– ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು; ಸದನದಲ್ಲಿ ಭಾರೀ ಗದ್ದಲ
– ಸಿಎಂಗೆ ಆರ್ಥಿಕ ಇಲಾಖೆಯ ಟಿಪ್ಪಣಿ ಎಚ್ಚರಿಕೆ
ಬೆಂಗಳೂರು: ಗ್ಯಾರಂಟಿ ಯೋಜನೆಗಳ(Guarantee Scheme) ಹೊರೆಯ ನಡುವೆಯೇ ಸರಣಿ ಹೊಸ ಯೋಜನೆಗಳನ್ನು ಪ್ರಕಟಿಸುತ್ತಿರುವ ರಾಜ್ಯ ಸರ್ಕಾರಕ್ಕೆ(Karnataka Government) ಆರ್ಥಿಕ ಇಲಾಖೆ ತೀವ್ರ ಆಘಾತ ನೀಡಿದೆ.
ರಾಜ್ಯದಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದ್ದು, ಹೊಸ ಘೋಷಣೆಗಳನ್ನು ಮಾಡಲು ಸಾಧ್ಯವೇ ಇಲ್ಲ ಎಂದು ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಅವರಿಗೆ ಸೆ.17 ರಂದು ಸ್ಪಷ್ಟ ಎಚ್ಚರಿಕೆಯ ಟಿಪ್ಪಣಿ ರವಾನಿಸಿದೆ. ಈಗಾಗಲೇ ಘೋಷಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಬರೋಬ್ಬರಿ 27,000 ಕೋಟಿ ರೂ. ಕೊರತೆ ಎದುರಾಗಿದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕ ಇಲಾಖೆಯ ಈ ಆಂತರಿಕ ಟಿಪ್ಪಣಿಯನ್ನು ಬಿಜೆಪಿ ಶಾಸಕ ಭರತ್ ಶೆಟ್ಟಿ(Bharat Shetty) ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಈ ವಿಚಾರ ವಿಧಾನಸಭೆಯಲ್ಲೂ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಶೂನ್ಯ ವೇಳೆಯಲ್ಲಿ ಆರ್ಥಿಕ ಇಲಾಖೆಯ ಪತ್ರವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸರ್ಕಾರದ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯೇ ನೇರವಾಗಿ ರೆಡ್ ಸಿಗ್ನಲ್ ನೀಡಿದೆ. ಹೀಗಿದ್ದರೂ ಕರಾವಳಿ ಅಭಿವೃದ್ಧಿಗೆ 32,000 ಕೋಟಿ ರೂ. ಪ್ಯಾಕೇಜ್ ಪ್ರಕಟಿಸಿದ್ದಾರೆ. ಇಂಧನ, ಸಾರಿಗೆ ಸೇರಿದಂತೆ ಹಲವು ಇಲಾಖೆಗಳು ಈಗಾಗಲೇ ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಈ ಹೇಳಿಕೆಗೆ ಸಚಿವ ಕೆ.ಜೆ. ಜಾರ್ಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ, ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕೆಲಕಾಲ ತೀವ್ರ ಗದ್ದಲ ಹಾಗೂ ಮಾತಿನ ಚಕಮಕಿ ನಡೆಯಿತು.
ಆರ್ಥಿಕ ಇಲಾಖೆಯ ಟಿಪ್ಪಣಿ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಆರ್ಥಿಕ ಇಲಾಖೆ ತನ್ನ ಕರ್ತವ್ಯದ ಭಾಗವಾಗಿ ಎಚ್ಚರಿಕೆ ನೀಡಿದೆ. ಹಣಕಾಸು ಸಚಿವನಾಗಿ ನನಗೂ ರಾಜ್ಯದ ಆರ್ಥಿಕ ಸ್ಥಿತಿಯ ಅರಿವಿದೆ. ಮೊದಲು ಕೇಂದ್ರ ಸರ್ಕಾರದವರು ರೈತರಿಗೆ ಬರಬೇಕಿರುವ 57,000 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಿ” ಎಂದು ತಿರುಗೇಟು ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ಖಜಾನೆ ಖಾಲಿಯಾಗಿರುವಾಗ ಹೊಸ ಯೋಜನೆಗಳಿಗೆ ಇವರು ಎಲ್ಲಿಂದ ದುಡ್ಡು ತರುತ್ತಾರೆ? ಮೊದಲು ಜನರಿಗೆ ಪುಕ್ಕಟೆ ಆಶ್ವಾಸನೆ ನೀಡುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೊಡೋದಕ್ಕೆ ಹಣ ಇಲ್ಲ, ಸಿಎಂ ಪುಗ್ಸಟ್ಟೆ ಘೋಷಣೆ ಮಾಡ್ಕೊಂಡು ಹೊರಟಿದ್ದಾರೆ: ವಿಜಯೇಂದ್ರ ಕಿಡಿ
ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ಏನಿದೆ?
2026-27ನೇ ಸಾಲಿನ ಬಜೆಟ್‌ನಲ್ಲಿ ಈಗಾಗಲೇ ಘೋಷಿಸಿರುವ ಯೋಜನೆಗಳಿಗೆ ಸಂಪನ್ಮೂಲಗಳ ತೀವ್ರ ಅಗತ್ಯವಿದೆ. ರಾಜ್ಯದಲ್ಲಿ ಸಾಲದ ಹೊರೆ ಹೆಚ್ಚಿರುವುದರಿಂದ, ಹೊಸ ಯೋಜನೆಗಳಿಗೆ ಹಣ ಹೊಂದಿಸಲು ಮತ್ತೆ ಸಾಲ ಪಡೆಯುವುದು ಅಸಾಧ್ಯದ ಮಾತು.
ರಾಜ್ಯದಲ್ಲಿ 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಕಾಮಗಾರಿಗಳ ವೆಚ್ಚ ಬಾಕಿ ಉಳಿದಿದೆ. ಲೋಕೋಪಯೋಗಿ (PWD), ಜಲಸಂಪನ್ಮೂಲ, ಸಣ್ಣ ನೀರಾವರಿ ಮತ್ತು ಅಂತರ್ಜಲ ಹಾಗೂ ಗ್ರಾಮೀಣಾಭಿವೃದ್ಧಿ (RDPR) ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬರೋಬ್ಬರಿ 36,136 ಕೋಟಿ ರೂ. ಬಿಲ್ ಪಾವತಿಸುವುದು ಬಾಕಿಯಿದೆ.
ವರ್ಷದ ಮೊದಲ 6 ತಿಂಗಳಲ್ಲೇ 5,000 ಕೋಟಿ ರೂ.ಗಳಿಗೂ ಹೆಚ್ಚಿನ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಇದು 2026-27ನೇ ಸಾಲಿಗೆ ಗುರುತಿಸಲಾದ ಆದಾಯಕ್ಕಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಬರಗಾಲ ತಲೆದೋರಿರುವುದರಿಂದ ಪರಿಹಾರ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚುವರಿ ಅನುದಾನದ ಅವಶ್ಯಕತೆಯಿದೆ.
ಬರಗಾಲದ ಹಿನ್ನೆಲೆಯಲ್ಲಿ ನೀರಾವರಿ ಪಂಪ್‌ಸೆಟ್ ವಿದ್ಯುತ್ ಸಬ್ಸಿಡಿ ವೆಚ್ಚವು 4,000 ದಿಂದ 5,000 ಕೋಟಿ ರೂ.ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ.
ಸಂಪನ್ಮೂಲ ಕೊರತೆಯಿಂದಾಗಿ ಇತರೆ ಪ್ರಮುಖ ಇಲಾಖೆಗಳಿಗೆ ನಿಗದಿಪಡಿಸಿದ ಬಜೆಟ್ ಹಂಚಿಕೆಯಲ್ಲಿ ಭಾರೀ ಕಡಿತ ಮಾಡುವುದು ಅನಿವಾರ್ಯವಾಗಲಿದ್ದು, ಪ್ರಮುಖವಾಗಿ ಇಂಧನ, ಸಾರಿಗೆ ಮತ್ತು ನೀರಾವರಿ ಇಲಾಖೆಗಳು ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸಲಿವೆ.

