– ರಾಜ್ಯ ಡ್ರಗ್ ಪರೀಕ್ಷೆ ಪ್ರಯೋಗಾಲಯದಲ್ಲಿ 191 ಔಷಧಗಳ ಗುಣಮಟ್ಟ ಕಳಪೆ
ನವದೆಹಲಿ/ಬೆಂಗಳೂರು: ದೇಶದಲ್ಲಿ ಔಷಧಿಗಳ ಗುಣಮಟ್ಟದ ಕುರಿತು ಆತಂಕ ಮೂಡಿಸುವ ಮಾಹಿತಿಯೊಂದು ಹೊರಬಿದ್ದಿದೆ. ಆಗಸ್ಟ್ ತಿಂಗಳಲ್ಲಿ ನಡೆಸಲಾದ ಔಷಧಿ ಗುಣಮಟ್ಟ ಪರೀಕ್ಷೆಯಲ್ಲಿ 220 ಔಷಧಿ ಮಾದರಿಗಳು ನಿಗದಿತ ಗುಣಮಟ್ಟಕ್ಕೆ (Not of Standard Quality – NSQ) ಹೊಂದಿಕೆಯಾಗಿಲ್ಲ ಎಂದು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ (CDSCO) ತನ್ನ ವರದಿಯಲ್ಲಿ ತಿಳಿಸಿದೆ.
ಕೇಂದ್ರ ಹಾಗೂ ರಾಜ್ಯ ಮಟ್ಟದ ಡ್ರಗ್ ಟೆಸ್ಟಿಂಗ್ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಗಳ ಆಧಾರದ ಮೇಲೆ ಈ ವರದಿ ಸಿದ್ಧವಾಗಿದೆ. ಪರೀಕ್ಷೆಯಲ್ಲಿ 29 ಔಷಧಿ ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನ ಪೂರೈಸಿಲ್ಲ ಎಂದು ವರದಿಯಾಗಿದೆ.
ಇದರ ಜೊತೆಗೆ, ಪರೀಕ್ಷಿಸಲಾದ 191 ಔಷಧಿ ಮಾದರಿಗಳು NSQ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಔಷಧಿಗಳ ಗುಣಮಟ್ಟ ಪರೀಕ್ಷೆಯ ವೇಳೆ ಕೆಲವು ಪ್ರಕರಣಗಳಲ್ಲಿ ಬೇರೆ ಕಂಪನಿಯ ಬ್ರಾಂಡ್ ಹೆಸರನ್ನ ಬಳಸಿಕೊಂಡು ಔಷಧಿಗಳನ್ನು ತಯಾರಿಸಿರುವ ಅಂಶವೂ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ವರದಿಯಲ್ಲಿ ಏನಿದೆ?
2026ರ ಆಗಸ್ಟ್ ಅವಧಿಯಲ್ಲಿ ಕೇಂದ್ರ ಔಷಧ ಪ್ರಯೋಗಾಲಯಗಳು (Central Drugs Laboratories) 29 ಔಷಧ ಮಾದರಿಗಳು ಗುಣಮಟ್ಟ ಮಾನದಂಡ ಪೂರೈಸಿಲ್ಲ (NSQ) ಎಂಬುದನ್ನು ಗುರುತಿಸಿವೆ. ಇದೇ ವೇಳೆ, ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು (State Drugs Testing Laboratories) 191 ಔಷಧ ಮಾದರಿಗಳನ್ನು ನಿಗದಿತ ಗುಣಮಟ್ಟಕ್ಕೆ ಹೊಂದಿಕೆಯಾಗಿಲ್ಲ ಎಂಬುದನ್ನು ಪತ್ತೆ ಮಾಡಿವೆ.
ಔಷಧ ಮಾದರಿಯು ನಿಗದಿಪಡಿಸಲಾದ ಗುಣಮಟ್ಟದ ಮಾನದಂಡಗಳಲ್ಲಿನ 1 ಅಥವಾ ಮತ್ತೊಂದು ಪರೀಕ್ಷಾ ಮಾನದಂಡದಲ್ಲಿ ವಿಫಲವಾದಾಗ ಅದನ್ನ NSQ ಎಂದು ಗುರುತಿಸಲಾಗುತ್ತದೆ. ಈ ವೈಫಲ್ಯವು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ನಿರ್ದಿಷ್ಟ ಔಷಧ ಉತ್ಪನ್ನದ ನಿರ್ದಿಷ್ಟ ಬ್ಯಾಚ್‌ಗೆ ಮಾತ್ರ ಅನ್ವಯಿಸುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಬ್ಯಾಚ್‌ಗಳ ಅಥವಾ ಇತರೆ ಔಷಧ ಉತ್ಪನ್ನಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದಿದೆ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ.
ಇದಲ್ಲದೇ ಏನ್‌ಸಿಟಿ ದೆಹಲಿಯಿಂದ 01 ಔಷಧ ಮಾದರಿಯನ್ನ ನಕಲಿ (Spurious) ಔಷಧ ಎಂದು ಗುರುತಿಸಿದೆ. ಈ ಔಷಧವನ್ನು ಮತ್ತೊಂದು ಕಂಪನಿಯ ಮಾಲೀಕತ್ವದಲ್ಲಿರುವ ಬ್ರ್ಯಾಂಡ್ ಹೆಸರನ್ನ ಬಳಸಿಕೊಂಡು ಅನುಮತಿ ಇಲ್ಲದ ತಯಾರಕರು ತಯಾರಿಸಿರುವುದು ಕಂಡುಬಂದಿದೆ. ಈ ಪ್ರಕರಣದ ಕುರಿತು ಪ್ರಸ್ತುತ ತನಿಖೆ ನಡೆಯುತ್ತಿದ್ದು, ಸಂಬಂಧಿತ ಕಾಯ್ದೆ ಮತ್ತು ನಿಯಮಗಳ (Act & Rules) ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.
ಗುಣಮಟ್ಟ ಕಡಿಮೆ ಇರುವ ಮತ್ತು ನಕಲಿ ಔಷಧಿಗಳನ್ನು ಗುರುತಿಸಿ, ಅವು ಮಾರುಕಟ್ಟೆಗೆ ಬರದಂತೆ ತಡೆಯುವುದನ್ನ ಖಚಿತಪಡಿಸಿಕೊಳ್ಳಲು ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳ ಸಹಯೋಗದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.

