– ವಿಟಿಯು ಬಾಗಿಲು ತಟ್ಟಿದ ಸರ್ಕಾರಕ್ಕೆ ಆಡಳಿತ ಮಂಡಳಿಯಿಂದ ನಯವಾದ ನಿರಾಕರಣೆ
– ಸರ್ಕಾರ ಸಂಬಳ ನೀಡದಿದ್ರೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಕುಲಪತಿಗಳ ಪ್ಲ್ಯಾನ್
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಖಜಾನೆಯಲ್ಲಿರುವ 610 ಕೋಟಿ ರೂಪಾಯಿ ಹಣ ಇದೀಗ ರಾಜ್ಯ ಸರ್ಕಾರದ ಗಮನ ಸೆಳೆದಿದೆ. ವಿಟಿಯುಗೆ ಸೇರಿದ ಈ ಹಣದಲ್ಲಿ 250 ಕೋಟಿ ರೂಪಾಯಿಯನ್ನ ಬೆಂಗಳೂರಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (UVCE) ಅಭಿವೃದ್ಧಿಗೆ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ವಿಟಿಯುಗೆ ಸೇರಿದ 610 ಕೋಟಿ ರೂಪಾಯಿ ಹಣದ ಕುರಿತು ಶ್ವೇತಪತ್ರ ಹೊರಡಿಸುವಂತೆ ಬಿಜೆಪಿ ಆಗ್ರಹಿಸುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವೇ ವಿಟಿಯುಗೆ ಹಣ ನೀಡುವಂತೆ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಗಿದೆ.
250 ಕೋಟಿ ನೀಡುವಂತೆ ಸರ್ಕಾರದ ಪತ್ರ
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿದ್ದು, ಬೆಂಗಳೂರಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (UVCE) ಅಭಿವೃದ್ಧಿಗಾಗಿ 250 ಕೋಟಿ ರೂಪಾಯಿ ನೀಡುವಂತೆ ಮನವಿ ಮಾಡಿದ್ದಾರೆ. UVCE ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಸಂಸ್ಥೆಯಾಗಿದೆ. ವಿಟಿಯುಗೆ ಅನುದಾನ ನೀಡುವ ಮೂಲಕ ನೆರವಾಗಬೇಕಿದ್ದ ಸರ್ಕಾರವೇ ಇದೀಗ ವಿಟಿಯು ಬಳಿ ದೊಡ್ಡ ಮೊತ್ತದ ಹಣ ಕೇಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಹಲವು ವರ್ಷಗಳಿಂದ ವಿಟಿಯುಗೆ ಸಮರ್ಪಕ ಅನುದಾನ ನೀಡದ ಸರ್ಕಾರ, ಇದೀಗ ವಿಶ್ವವಿದ್ಯಾಲಯದ ಖಜಾನೆಯಲ್ಲಿರುವ ಹಣದಿಂದಲೇ 250 ಕೋಟಿ ರೂಪಾಯಿ ನೀಡುವಂತೆ ಕೇಳಿದೆ ಎಂಬುದು ವಿಟಿಯು ವಲಯದ ಚರ್ಚೆಯಾಗಿದೆ. ರಾಜ್ಯ ಸರ್ಕಾರದ ಮನವಿಯನ್ನು ವಿಟಿಯು ಆಡಳಿತ ಮಂಡಳಿ ನಯವಾಗಿ ತಿರಸ್ಕರಿಸಿದೆ.
ವಿಟಿಯುಗೆ 610 ಕೋಟಿ ಬಂದಿದ್ದು ಎಲ್ಲಿಂದ?
ವಿಟಿಯು ಖಜಾನೆಯಲ್ಲಿರುವ 610 ಕೋಟಿ ರೂಪಾಯಿ ಹಣದ ಹಿನ್ನೆಲೆ 2014ರ ಆದಾಯ ತೆರಿಗೆ ಇಲಾಖೆಯ ದಾಳಿಗೆ ಸಂಬಂಧಿಸಿದೆ. 2014ರಲ್ಲಿ ಆದಾಯ ತೆರಿಗೆ ಇಲಾಖೆ ವಿಟಿಯು ಮೇಲೆ ದಾಳಿ ನಡೆಸಿತ್ತು. ತೆರಿಗೆ ಪಾವತಿಸಿಲ್ಲ ಎಂಬ ಕಾರಣ ನೀಡಿ ಸುಮಾರು 400 ಕೋಟಿ ರೂಪಾಯಿಯನ್ನ ಐಟಿ ಇಲಾಖೆ ಜಪ್ತಿ ಮಾಡಿತ್ತು.
ಆ ಸಂದರ್ಭದಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅಗತ್ಯವಿದ್ದ 12-ಎ ನೋಂದಣಿಗೆ ಅರ್ಜಿ ಸಲ್ಲಿಸಿಲ್ಲ ಎಂಬುದು ಆದಾಯ ತೆರಿಗೆ ಇಲಾಖೆಯ ಪ್ರಮುಖ ಆಕ್ಷೇಪವಾಗಿತ್ತು. ಶಿಕ್ಷಣ ಸಂಸ್ಥೆಗಳು 12-ಎ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದರೆ ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ನಂತರ ವಿಟಿಯು ಪರವಾಗಿ ಅಗತ್ಯ ದಾಖಲೆಗಳನ್ನ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗಿದ್ದು, ಪ್ರಕರಣದ ಬಳಿಕ ಬಡ್ಡಿ ಸೇರಿದಂತೆ ಒಟ್ಟು 610 ಕೋಟಿ ರೂಪಾಯಿ ಹಣವನ್ನ ವಿಶ್ವವಿದ್ಯಾಲಯಕ್ಕೆ ಮರಳಿ ಪಡೆಯಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಇನ್ನೂ ಸುಮಾರು 90 ಕೋಟಿ ರೂಪಾಯಿ ಹಣ ವಿಟಿಯುಗೆ ಬರಬೇಕಿದೆ.
ವಿಟಿಯು ಖಜಾನೆಗೆ 610 ಕೋಟಿ ರೂಪಾಯಿ ಬಂದ ಬಳಿಕ, ಅದರಲ್ಲಿನ ಸುಮಾರು 500 ಕೋಟಿ ರೂಪಾಯಿಯನ್ನ ಫಿಕ್ಸ್‌ಡ್ ಡಿಪಾಸಿಟ್ ನಲ್ಲಿ ಇರಿಸಲಾಗಿದೆ. ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರ ಯೋಜನೆಯಂತೆ, ಈ ಠೇವಣಿಯಿಂದ ಬರುವ ಬಡ್ಡಿಯನ್ನು ಮುಂದಿನ 10 ವರ್ಷಗಳ ಕಾಲ ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಪ್ಲ್ಯಾನ್ ಮಾಡಲಾಗಿದೆ. ಒಂದು ವೇಳೆ ಸರ್ಕಾರ ವೇತನ ನೀಡದೇ ಇದ್ದರೂ ಸ್ವಾವಲಂಬನೆ ಸಾಧಿಸಲು ಕುಲಪತಿಗಳು ಈ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

