– ಪಾದಯಾತ್ರೆ ವಿಷಯದಲ್ಲಿ ಗೊಂದಲ ಇಲ್ಲ ಎಂದ ಬಿಜೆಪಿ ರಾಜ್ಯಾಧ್ಯಕ್ಷ
ಬೆಂಗಳೂರು: ಪಾದಯಾತ್ರೆ ಸಂಬಂಧ ನಾನೇ ಸ್ವತಃ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರ ಜೊತೆ ಮಾತನಾಡಿದ್ದೇನೆ. ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರು ಇದ್ದಾಗ ಒಟ್ಟಾಗಿ ಮಾತನಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಗೇಂದ್ರರು ರಾಜೀನಾಮೆ ಕೊಟ್ಟಿದ್ದು, ಮತ್ಯಾಕೆ ಪಾದಯಾತ್ರೆ ಎಂದು ನಮ್ಮ ಹಲವು ಮುಖಂಡರು ಸೇರಿ ಕೆಲವರಲ್ಲಿ ಗೊಂದಲ ಇತ್ತು. ನಾನು ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿದ್ದೇನೆ ಎಂದು ವಿವರಿಸಿದರು. ಅವರ ಅನುಮತಿಯನ್ನೂ ಪಡೆದುಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ನನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಬಿಜೆಪಿ: ಬಿಕೆ ಹರಿಪ್ರಸಾದ್
ಹತ್ತು ಹಲವು ವಿಷಯಗಳೊಂದಿಗೆ ಪಾದಯಾತ್ರೆ
ನಮ್ಮ ಪಾದಯಾತ್ರೆಗೆ ನಾಗೇಂದ್ರರ ರಾಜೀನಾಮೆ ಹಲವು ವಿಷಯಗಳಲ್ಲಿ ಒಂದು. 8-10 ವಿಷಯಗಳೊಂದಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಗೊಂದಲಕ್ಕೆ ಅವಕಾಶವೇ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮತ್ತೆ ಮಾತನಾಡುವೆ. ಅವರಲ್ಲಿ ತಪ್ಪು ಕಲ್ಪನೆ ಆಗಿರಬಹುದು. 10 ಹಲವು ವಿಚಾರ ಇಟ್ಟುಕೊಂಡು ಪಾದಯಾತ್ರೆ ನಡೆಯಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಈಗ ತನಿಖೆಗೆ ಹಾಜರಾಗಿದ್ದಾರೆ
ಕೆಪಿಎಸ್ಸಿಯ ಐಎಎಸ್ ಅಧಿಕಾರಿ ಬಂಧನ ಕುರಿತು ಪ್ರಶ್ನಿಸಿದಾಗ, ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಒಂದು ವಾರದ ಹಿಂದೆ ಉತ್ತರ ಪ್ರದೇಶದ ಅವರ ಗ್ರಾಮಕ್ಕೆ ತೆರಳಿದ್ದಾರೆ. ಅಲ್ಲಿ ಪೊಲೀಸರು ತೆರಳಿದ್ದು, ಅಲ್ಲಿಯೂ ಇರಲಿಲ್ಲ. ಈಗ ತನಿಖೆಗೆ ಹಾಜರಾಗಿದ್ದಾರೆ. ತನಿಖೆ ನಡೆದು ಸತ್ಯಾಸತ್ಯತೆ ಹೊರಕ್ಕೆ ಬರಲಿ. ಯಾರೇ ದೊಡ್ಡ ವ್ಯಕ್ತಿಗಳಿದ್ದರೂ ಸತ್ಯ ಬಹಿರಂಗ ಆಗಬೇಕು ಎಂದು ಒತ್ತಾಯಿಸಿದರು.
ರಾಜಣ್ಣ ರಾಜೀನಾಮೆ ಪಡೆದಾಗ ದಲಿತರೆಂದು ಅನಿಸಲಿಲ್ಲವೇ?
ದಲಿತರನ್ನು ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ ಎಂದು ಕಾಂಗ್ರೆಸ್ಸಿನ ಕೆಲವು ನಾಯಕರು ಮಾತನಾಡುತ್ತಿದ್ದರು. ಮಾನ್ಯ ಮುಖ್ಯಮಂತ್ರಿಗಳೇ, ಹಿಂದೆ ಕೆ.ಎನ್.ರಾಜಣ್ಣ ಅವರು ರಾಹುಲ್ ಗಾಂಧಿಯವರ ಮತಗಳ್ಳತನ ಸಂಬಂಧ ಪ್ರಶ್ನೆ ಎತ್ತಿದ್ದಕ್ಕಾಗಿ 24 ಗಂಟೆಯೊಳಗೆ ಅವರ ರಾಜೀನಾಮೆ ಪಡೆದಿರಲ್ಲವೇ? ಅವತ್ತು ರಾಜಣ್ಣ ಅವರು ದಲಿತರು, ಪರಿಶಿಷ್ಟ ಪಂಗಡದವರೆಂದು ಕಾಂಗ್ರೆಸ್ಸಿನವರಿಗೆ ಅನಿಸಲಿಲ್ಲವೇ? ದಲಿತರ ಹಣ ಕೊಳ್ಳೆ ಹೊಡೆಯುವಾಗ ಡಿ.ಕೆ.ಶಿವಕುಮಾರರಿಗೆ ಏನೂ ಅನಿಸಲಿಲ್ಲವೇ? ಎಸ್‍ಇಪಿ, ಟಿಎಸ್‍ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಾಗ, ಆ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಅನಿಸಲಿಲ್ಲವೇ ಎಂದು ಕೇಳಿದರು. ಇದನ್ನೂ ಓದಿ: KPSC ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ: ಹೆಚ್‌ಡಿಕೆ
ಆಗ ನಿಮಗೆ ದಲಿತರ ಕಾಳಜಿ ನೆನಪಾಗಲಿಲ್ಲವೇ?
ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದರು. ನಿಮ್ಮ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅದಕ್ಕೂ ಮಣ್ಣು ಹಾಕುವ ಕೆಲಸ ಮಾಡಿದ್ದೀರಲ್ಲವೇ? ಅವತ್ತು ನಿಮಗೆ ದಲಿತರ ಕಾಳಜಿ ನೆನಪಾಗಲಿಲ್ಲವೇ? ಸತ್ಯ ಏನೆಂದು ರಾಜ್ಯದ ಜನರಿಗೆ ಗೊತ್ತಿದೆ. ಶೋಷಿತ-ಪೀಡಿತ ಸಮುದಾಯಗಳಿಗೂ ಗೊತ್ತಿದೆ. ಸೆ.1ರಿಂದ ನಮ್ಮ ಪಾದಯಾತ್ರೆ ಲಿಂಗಸುಗೂರಿನಿಂದ ಪ್ರಾರಂಭವಾಗಲಿದೆ ಎಂದು ಹೇಳಿದರು.
ಸಮಾನಾಂತರ ಜಲಾಶಯ ನಿರ್ಮಿಸಿ
ದುರ್ಬಳಕೆ ಆದ ವಾಲ್ಮೀಕಿ ಅಭಿವೃದ್ಧಿ ನಿಗಮದ 185 ಕೋಟಿ ಹಣ ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು. ಕೊಪ್ಪಳ ಭಾಗದಲ್ಲಿ ಹೊಸಪೇಟೆ ಸಮಾನಾಂತರ ಜಲಾಶಯ ವಿಚಾರ ನೀರಿನಲ್ಲಿ ಹೋಮವಾಗಿದೆ. ಅದನ್ನು ಜಾರಿಗೊಳಿಸಬೇಕು. ನೀಡಿದ್ದ ಭರವಸೆಯಂತೆ 2.5 ಲಕ್ಷ ಯುವಜನರಿಗೆ ಉದ್ಯೋಗ ಕೊಡಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸರ್ಕಾರವು ಒಂದು ಉದ್ಯೋಗವನ್ನೂ ಸೃಷ್ಟಿಸಿಲ್ಲ. ಎಸ್‍ಇಪಿ, ಟಿಎಸ್‍ಪಿ, ಮೀಸಲಾತಿ, ಬರಗಾಲ, ಉತ್ತರ ಕರ್ನಾಟಕದ ಅಭಿವೃದ್ಧಿ ಆಗದೇ ಇರುವುದು- ಇವೆಲ್ಲ ವಿಚಾರಗಳನ್ನು ಮಂದಿಟ್ಟು ಬಿಜೆಪಿ ಸೆ.1ರಿಂದ ಪಾದಯಾತ್ರೆ ಶುರು ಮಾಡಲಿದೆ ಎಂದು ಪ್ರಕಟಿಸಿದರು.
