ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಹಂದಿಜ್ವರದ ಸೋಂಕು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯಲ್ಲಿ ಆತಂಕ ಮೂಡಿಸಿದೆ. ಆಗಸ್ಟ್ 1ರಿಂದ ಈವರೆಗೆ ರಾಜ್ಯದಲ್ಲಿ 49 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. ಮೃತಪಟ್ಟ ಐವರೂ ಈಗಾಗಲೇ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ (Heatlh Department) ತಿಳಿಸಿದೆ.
ಸೋಂಕಿತರ ಸಂಖ್ಯೆ ಕೆಲವೇ ದಿನಗಳಲ್ಲಿ 31ರಿಂದ 49ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 34 ಮಂದಿ ಡೆಹ್ರಾಡೂನ್‌ನವರೇ ಆಗಿದ್ದಾರೆ. ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆಯನ್ನು ತೀವ್ರಗೊಳಿಸಿದ್ದು, ಎಲ್ಲ ಜಿಲ್ಲೆಗಳಲ್ಲೂ ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಲಾಗಿದೆ. ವೈದ್ಯರು ಹಾಗೂ ತಜ್ಞರು ಸೇರಿದಂತೆ ನಾಲ್ವರು ಸಿಬ್ಬಂದಿಯ ತಂಡಗಳು ಸೋಂಕು ಬಾಧಿತ ಪ್ರದೇಶಗಳಿಗೆ ತೆರಳಿ ಸೂಕ್ಷ್ಮ ಮಟ್ಟದಲ್ಲಿ ತಪಾಸಣೆ ನಡೆಸುತ್ತಿವೆ. ಇದನ್ನೂ ಓದಿ: ನೇಪಾಳದಲ್ಲಿ ರಣಭೀಕರ ಪ್ರವಾಹಕ್ಕೆ 8 ಬಲಿ – 32 ಪೊಲೀಸರು ಸೇರಿ ನೂರಾರು ಜನ ನಾಪತ್ತೆ
ಸೋಂಕಿತರ ಕಳೆದ 10ರಿಂದ 15 ದಿನಗಳ ಪ್ರಯಾಣದ ವಿವರ ಹಾಗೂ ಅವರ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನೂ ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದವರಿಗೂ ಎಚ್1ಎನ್1 ಪರೀಕ್ಷೆ ನಡೆಸಲಾಗುತ್ತಿದೆ.
ಈ ಮಧ್ಯೆ, ಮಧುಮೇಹ, ರಕ್ತದೊತ್ತಡ, ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಮೇಲೆ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಸಹ-ಅಸ್ವಸ್ಥತೆ ಹೊಂದಿರುವವರ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಎಚ್1ಎನ್1 ಸೋಂಕು ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆ ಹೆಚ್ಚಿದೆ. ಮೃತಪಟ್ಟ ಐವರೂ ಸಹ ಇಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎಂದು ಇಲಾಖೆ ತಿಳಿಸಿದೆ.ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಲೆನಾಡಿನ ರೈತರು ಆತಂಕ ಪಡುವ ಅಗತ್ಯವಿಲ್ಲ: ಮಧು ಬಂಗಾರಪ್ಪ
ಸೋಂಕಿತರು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕವಾಗಿರಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಉಸಿರಾಟದ ತೊಂದರೆ, ದಿಢೀರ್ ಜ್ವರ, ಚಳಿ, ಕೆಮ್ಮು, ಮೂಗು ಸೋರುವಿಕೆ, ಸ್ನಾಯು ನೋವು, ವಾಂತಿ ಅಥವಾ ತೀವ್ರ ಆಯಾಸ ಕಾಣಿಸಿಕೊಂಡರೆ ತಡ ಮಾಡದೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಆಸ್ಪತ್ರೆಗಳಿಗೆ ಈಗಾಗಲೇ ಎಚ್1ಎನ್1 ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿ ನೀಡಲಾಗಿದ್ದು, ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ಉತ್ತರಾಖಂಡ ಆರೋಗ್ಯ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.ಇದನ್ನೂ ಓದಿ: ಸಿಜೆಐಗೆ ಸರಣಿ ದೂರು -ರಾಜಸ್ಥಾನ ಹೈಕೋರ್ಟ್ ಹಂಗಾಮಿ ಸಿಜೆ ಬದಲಾವಣೆಗೆ ಸುಪ್ರೀಂ ನ್ಯಾ.ಸಂದೀಪ್ ಮೆಹ್ತಾ ಪತ್ರ
