– ಸರಿಯಾದ ಅರ್ಜಿ ಸಲ್ಲಿಸಿದ ಬಳಿಕವಷ್ಟೇ ವಿಚಾರಣೆ
ನವದೆಹಲಿ: ಚುನಾವಣಾ ಅಕ್ರಮಗಳ ಆರೋಪ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಮತ್ತು ಹಲವು ವಿರೋಧ ಪಕ್ಷದ ನಾಯಕರು ಸಲ್ಲಿಸಿದ ಜಂಟಿ ಅರ್ಜಿಯಲ್ಲಿ 14 ದೋಷಗಳು ಇವೆ ಎಂದು ಸುಪ್ರೀಂ ಕೋರ್ಟ್(Supreme Court) ರಿಜಿಸ್ಟ್ರಿ ತಿಳಿಸಿದೆ.
ಸಾವಿರಾರು ಜನರು ಮಧ್ಯ ದೆಹಲಿಯಲ್ಲಿ ಜಮಾಯಿಸಿ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲೇ ರಾಹುಲ್ ಗಾಂಧಿ(Rahul Gandhi) ಅವರ ಅರ್ಜಿಯನ್ನು ಸಲ್ಲಿಸಲಾಯಿತು. ಇಂಡಿಯಾ (INDIA) ಬಣದ ನಾಯಕರು ಮೆರವಣಿಗೆ ನಡೆಸುತ್ತಿದ್ದಾಗ, ಅವರ ಕಾನೂನು ತಂಡವು ವೋಟ್ ಚೋರಿ ಆರೋಪದ ಮೇಲೆ ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಅರ್ಜಿ ಸಲ್ಲಿಸಿತು.
ಈ ಅರ್ಜಿಯನ್ನು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್, ಅಖಿಲೇಶ್ ಯಾದವ್, ತೇಜಸ್ವಿ ಪ್ರಸಾದ್ ಯಾದವ್, ಸುಳೆ, ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್, ಡಿ. ರಾಜಾ, ಜಾರ್ಖಂಡ್ ಮುಕ್ತಿ ಮೋರ್ಚಾದ ಮಹುವಾ ಮಾಜಿ, ಎಂ.ಎ. ಬೇಬಿ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಇ.ಟಿ. ಮೊಹಮ್ಮದ್ ಬಶೀರ್ ಸಲ್ಲಿಸಿದ್ದಾರೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ವಿರುದ್ಧ 2 ಕಿ.ಮೀ ಪಾದಯಾತ್ರೆ ನಡೆಸಿ ಹೈಡ್ರಾಮಾ; ತಳ್ಳಾಟ-ನೂಕಾಟದಲ್ಲಿ ಸಿಎಂ ಡಿಕೆಶಿ ಹೈರಾಣು
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಚುನಾವಣಾ ಅಕ್ರಮಗಳನ್ನು ಪ್ರಶ್ನಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಅರ್ಜಿಯಲ್ಲಿ ತಾಂತ್ರಿಕ ಲೋಪಗಳಿರುವುದರಿಂದ ಇವುಗಳನ್ನು ಸರಿಪಡಿಸುವವರೆಗೆ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ರಿಜಿಸ್ಟ್ರಿ ತಿಳಿಸಿದೆ.
ಪ್ರಮುಖ ದೋಷಗಳು ಏನು?
ಅರ್ಜಿಗೆ ಸಲ್ಲಿಸಬೇಕಾದ ಕೋರ್ಟ್ ಫೀಸ್‌ನಲ್ಲಿ 220 ರೂಪಾಯಿಗಳ ಕೊರತೆ ಇರುವುದನ್ನು ರಿಜಿಸ್ಟ್ರಿ ಎತ್ತಿ ತೋರಿಸಿದೆ.
ಅರ್ಜಿದಾರರಾಗಿರುವ 11 ನಾಯಕರಲ್ಲಿ 9 ನಾಯಕರ ಕಾನೂನು ಅಧಿಕೃತ ದಾಖಲೆಗಳು ಅಥವಾ ಸಹಿಗಳು ಇರಲಿಲ್ಲ
ಅರ್ಜಿದಾರರಲ್ಲಿ ಒಬ್ಬರಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿಯ ನಕಲು (ID Card) ಅಸ್ಪಷ್ಟವಾಗಿದೆ.
ಕೆಲವು ಅಗತ್ಯ ಪೂರಕ ದಾಖಲೆಗಳು ಇಲ್ಲದಿರುವುದು, ಪುಟಗಳು ಕಾಣೆಯಾಗಿರುವುದು ಹಾಗೂ ಕೆಲವು ಪುಟಗಳಲ್ಲಿನ ಅಕ್ಷರಗಳು ಅಸ್ಪಷ್ಟವಾಗಿದೆ.
ಕೆಲವು ದಾಖಲೆಗಳ ಕಲರ್ ಪ್ರತಿಗಳನ್ನು ಸಲ್ಲಿಸದೇ ಇರುವುದು ಮತ್ತು ಅತಿ ಸಣ್ಣ ಫಾಂಟ್ ಬಳಸಲಾಗಿದೆ.
ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ವೈಯಕ್ತಿಕವಾಗಿ ಚುನಾವಣಾ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಿರುವುದರ ಕುರಿತು ರಿಜಿಸ್ಟ್ರಿಯು ಸ್ಪಷ್ಟನೆ ಕೋರಿದೆ.
ನಿಯಮಗಳ ಪ್ರಕಾರ, ವಿರೋಧ ಪಕ್ಷದ ನಾಯಕರ ಕಾನೂನು ತಂಡವು ಈ ಎಲ್ಲಾ 14 ತಾಂತ್ರಿಕ ದೋಷಗಳನ್ನು ಸರಿಪಡಿಸಿ ಮರುಸಲ್ಲಿಸಿದ ನಂತರವಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ಅಧಿಕೃತ ವಿಚಾರಣೆ ಆರಂಭವಾಗಲಿದೆ.

