ಬಿಷ್ಕೆಕ್: ಭಯೋತ್ಪಾದನೆಯ (Terrorism) ವಿರುದ್ಧ ಕಠಿಣ ನಿಲುವು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಭಯೋತ್ಪಾದನೆಯ ಸಂಪೂರ್ಣ ವ್ಯವಸ್ಥೆಯನ್ನೇ ಕಿತ್ತೊಗೆಯುವ ಅಗತ್ಯವಿದೆ. ಭಯೋತ್ಪಾದನೆಯಂತಹ ಗಂಭೀರ ವಿಚಾರದಲ್ಲಿ ಯಾವುದೇ ರೀತಿಯ ದ್ವಂದ್ವ ನೀತಿಗೆ ಅವಕಾಶವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
26ನೇ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಮಂಗಳವಾರ ನಡೆದ ದುಂಡುಮೇಜಿನ ಚರ್ಚೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯನ್ನು ನೀತಿಯ ಸಾಧನವಾಗಿ ಬಳಸುವ ಮತ್ತು ಉಗ್ರರಿಗೆ ಆಶ್ರಯ ಹಾಗೂ ಬೆಂಬಲ ನೀಡುವ ರಾಷ್ಟ್ರಗಳ ವಿರುದ್ಧ ಕಠಿಣ ಸಂದೇಶ ರವಾನಿಸಬೇಕು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಎದುರಲ್ಲೇ ಅಬ್ಬರಿಸಿದ್ದಾರೆ.
From the SCO Summit in Bishkek. pic.twitter.com/GDlPpVkSLR
— Narendra Modi (@narendramodi) September 1, 2026
ಇಂತಹ ಗಂಭೀರ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿಗೆ ಅವಕಾಶವಿಲ್ಲ ಎಂಬುದನ್ನ ನಾವು ಒಕ್ಕೊರಲಿನಿಂದ ಹೇಳಬೇಕು. ಭಯೋತ್ಪಾದನೆಯನ್ನ ನೀತಿಯ ಸಾಧನವಾಗಿ ಬಳಸುವ, ಭಯೋತ್ಪಾದಕರಿಗೆ ಆಶ್ರಯ ಮತ್ತು ಬೆಂಬಲ ನೀಡುವ ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ನೀಡಬೇಕು. ಭಯೋತ್ಪಾದನೆ ಎಂಬುದು ಯಾರೊಬ್ಬರಿಗೂ ತಂತ್ರಗಾರಿಕೆಯ ಅಸ್ತ್ರವಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಗುಡುಗಿದರು.
ಪ್ರಧಾನಿ ಮೋದಿ ಮತ್ತು ಶೆಹಬಾಜ್ ಷರೀಫ್ ಜೊತೆಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ, ಕಜಕಿಸ್ತಾನದ ಅಧ್ಯಕ್ಷ ಕಾಸಿಂ-ಜೊಮಾರ್ಟ್ ಟೋಕಾಯೆವ್, ಉಜ್ಬೇಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಹಾಗೂ ತಜಿಕಿಸ್ತಾನದ ಅಧ್ಯಕ್ಷ ಎಮೋಮಲಿ ರಹಮೋನ್ ಸಭೆಯಲ್ಲಿ ಉಪಸ್ಥಿತರಿದ್ದರು.
ನಾರ್ಕೋ-ಟೆರರಿಸಂ ವಿರುದ್ಧವೂ ಎಚ್ಚರಿಕೆ
ಮುಂದುವರಿದು ಮಾತನಾಡಿದ ಪ್ರಧಾನಿಗಳು, ಮಾದಕವಸ್ತುಗಳ ಕಳ್ಳಸಾಗಣೆಯು ಯುವಜನತೆ ಹಾಗೂ ಪ್ರಾದೇಶಿಕ ಭದ್ರತೆಗೆ ಹೆಚ್ಚುತ್ತಿರುವ ಅಪಾಯವಾಗಿದೆ. ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧದ ವಿರುದ್ಧ ಎಸ್‌ಸಿಒ ರಾಷ್ಟ್ರಗಳ ನಡುವೆ ಮತ್ತಷ್ಟು ಸಹಕಾರ ಅಗತ್ಯ ಎಂದು ಒತ್ತಿ ಹೇಳಿದರು.
ಮಾದಕವಸ್ತು ಕಳ್ಳಸಾಗಣೆ ಕೇವಲ ಅಪರಾಧವಲ್ಲ. ಇದು ನಮ್ಮ ಯುವ ಪೀಳಿಗೆಗೆ ಮತ್ತು ಪ್ರಾದೇಶಿಕ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ ಎಂದರಲ್ಲದೇ, ರಕ್ಷಣಾ ಬೆದರಿಕೆಗಳು, ಸಂಘಟಿತ ಅಪರಾಧ, ಮಾಹಿತಿ ಭದ್ರತೆ ಮತ್ತು ಮಾದಕವಸ್ತುಗಳಂತಹ ಸವಾಲುಗಳನ್ನು ಎದುರಿಸಲು ಎಸ್‌ಸಿಒ ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ ಕೇಂದ್ರಗಳನ್ನು ಪ್ರಧಾನಿ ಮೋದಿ ಸ್ವಾಗತಿಸಿದರು.

ಸಂಪರ್ಕ ವ್ಯವಸ್ಥೆ ಬಗ್ಗೆ ಭಾರತದ ನಿಲುವು
ಮಾರುಕಟ್ಟೆಗಳನ್ನು ಸಂಪರ್ಕಿಸುವುದು, ವ್ಯಾಪಾರವನ್ನು ಸುಗಮಗೊಳಿಸುವುದು ಮತ್ತು ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುವ ಎಲ್ಲ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ ಇಂತಹ ಸಂಪರ್ಕ ಯೋಜನೆಗಳು ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಅವರು ಒತ್ತಿ ಹೇಳಿದರು.
ಮಾರುಕಟ್ಟೆಗಳನ್ನು ಸಂಪರ್ಕಿಸುವ, ವ್ಯಾಪಾರವನ್ನು ಸುಗಮಗೊಳಿಸುವ ಮತ್ತು ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುವ ಎಲ್ಲ ಪ್ರಯತ್ನಗಳಿಗೆ ಭಾರತ ಬೆಂಬಲಿಸುತ್ತದೆ. ಆದರೆ ಈ ಪ್ರಯತ್ನಗಳು ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅಷ್ಟೇ ಮುಖ್ಯ. ಇದು ಎಸ್‌ಸಿಒ ಚಾರ್ಟರ್‌ನ ಮೂಲ ಆಶಯವೂ ಆಗಿದೆ ಎಂದಿದ್ದಾರೆ ಮೋದಿ.
