ಬೆಂಗಳೂರು: ಬಿಎಂಟಿಸಿ ಬಸ್‌ನ ಬಿಡಿ ಭಾಗಗಳ ಖರೀದಿಯಲ್ಲಿ (Spare Parts) ಅಕ್ರಮವಾಗಿದ್ದು ತನಿಖೆಗೆ ಸಮಿತಿ ರಚನೆ ಮಾಡಿರೋದಾಗಿ ಸಾರಿಗೆ ಸಚಿವ ಬೈರತಿ ಸುರೇಶ್ (Byrathi Suresh) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಡಾ.ಗೋವಿಂದ್ ರಾಜ್ ಪ್ರಶ್ನೆ ಕೇಳಿದ್ರು. ಬಿಎಂಟಿಸಿ ಬಸ್ ಬಿಡಿ ಭಾಗ ಖರೀದಿಯಲ್ಲಿ ಅಕ್ರಮ ಆಗಿದೆ. ಎಷ್ಟು ಹಣ ಅಕ್ರಮ ಆಗಿದೆ. ಅಕ್ರಮ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆಯಾ? ಅಕ್ರಮದಲ್ಲಿ ಭಾಗಿಯಾದವರ ಮೇಲೆ ಕ್ರಮ ಏನು? ನಕಲಿ ಬಿಲ್ ಸೃಷ್ಟಿ ಮಾಡಿ ಅಕ್ರಮ ಮಾಡಿರೋ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗಿದೆಯಾ? ಅಂತ ಪ್ರಶ್ನೆ ಮಾಡಿದ್ರು.

ಇದಕ್ಕೆ ಸಚಿವ ಭೈರತಿ ಸುರೇಶ್ ಉತ್ತರ ನೀಡಿ, ಅಕ್ರಮದ ಬಗ್ಗೆ ಮಾಹಿತಿ ಸ್ವೀಕಾರ ಬೆನ್ನಲ್ಲೇ ಮಾರ್ಚ್ 27 ರಂದು 5 ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಕೊಟ್ಟ ಪ್ರಾಥಮಿಕ ವರದಿ ಅನ್ವಯ 8 ಜನ ಅಧಿಕಾರಿ, ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ. ತನಿಖಾ ಸಮಿತಿ ಅಕ್ಟೋಬರ್ ಅಂತ್ಯದವರೆಗೆ ಅಂತಿಮ ವರದಿ ಕೊಡಲಿದೆ. ವರದಿ ಬಳಿಕ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ತಿಳಿಸಿದರು.

