ಬಳ್ಳಾರಿ: ಮಾಜಿ ಸಚಿವ, ಶಾಸಕ ಗಾಲಿ ಜನಾರ್ದನ ರೆಡ್ಡಿ(Janardhana Reddy) ಹಾಗೂ ಅವರನ್ನು ಬೆಂಬಲಿಸುತ್ತಿರುವ ಬಿಜೆಪಿ (BJP) ನಾಯಕರ ವಿರುದ್ಧ ಗಣಿ ಹೋರಾಟಗಾರ ಟಪಾಲ್ ಗಣೇಶ್(Tapal Ganesh) ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೆಡ್ಡಿಯವರು ಸತ್ಯಹರಿಶ್ಚಂದ್ರನ ಮಗನಂತೆ ಮಾತನಾಡುತ್ತಿದ್ದು, ಬೇರೆಯವರ ರಾಜಕೀಯ ನೈತಿಕತೆಯನ್ನು ಪ್ರಶ್ನಿಸುವ ಯಾವುದೇ ಹಕ್ಕು ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 7 ವರ್ಷ ಶಿಕ್ಷೆಗೆ ಗುರಿಯಾಗಿದ್ದವರು ಇಂದು ನೈತಿಕತೆಯ ಪಾಠ ಮಾಡುತ್ತಿದ್ದಾರೆ. ಸಿಬಿಐ ವಿಶೇಷ ಕೋರ್ಟ್ ನೀಡಿರುವ ತೀರ್ಪನ್ನು ಬಿಜೆಪಿ ನಾಯಕರು ಮೊದಲು ಪೂರ್ಣವಾಗಿ ಓದಿಕೊಳ್ಳಲಿ. ಆಮೇಲೆ ಮಾತನಾಡಲಿ ಎಂದು ಸವಾಲು ಹಾಕಿದರು.
ಜನಾರ್ದನ ರೆಡ್ಡಿಗೆ ಕೋರ್ಟ್‌ನಿಂದ ಶಿಕ್ಷೆಗೆ ಮಧ್ಯಂತರ ತಡೆ ಸಿಕ್ಕಿದೆಯೇ ಹೊರತು, ಅವರು ಪ್ರಕರಣದಿಂದ ಸಂಪೂರ್ಣ ಖುಲಾಸೆಯಾಗಿಲ್ಲ. ತಪ್ಪು ಮಾಡಿಲ್ಲ ಎಂದಾದರೆ ಕೋರ್ಟ್ ಮುಂದೆ ಹೋಗಿ ‘ಶಿಕ್ಷೆ ಕಡಿಮೆ ಮಾಡಿ’ ಎಂದು ಜನಾರ್ದನ ರೆಡ್ಡಿ ಬೇಡಿಕೊಂಡಿದ್ದು ಯಾಕೆ ಎಂದು ಟಪಾಲ್ ಗಣೇಶ್ ಪ್ರಶ್ನಿಸಿದರು. ಇದನ್ನೂ ಓದಿ: ಸೆ.1 ರಿಂದ ನಮ್ಮ ಪಾದಯಾತ್ರೆ ಲಿಂಗಸುಗೂರಿನಿಂದ ಪ್ರಾರಂಭವಾಗಲಿದೆ: ಬಿವೈವಿ
