ಸ್ನೇಹಿತ ನಾಗರಾಜ್ ನಾನು ಒಮ್ಮೆ ಸಕ್ರೆಬೈಲ್ ಆನೆ ಬಿಡಾರಕ್ಕೆ ಪಿಕ್ನಿಕ್‌ಗೆ ಹೋಗಿ ಬರ್ತಿದ್ವಿ. ವಾಪಸ್ ಬರುವಾಗ ಒಂದು ಟೀ ಕುಡಿಯೋಕೆ ಬೈಕ್ ನಿಲ್ಲಿಸಿ ಕ್ಯಾಂಟೀನ್ ಒಂದಕ್ಕೆ ಹೋದ್ವಿ. ನಾನೊಂದು ಕಪ್ ಟೀ ತಗೊಂಡೆ, ನಾಗರಾಜ್ ಟೀ ತಗಳೋ ಬರದಲ್ಲಿ ಅವರ ಬಗಲಲ್ಲಿ ನೇತುಹಾಕಿದ್ದ ಕ್ಯಾಮೆರಾ (Camera) ಜಾರಿ ಕೆಳಗೆ ಬಿದ್ದು ಬಿಡ್ತು. ತಕ್ಷಣ ಟೀ ಕಪ್ ಎಸೆದ ಅವರು ಕ್ಯಾಮೆರಾ ಎತ್ಕೊಂಡು.. ಏಯ್ ನೋವಾಯ್ತೇನೋ ನಿನಗೆ? ಅಂತ ಮಗು ಥರ ಅದರ ಜೊತೆ ಮಾತಿಗಿಳಿದರು.
ನಾನು ಇದೆಂತ ವಿಚಿತ್ರ ಅಂತ, ನಾಗರಾಜ್ ಅವರೇ ಏನೂ ಆಗಿಲ್ಲ ಬಿಡಿ ಅದಕ್ಕೇನು ನೋವಾಗುತ್ತೆ. ರಿಲ್ಯಾಕ್ಸ್ ಅಂದೆ. ಆದ್ರೆ ಅವರು ಮಾತ್ರ ಟೀ ನೂ ಕುಡಿಲಿಲ್ಲ. ಬಹಳ ಬೇಜಾರಲ್ಲೇ ಇದ್ರು. ಯಾಕೆ ನಾಗಣ್ಣ ಅಂದೆ.. ಕ್ಯಾಮೆರಾ ಬಿದ್ಬಿಡ್ತಲ್ಲ.. ತುಂಬಾ ಬೇಜಾರಾಯ್ತು ಅಂದ್ರು. ನನಗೆ ಅಯ್ಯೋ ಒಂದು ಕ್ಯಾಮೆರಾ ಬಿದ್ದಿದ್ದಕ್ಕೆ ಇಷ್ಟೆಲ್ಲ ಬೇಜಾರ್ ಆಗ್ತಾರಾ ಅಂತ ಅನ್ನಿಸ್ತು. ಯಾಕಂದ್ರೆ ಅದು ಅಷ್ಟೊಂದು ಕಾಸ್ಟ್ಲಿ ಕ್ಯಾಮೆರಾ ಕೂಡ ಆಗಿರಲಿಲ್ಲ.
ಮತ್ತೆ ಒಂದು ದೀರ್ಘ ಮೌನದ ನಂತರ ನಾಗರಾಜ್, ತಮ್ಮ ಕ್ಯಾಮೆರಾ ಜರ್ನಿ ಬಿಚ್ಚಿಟ್ರು. ಒಂದು ಕಾಲದಲ್ಲಿ ಏನೂ ಇರಲಿಲ್ಲ ನನ್ನ ಹತ್ರ. ಇವತ್ತು ಊಟ, ಮನೆ, ಕಾರು, ನೂರಾರು ಪ್ರಶಸ್ತಿಗಳು ನನ್ನ ಹತ್ರ ಇದಾವೆ. ನಾನು ತೆಗೆದ ಫೋಟೋಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವತ್ತು ಪ್ರದರ್ಶನ ಆಗ್ತಿದಾವೆ. ಅದಕ್ಕೆಲ್ಲ ಈ ಕ್ಯಾಮೆರಾನೇ ಕಾರಣ ಅಂತ ಮತ್ತೊಮ್ಮೆ ಲೆನ್ಸ್‌ಗೆ ಮುತ್ತಿಟ್ಟು.. ನನ್ನನ್ನ ಎಷ್ಟು ಎತ್ತರಕ್ಕೆ ಬೆಳೆಸಿಬಿಟ್ಯೋ ಅಂತ ಅಂದ್ರು.. ಅಲ್ಲಿಗೆ ಅವರ ಬೇಸರ ಕಳೆದು ಖುಷಿ ಅವರ ಮನಸ್ಸಿನಲ್ಲಿ ಬಂದು ಮನೆ ಮಾಡಿತ್ತು. ಅವರಿಗೆ ಸಮಾಧಾನ ಆಯ್ತು ಅಂತ ನನಗೂ ಖುಷಿನೂ ಆಯ್ತು.
ಅವತ್ತೇ ಫೋಟೋಗ್ರಫಿ (Photography) ಅದರ ಬಗ್ಗೆ ಮಹಾನ್ ಫೋಟೋಗ್ರಾಫ್ರರ್ಸ್ ಅವರ ಸವಾಲುಗಳ ಬಗ್ಗೆ ತಿಳಿದುಕೊಳ್ಳೋಕೆ ಶುರು ಮಾಡ್ದೇ. ಆಗ ನೆನಪಾಗಿದ್ದು ಪೂರ್ಣಚಂದ್ರ ತೇಜಸ್ವಿ, ಅವರ ಫೋಟೋಗ್ರಫಿ ಒಂದು ಅದ್ಬುತ ದೃಶ್ಯ ಕಾವ್ಯ. ಅವರು ತೆಗೆದ ಹಕ್ಕಿಗಳ ಫೋಟೋಗಳು ಫೋಟೋಗ್ರಫಿ ಇತಿಹಾಸದಲ್ಲೇ ಒಂದು ಮಹತ್ವದ ಚಾಪು ಮೋಡಿಸಿವೆ.

ಒಂದು ಹಕ್ಕಿಯ ಫೋಟೋ ಕ್ಲಿಕ್ಕಿಸಲು ಎಷ್ಟೊಂದು ತಾಳ್ಮೆ ಬೇಕು ಎಂಬುದನ್ನು ತೇಜಸ್ವಿಯವರನ್ನು ನೋಡಿಯೇ ಕಲಿಯಬೇಕು. ಅವರು ಒಂದು ಕಡೆ ಬರೆಯುತ್ತಾ, ಕಾಡಲ್ಲಿ ಹಕ್ಕಿಗಳನ್ನು ಗಮನಿಸಲು ಬಹಳ ಸಂಯಮ ಬೇಕು. ಅಕಸ್ಮಾತ್ ಒಂದು ಶಬ್ದವಾದರೂ ಅವುಗಳೆಲ್ಲ ಹಾರಿಹೋಗುತ್ತವೆ. ಮತ್ತೆ ಅವುಗಳು ಮರಳಿ ಬರಲು, ಅದೇ ವಾತಾವರಣ ಸೃಷ್ಟಿಯಾಗಲು ಬಹಳ ಸಮಯ ಹಿಡಿಯುತ್ತದೆ. ಈ ಮೂಲಕ ಒಂದು ದಿವ್ಯ ಮೌನದ ಪಾಠವನ್ನೂ ಸಹ ತೇಜಸ್ವಿ ಇಲ್ಲಿ ಹೇಳಿದ್ದಾರೆ.
ನಾವೆಲ್ಲ ಗೋಡೆ ಮೇಲಿರುವ ಒಂದು ಸುಂದರವಾದ ಫೋಟೋವನ್ನು ನೋಡಿ ವಾವ್ ಎಂದು ಒಂದೆರಡು ಕ್ಷಣಗಳಲ್ಲಿ ಅಲ್ಲಿಂದ ತೆರಳುತ್ತೇವೆ. ಆದರೆ ಅದನ್ನು ಸೆರೆಹಿಡಿಯಲು ಛಾಯಾಗ್ರಾಹಕನಿಗೆ ಅದೆಷ್ಟು ಸಮಯ ಹಿಡಿದಿರತ್ತೋ ಯಾರಿಗೆ ಗೊತ್ತು. ಒಮ್ಮೊಮ್ಮೆ ಹುಲಿ ನೀರು ಕುಡಿಯುವ ಪೋಸ್, ನವಿಲು ಗರಿ ಬಿಚ್ಚುವ ಸೀನ್, ಹಕ್ಕಿ ತನ್ನ ಮರಿಗಳಿಗೆ ಆಹಾರ ತಂದು ತುತ್ತಿಡುವ ಫೋಟೋ ಅದೆಷ್ಟು ತಾಳ್ಮೆಯನ್ನು ಕೇಳಬಹುದು ಅಲ್ವಾ?

ವಿಶ್ವ ಛಾಯಾಗ್ರಹಣ ದಿನದ ಇತಿಹಾಸ
ವಿಶ್ವ ಛಾಯಾಗ್ರಹಣ ದಿನವನ್ನು (World Photography Day 2026) ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಛಾಯಾಗ್ರಹಣದ ಕಲೆ ಮತ್ತು ವಿಜ್ಞಾನದ ಮಹತ್ವವನ್ನು ಗುರುತಿಸಲು ಮೀಸಲಿಡಲಾಗಿದೆ.
ಫ್ರಾನ್ಸ್‌ನ ಜೋಸೆಫ್ ನಿಸೋಫರ್ ನೀಸೆಫ್, ಇಂಜಿನ್ ಸುಧಾರಣೆಯ ಪ್ರಯೋಗಗಳಲ್ಲಿ ನಿರತನಾಗಿದ್ದರು. ಇವರ ಪ್ರಯೋಗದ ಬೈ ಪ್ರಾಡಕ್ಟ್ ಆಗಿ ಹುಟ್ಟಿಕೊಂಟಿದ್ದೇ ಫೋಟೋಗ್ರಫಿ. ದೃಶ್ಯಗಳನ್ನು ಸೆರೆಹಿಡಿಯುವ ಯಂತ್ರವನ್ನು ರೂಪಿಸಿ, ಮನೆಯ ಕಿಟಕಿಯ ಬಳಿ ನಿಂತು ಹೊರಗಡೆಯ ಕಟ್ಟಡವೊಂದರ ಫೋಟೋ ಕ್ಲಿಕ್ ಮಾಡಿದರು. ಆ ಕ್ಯಾಮೆರಾಗಳಲ್ಲಿದ್ದ ರೀಲ್ ತೆಗೆದು ಕ್ಲಿಕ್ಕಿಸಿದ ಫೋಟೋ ಡೆವಲಪ್ ಮಾಡಲು ಅವರಿಗೆ 8 ಗಂಟೆ ಹಿಡಿದಿತ್ತಂತೆ. ಕಡೆಗೂ ಆ ಫೋಟೋ ಸಿದ್ಧವಾಯಿತು. ಆ ಫೋಟೋವನ್ನು ಇಡೀ ಜಗತ್ತಿಗೆ ತೋರಿಸಿದ ದಿನವೇ 1826ರ ಆಗಸ್ಟ್ 19. ಹಾಗಾಗಿ, ಅದೇ ದಿನವನ್ನು ವಿಶ್ವ ಛಾಯಾಗ್ರಹಣದ ದಿನಾಚರಣೆ ಎಂದು ಕರೆಯಲಾಗುತ್ತದೆ.
ರೀಲ್ ಕ್ಯಾಮೆರಾಗಳು
ಭಾರತದಲ್ಲಿ ಅಂದಾಜು 1995-97ರವರೆಗೂ ರೀಲ್ ಕ್ಯಾಮೆರಾ ಚಾಲ್ತಿಯಲ್ಲಿತ್ತು. ಒಂದು ರೀಲಿನಲ್ಲಿ 32ರಿಂದ 34 ಫೋಟೋಗಳು ಬರುತ್ತಿದ್ದವು. ಆ ರೀಲು ಸಂಪೂರ್ಣ ಬಳಕೆಯಾಗುವವರೆಗೆ ಆ ರೀಲು ಹೊರತಗೆಯುವಂತಿಲ್ಲ. ಅಕಸ್ಮಾತ್ ಆಗಿ ರೀಲು ಇದ್ದ ಕ್ಯಾಮೆರಾದ ಮುಚ್ಚಳ ತಗೆದರೆ ಅದು ಹಾಳಾಗಿಬಿಡುತ್ತಿತ್ತು. ಅಂದರೆ, ಓವರ್ ಎಕ್ಸ್ ಪೋಷರ್ ಆಗಿ ಫೋಟೋಗಳು ಹಾಳಾಗುತ್ತಿದ್ದವು. ಇನ್ನು ಕ್ಯಾಮೆರಾದಲ್ಲಿ ಎಷ್ಟು ಫೋಟೋಗಳಿಗೆ ರೀಲು ಈಗಾಗಲೇ ಖರ್ಚಾಗಿದೆ, ಇನ್ನೆಷ್ಟು ಫೋಟೋಗಳನ್ನು ತೆಗೆಯಲು ಬಾಕಿ ಇದೆ ಎಂಬ ಲೆಕ್ಕ ಸಿಗುತ್ತಿತ್ತು. ಅದನ್ನು ನೋಡಿಕೊಂಡೇ ಮುಂದಿನ ಫೋಟೋಗಳನ್ನು ಕ್ಲಿಕ್ ಮಾಡಬೇಕಿತ್ತು.

ರೀಲ್ ಎಲ್ಲಾ ಕಂಪ್ಲೀಟ್ ಆಗಿ ಬಳಕೆಯಾದ ಮೇಲೆ ಅದನ್ನು ಫೋಟೋ ಸ್ಟುಡಿಯೋಕ್ಕೆ ತೆಗೆದುಕೊಂಡು ಹೋದರೆ ಅವರು ನೆಗೆಟಿವ್ ಡೆವಲಪ್ ಮಾಡಿಕೊಡುತ್ತಿದ್ದರು. ಆ ನೆಗೆಟಿವ್ ನಲ್ಲಿ ತೆಗೆದ ಫೋಟೋಗಳು, ಅದರಲ್ಲಿನ ಜನರು ಭೂತಗಳಂತೆ ಕಾಣುತ್ತಿದ್ದರು!
ಈಗ ಡಿಜಿಟಲ್ ಯುಗ
ಈಗ ಫೋಟೋಗ್ರಫಿ ಎನ್ನುವುದು ಅತ್ಯಂತ ಸುಲಭದ ಕೆಲಸ. ಫೋಟೋ ತಗೆದ ಕೂಡಲೇ ಅದರ ಪ್ರೀವ್ಯೂ ನೋಡಬಹುದು, ಸರಿ ಅನ್ನಿಸದಿದ್ದರೆ ಡಿಲೀಟ್ ಮಾಡಬಹುದು, ಮತ್ತೊಮ್ಮೆ ಕ್ಲಿಕ್ ಮಾಡಬಹುದು, ಕ್ಯಾಮೆರಾಗಳಲ್ಲೇ ಎಡಿಟ್ ಮಾಡಬಹುದು. ಅದರ ಜೊತೆಗೆ, ಫೋಟೋಶಾಪ್ ಮತ್ತಿತರ ಫೋಟೋ ಎಡಿಟಿಂಗ್ ಸಾಫ್ಟ್ ವೇರ್ ಬಳಸಿ ನಮಗೆ ಬೇಕಾದ ರೀತಿ ಮಾಡಿಕೊಳ್ಳಬಹುದು. ಇಷ್ಟೆಲ್ಲ ಕಾಲ, ಟೆಕ್ನಾಲಜಿ ಬದಲಾದರೂ ಫೋಟೋಗ್ರಾಫರ್ ತಾಳ್ಮೆ ಮಾತ್ರ ಬದಲಾಗಿಲ್ಲ. ಅವರ ತಾಳ್ಮೆಯೇ ಫೋಟೋಗ್ರಫಿಗೆ ಅಂದವನ್ನು ನೀಡುವಂತಹದ್ದು!
ವಿಶ್ವ ಛಾಯಾಗ್ರಹಣ ದಿನದ ಮಹತ್ವವೇನು?
ಛಾಯಾಗ್ರಹಣದ ಮಹತ್ವವನ್ನು ಎತ್ತಿ ತೋರಿಸಲು, ಫೋಟೋಗ್ರಫಿ ಕಲೆಯನ್ನು ಪ್ರೋತ್ಸಾಹಿಸಲು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೇ ಈ ದಿನ ಸಮಾಜದ ಮೇಲೆ ಛಾಯಾಗ್ರಹಣದ ಕಲೆ, ತಂತ್ರ ಮತ್ತು ಪ್ರಭಾವವನ್ನು ಅರ್ಥಮಾಡಿಕೊಳ್ಳಲು, ಛಾಯಾಗ್ರಹಣದ ಕೊಡುಗೆಯನ್ನು ಶ್ಲಾಘಿಸಲು ಜೊತೆಗೆ ಫೋಟೋಗ್ರಫಿ ಕ್ಷೇತ್ರದಲ್ಲಿ ಹೆಸರು ಗಳಿಸಿದ ಛಾಯಾಗ್ರಹಕರನ್ನು ಗೌರವಿಸಲಾಗುತ್ತದೆ. ಹಲವೆಡೆ ಈ ದಿನದಂದು, ಛಾಯಾಗ್ರಹಣಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳು, ಪ್ರದರ್ಶನಗಳು ಮತ್ತು ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗುತ್ತದೆ.

