ಬೆಂಗಳೂರು: ನವೆಂಬರ್ 1ರೊಳಗೆ ಪರವಾನಗಿ ಇಲ್ಲದ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಎಚ್ಚರಿಸಿದರು.
ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಸಿಎಂ ಡಿಕೆಶಿ ಮಾತನಾಡಿದರು. ಅಕ್ರಮ ಶಸ್ತ್ರಾಸ್ತ್ರಗಳನ್ನು ತಾವಾಗಿಯೇ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿ ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಹಾಗೂ ನಿಮ್ಮ ಪ್ರಾಣಿಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವುದಾದರೆ ಪರವಾನಗಿ ಪಡೆಯಿರಿ ಎಂದು ಸಲಹೆ ನೀಡಿದರು.
ಈ ಹಿಂದೆ ರಾಮಮೂರ್ತಿ ಎನ್ನುವ ಹಿರಿಯ ಅಧಿಕಾರಿ ಅನೇಕರು ಅಕ್ರಮ ನಾಡ ಬಂದೂಕುಗಳನ್ನು ಹೊಂದಿರುವ ಬಗ್ಗೆ ಹೇಳಿದ್ದರು. ಆಗ ನಾನು ನನ್ನ ಕ್ಷೇತ್ರದಲ್ಲಿ 300 ಕ್ಕೂ ಹೆಚ್ಚು ಬಂದೂಕುಗಳನ್ನು ಜನರಿಂದ ಸರ್ಕಾರಕ್ಕೆ ಒಪ್ಪಿಸಿದ್ದೆ. ಇನ್ನೂ ಹೆಚ್ಚಿನ ನಾಡ ಬಂದೂಕುಗಳು ಇರುವ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿದೆ ಎಂದರು. ಇದನ್ನೂ ಓದಿ: ಜಾರಕಿಹೊಳಿ ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ – ಡಿಕೆಶಿ
ಅರಣ್ಯ ಅಧಿಕಾರಿಗಳು ಅಭಿವೃದ್ಧಿ ಕೆಲಸಗಳ ಪರವಾಗಿ ನಿಲ್ಲಿ
ಜನಸಾಮಾನ್ಯರು ಪೊಲೀಸರನ್ನು ಒಪ್ಪಿಕೊಳ್ಳುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಒಪ್ಪುವುದಿಲ್ಲ. ಅರಣ್ಯ ಅಂಚಿನ ಜನರೊಂದಿಗೆ ಸ್ನೇಹದ ವಾತಾವರಣ ನಿರ್ಮಿಸಿಕೊಳ್ಳಿ. ಅರಣ್ಯ ಒತ್ತುವರಿ ಇಂದು ನೆನ್ನೆಯದಲ್ಲ. ಅದನ್ನು ಕಾನೂನು ಪ್ರಕಾರ ಅದನ್ನು ಬಗೆಹರಿಸೋಣ. ಜನರ ಮೇಲೆ ಒತ್ತಡ ಹೇರಬೇಡಿ. ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲವೊಂದು ವಿಚಾರದಲ್ಲಿ ಅತಿಯಾಗಿ ವರ್ತಿಸುತ್ತೀರಿ. ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಬರಬಾರದು. ಕೆಲವೊಂದು ವಿನಾಯಿತಿಗಳನ್ನು ನೀಡಬೇಕು ಎಂದು ತಿಳಿಸಿದರು.
ಈ ಭೂಮಿ ನಮಗೆ ಸೇರಿದ್ದಲ್ಲ. ಆದರೆ ಭೂಮಿ ಕಾಪಾಡಬೇಕಿರುವುದು ನಮ್ಮ ಕರ್ತವ್ಯ. ಎಷ್ಟೇ ದೊಡ್ಡವರಾದರೂ ಕೊನೆಗೆ ಭೂಮಿಗೆ ಸೇರುತ್ತೇವೆ. ಚಿತೆಯಲ್ಲಿ ಸುಡುವ ಮರವೂ ಭೂಮಿ ಮೇಲೆಯೇ ಬೆಳೆಯುತ್ತದೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಈ ಇಲಾಖೆಯಲ್ಲಿದ್ದಾರೆ. ಇವರಿಂದ ಅನೇಕ ಕಡೆ ಕಾಡು ಸುರಕ್ಷಿತವಾಗಿದೆ ಎಂದರು.
ತೇಗದ ಸಿರಿ ಯೋಜನೆ ಯಶಸ್ಸಿಗೆ ಶ್ರಮಿಸಿ
ತೇಗದ ಸಿರಿ ಯೋಜನೆ ಯಶಸ್ಸಿಗೆ ಅರಣ್ಯ ಅಧಿಕಾರಿಗಳು ಕೆಲಸ ಮಾಡಬೇಕು. ರೈತರಿಗೆ ಇದರಿಂದ ಹೆಚ್ಚಿನ ಲಾಭವಾಗುತ್ತದೆ. ಅರಣ್ಯ ಇಲಾಖೆಯ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಕಡೆ ಎಲ್ಲರೂ ಗಮನ ಹರಿಸಬೇಕು. ಕೆ.ಹೆಚ್.ರಂಗನಾಥ್ ಅವರು ಇಲಾಖೆ ಸಚಿವರಾಗಿದ್ದಾಗ ಶ್ರೀಗಂಧವನ್ನು ಖಾಸಗಿ ಜಮೀನಿನಲ್ಲೂ ಬೆಳೆಯಲು ಅವಕಾಶ ನೀಡಿದರು ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯನ್ನು ಮೂರು-ನಾಲ್ಕು ಸಲ ವಾಪಸ್ ಕಳುಹಿಸಿದೆವು. ನಮಗೊಂದು ನ್ಯಾಯ, ಕೇರಳಕ್ಕೆ ಒಂದು ನ್ಯಾಯ ನೀಡಲಾಗಿದೆ. ಇದರ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಲಾಗುತ್ತದೆ ಎಂದರು.
ಕಬಿನಿಗೆ ತೆರಳಿದಾಗ ಅಲ್ಲಿನ ವನ್ಯಜೀವಿ ಸಂಪತ್ತು ನೋಡಿ ಬೆರಗಾಗಿ ಹೋದೆ. ಕೆಲವೇ ಹೊತ್ತಿನಲ್ಲಿ 250 ಕ್ಕೂ ಹೆಚ್ಚು ಆನೆಗಳನ್ನು ನೋಡಿದೆ. ಅಷ್ಟು ಸಂಪದ್ಭರಿತವಾಗಿ ನಮ್ಮ ನಾಡಿನ ವನ್ಯಜೀವಿ ಸಂಪತ್ತಿದೆ. ಇಂದಿರಾಗಾಂಧಿ ಅವರು ಸಹ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದರು. ನಮ್ಮ ಊರಿನ ಬಳಿಯ ಶಿವಾಲ್ದಪ್ಪನ ಬೆಟ್ಟದಲ್ಲಿ ಬಿದಿರು ಹೆಚ್ಚು ಬೆಳೆಯುತ್ತಿದ್ದರು. ಅದನ್ನು ಬಳಸಿ ಜನ ಬಿದಿರು ಬುಟ್ಟಿಗಳನ್ನು ಹೆಣೆಯುತ್ತಿದ್ದರು. ಮನುಷ್ಯನಿಗೂ ಹಸಿರಿಗೂ ವಿಶೇಷ ಸಂಬಂಧವಿದೆ ಎಂದರು.
ಅರಣ್ಯ ಇಲಾಖೆಯ ಉನ್ನತ ಅಧಿಕಾರಿ ಕಚೇರಿಯಲ್ಲಿದ್ದ ಇದ್ದಂತಹ ದಂತವನ್ನೇ ಈ ಹಿಂದೆ ಕದ್ದಿದ್ದರು. ನಾನು ವಾಸವಿದ್ದ ಮನೆಯ ಬಳಿಯಿದ್ದ ಹಾಗೂ ಮಂತ್ರಿಗಳ ಮನೆಗಳ ಅಂಗಳದಲ್ಲಿದ್ದ ಗಂಧದ ಮರಗಳನ್ನೇ ಕದಿಯಲು ಬಂದಿದ್ದಂತಹ ಘಟನೆಗಳನ್ನು ನಾನು ನೋಡಿದ್ದೇನೆ ಎಂದು ತಿಳಿಸಿದರು.
ನಗರದಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಟ್ರೀ ಪಾರ್ಕ್ಗಳನ್ನು ನಿರ್ಮಾಣ ಮಾಡಿ ನಗರದ ಶ್ವಾಸಕೋಶವನ್ನು ಹಿಗ್ಗಿಸುವ ಕೆಲಸ ಮಾಡಲಾಗುವುದು. ಶಾಲಾ ಮಕ್ಕಳಿಂದ ಗಿಡ ನೆಡುವ ಕೆಲಸ ಮಾಡಿಸಲಾಗಿತ್ತು. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈ ಕಾರ್ಯಕ್ರಮದ ಬಗ್ಗೆ ಪಾಲಿಕೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದ್ದೇನೆ ಎಂದು ಹೇಳಿದರು.
ರಾಮಲಿಂಗಾರೆಡ್ಡಿ ಅವರಿಗೆ ನೀರಾವರಿ ಇಲಾಖೆ ನೀಡಲಾಗಿತ್ತು. ದೊಡ್ಡ ಇಲಾಖೆ ಸ್ವಚ್ಛವಾಗಿ ಕೆಲಸ ಮಾಡಬಹುದು ಎಂದು ಹೇಳಿದೆ. ಅನೇಕ ಅರ್ಚಕರು ರಾಮಲಿಂಗಾರೆಡ್ಡಿ ಅವರ ಬಳಿಯೇ ಮುಜರಾಯಿ ಇಲಾಖೆ ಇರಬೇಕು ಎಂದು ಮನವಿ ಮಾಡಿದರು. ಅಷ್ಟು ದಕ್ಷವಾಗಿ ಇಲಾಖೆ ನಿರ್ವಹಿಸಿದ್ದರು ಎಂದರು.
ನಾನು ಹಾಗೂ ರಾಮಲಿಂಗಾರೆಡ್ಡಿ ಅವರು 9 ಚುನಾವಣೆ ಎದುರಿಸಿದ್ದೇವೆ. ಒಂದೊಂದು ಬಾರಿ ಸೋತಿದ್ದೇವೆ. ಸತತ 8 ಬಾರಿ ಗೆದ್ದವರು ನಾವಿಬ್ಬರೇ. ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಅವರೂ ನಡುವೆ ಸೋತಿದ್ದಾರೆ ಎಂದರು.

