– ನಾವು ಮೂವರು ಯಾವತ್ತೊ ಒಂದಾಗಬೇಕಿತ್ತು ಎಂದ ತನ್ವೀರ್ ಸೇಠ್
– ಮೈಸೂರಿಗೆ ಇನ್ನೂ ಹೆಚ್ಚಿನ ಸ್ಥಾನ ಸಿಗಬೇಕಿತ್ತು: ಕೆ.ವೆಂಕಟೇಶ್
– ಶಾಸಕನಾಗಿಯೇ ಮುಖ್ಯಮಂತ್ರಿಯಾಗಬೇಕೆಂಬುದು ಏನು ಇಲ್ಲ: ಹೆಚ್.ಸಿ.ಮಹದೇವಪ್ಪ
– ಸಭೆ ನಡೆಸಿದ ನಾಯಕರ ಜೊತೆ ಚರ್ಚೆಗೆ ಮುಂದಾದ ಸಚಿವ ಯತೀಂದ್ರ
ಮೈಸೂರು: ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸಂಪುಟದಲ್ಲಿ ಸಚಿವ ಸ್ಥಾನ ವಂಚಿತರು ಮೈಸೂರಿನಲ್ಲಿ (Mysuru) ಪ್ರತ್ಯೇಕ ಸಭೆ ನಡೆಸಿದ್ದಾರೆ. ಮಾಜಿ ಸಚಿವರ ದಿಢೀರ್ ಸಭೆ ಕುತೂಹಲ ಮೂಡಿಸಿದೆ.
ಮಾಜಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ (H.C.Mahadevappa), ಕೆ.ವೆಂಕಟೇಶ್ (K.Venkatesh) ಮತ್ತು ತನ್ವೀರ್ ಸೇಠ್ (Tanveer Sait) ಸೇರಿಕೊಂಡು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸಭೆ ನಡೆಸಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಬಣ ಛಿದ್ರವಾಯ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಹೆಚ್.ಸಿ.ಮಹದೇವಪ್ಪ ಮತ್ತು ಕೆ.ವೆಂಕಟೇಶ್ ಇಬ್ಬರೂ ಸಿದ್ದರಾಮಯ್ಯ ಪರಮಾಪ್ತರು. ಇತ್ತ ಡಿ.ಕೆ.ಶಿವಕುಮಾರ್ ಜೊತೆ ಗುರುತಿಸಿಕೊಂಡವರು ತನ್ವೀರ್ ಸೇಠ್. ಇದನ್ನೂ ಓದಿ: ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಬೀಡಲು ಆದೇಶ – ಚರ್ಚೆ ಮಾಡಿ ತೀರ್ಮಾನ: ಸಿಎಂ
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್, ನಾವು ಮೂವರು ಯಾವತ್ತೊ ಒಂದಾಗಬೇಕಿತ್ತು. ಈಗ ಒಂದಾಗುವ ಕಾಲ ಬಂದಿದೆ. ನಾವು ಒಂದೇ ಪಕ್ಷದಲ್ಲಿದ್ದವರು, ಜೊತೆಯಲ್ಲಿ ಸಭೆಗಳನ್ನ ಮಾಡಿರಲಿಲ್ಲ. ಈಗ ಸಭೆ ಮಾಡಿದ್ದೇವೆ. ಈಗ ನಡೆದಿರುವ ಸಚಿವ ಸಂಪುಟದ ಬೆಳವಣಿಗೆ ಎಲ್ಲವೂ ಸರಿ ಇದೆ ಎಂದು ನಾವು ಒಪ್ಪಿಕೊಳ್ಳುವುದಿಲ್ಲ. ಎಲ್ಲವೂ ಸರಿ ಇದೆ ಎಂದು ಸಹ ಹೇಳುವುದಿಲ್ಲ. ಮೈಸೂರು ಭಾಗಕ್ಕೆ ಅನ್ಯಾಯವಾಗಿರುವುದು ಸತ್ಯ. ಅದು ಯಾರಿಂದ ಆಯ್ತು, ಹೇಗೆ ಆಯ್ತು ಎನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಾವು ಮೂವರು ಸಹ ಒಂದೊಂದು ಸಮುದಾಯದ ನಾಯಕರುಗಳು. ನಾವು ಸಭೆ ಮಾಡಿ ಇಲ್ಲಿಂದಲೇ ಸಂದೇಶ ರವಾನೆ ಮಾಡಿದ್ದೇವೆ. ಪಕ್ಷದ ನಾಯಕರ ಜೊತೆಯೂ ಈ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ನಾನು ಇಂತಹ ವ್ಯಕ್ತಿಯಿಂದ ಅನ್ಯಾಯವಾಯ್ತು ಎಂದು ಹೇಳುವುದಿಲ್ಲ. ಎಲ್ಲಿಂದ ಅನ್ಯಾಯ ಆಯ್ತು ಎಂಬುದನ್ನ ಪತ್ತೆ ಹಚ್ಚುತ್ತಿದ್ದೇವೆ ಎಂದರು.
ಶಾಸಕ ಕೆ.ವೆಂಕಟೇಶ್ ಮಾತನಾಡಿ, ಈ ಹಿಂದೆ ಸಿಎಂ ಇದ್ದರು, ಇಬ್ಬರು ಮಂತ್ರಿಗಳಿದ್ದೆವು. ಈಗ ಮುಖ್ಯಮಂತ್ರಿಗಳು ಇಲ್ಲ. ಸಚಿವ ಸ್ಥಾನ ಒಂದೇ ಅಂದರೆ ಅದರ ಅರ್ಥ ಏನು? ನಾವು ಇಲ್ಲಿ ಯಾರನ್ನು ದೂಷಿಸುತ್ತಿಲ್ಲ. ಮೈಸೂರಿಗೆ ಇನ್ನೂ ಹೆಚ್ಚಿನ ಸ್ಥಾನ ಸಿಗಬೇಕಿತ್ತು. ನಾನು ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿಲ್ಲ. ನಾವು ಸಿದ್ದರಾಮಯ್ಯನವರ ನಾಯಕತ್ವದಲ್ಲೇ ಬೆಳೆದವರು. ಅದರ ಬಗ್ಗೆ ಅನುಮಾನಗಳು ಬೇಡ. ಆದರೆ, ನಾನು ಈ ವಿಚಾರದಲ್ಲಿ ಅವರ ಜೊತೆ ಮಾತನಾಡಿಲ್ಲ. ಯತೀಂದ್ರಗೆ ಸಚಿವ ಸ್ಥಾನ ಕೊಟ್ಟಿರುವ ಬಗ್ಗೆ ನನಗೆ ಬೇಸರವಿಲ್ಲ. ಅದರೆ, ಒಂದೇ ಸ್ಥಾನ ಯಾಕೆ ಎಂಬುದೇ ನಮ್ಮ ಪ್ರಶ್ನೆ. ಇದು ಪಕ್ಷದ ವಿರುದ್ಧದ ಸಭೆಯಲ್ಲ. ಪಕ್ಷದಲ್ಲಿ ಉಂಟಾಗಿರುವ ಬೆಳವಣಿಗೆಗಳ ಬಗ್ಗೆ ಸಭೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವ ಖಾತೆ ನೀಡಿದರೂ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ: ಟಿ ರಘುಮೂರ್ತಿ
ಶಾಸಕನಾಗಿಯೇ ಮುಖ್ಯಮಂತ್ರಿಯಾಗಬೇಕೆಂಬುದು ಏನು ಇಲ್ಲ. ಆ ತರಹದ ಅರ್ಹತೆಗಳು ನಮ್ಮ ಬಳಿ ಇವೆ ಎಂದು ಜನರು ಗುರುತಿಸಿದ್ದಾರೆ. ಅಷ್ಟು ಸಾಕು ನನಗೆ. ನಾನು ಈಗ ಇವತ್ತಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಏನನ್ನೂ ಮಾತನಾಡುವುದಿಲ್ಲ ಎಂದು ಡಾ. ಹೆಚ್.ಸಿ.ಮಹದೇವಪ್ಪ ಹೇಳಿದರು.
ಯತೀಂದ್ರ ದಿಢೀರ್ ಭೇಟಿ
ಅತೃಪ್ತ ಶಾಸಕರ ಸಭೆ ವಿಚಾರ ತಿಳಿಯುತ್ತಿದ್ದಂತೆ ದಿಢೀರ್ ಸರ್ಕಾರಿ ಅಥಿತಿ ಗೃಹಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಭೇಟಿ ನೀಡಿದರು. ಮೂವರು ನಾಯಕರ ಜೊತೆ ಚರ್ಚೆಗೆ ಯತೀಂದ್ರ ಮುಂದಾದರು.

