ.ಕಟ್ಟಬೇಕಿದ್ದ ಜಾಗದಲ್ಲಿ ಈಗ ಕೇವಲ 2 ಲಕ್ಷ ರೂಪಾಯಿ ಪಾವತಿಸಿದರೆ ಸಾಕು. ಈ ರಿಯಾಯಿತಿ ಕೇವಲ 100 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ. ಈ ಅವಧಿಯ ನಂತರ ಶುಲ್ಕವು ಪುನಃ 5% ಕ್ಕೆ ಏರಿಕೆಯಾಗಲಿದೆ. ಜೂನ್ 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೂರು ತಿಂಗಳ ಕಾಲಾವಕಾಶವಿರುತ್ತದೆ.
ಈ ಹಿಂದೆ ಟೌನ್ ಪ್ಲಾನಿಂಗ್ ಕಾನೂನು ಉಲ್ಲಂಘನೆಗೆ ಕೇವಲ 5% ರಿಯಾಯಿತಿ ಇತ್ತು, ಈಗ ಅದನ್ನು 15% ವರೆಗೆ ವಿಸ್ತರಿಸಲಾಗಿದೆ. ಒನ್ ಟೈಮ್ ಸೆಟಲ್‌ಮೆಂಟ್ (OTS) ಸೌಲಭ್ಯವು ಬಿಡಿಎ ಜಾಗಗಳಿಗೂ ಅನ್ವಯವಾಗಲಿದೆ.
ಹಳೆಯ ಮನೆಗಳಿಗೆ ಲಾಭ:
15 ವರ್ಷಗಳ ಹಿಂದೆ ಮನೆ ಕಟ್ಟಿಕೊಂಡವರಿಗೆ ಗೈಡೆನ್ಸ್ ವ್ಯಾಲ್ಯೂನಲ್ಲಿ ಭಾರಿ ರಿಯಾಯಿತಿ ನೀಡಲಾಗಿದೆ. ಆಸ್ತಿ ವಿಸ್ತೀರ್ಣಕ್ಕೆ ಅನುಗುಣವಾಗಿ (1200 ರಿಂದ 1600 ಚ.ಅಡಿ) 10% ರಿಂದ 50% ವರೆಗೆ ಇದ್ದ ಶುಲ್ಕಗಳಲ್ಲಿ ಗಮನಾರ್ಹ ಕಡಿತ ಮಾಡಲಾಗಿದೆ.
ದಾಖಲೆ ಪಡೆಯಲು ಸಾರ್ವಜನಿಕರು ಯಾರಿಗೂ ಒಂದು ರೂಪಾಯಿ ಲಂಚ ನೀಡುವ ಅಗತ್ಯವಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಕಡೆಗಳಲ್ಲಿ (ಶಾಲೆ, ಸರ್ಕಾರಿ ಜಾಗ) ಒಟ್ಟು 50 ಜಾಗಗಗಳಲ್ಲಿ ವಿಶೇಷ ಕಚೇರಿಗಳನ್ನು ತೆರೆಯಲಾಗುತ್ತದೆ. ಈ ಜಾಗಗಳು ಯಾವುದು ಎನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ.
ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಾಲೆಗಳು ಸೇರಿದಂತೆ ಗುರುತಿಸಲಾದ 10 ಸಾರ್ವಜನಿಕ ಸ್ಥಳಗಳಲ್ಲಿ ಅಧಿಕಾರಿಗಳು ಲಭ್ಯವಿರುತ್ತಾರೆ. ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದ್ದರೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ ದಾಖಲೆ ಸರಿಪಡಿಸಿಕೊಡಲಿದ್ದಾರೆ.
ಯಾವ ದಿನ ಏನು?
ಮೇ 16: ಮನೆ ಮನೆಗೆ ದಾಖಲೆ ವಿತರಣೆ ಮತ್ತು ಜಾಗೃತಿ ಆರಂಭ.
ಜೂನ್ 15: ಬಿ-ಖಾತೆ ಬದಲಾವಣೆ ಅರ್ಜಿ ಪ್ರಕ್ರಿಯೆ ಆರಂಭ.

