ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊದಕೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ ತಲೆದೋರಿದೆ. ಮಕ್ಕಳು ಶೌಚಕ್ಕೆ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ. ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ದಿವ್ಯ ನಿರ್ಲಕ್ಷ್ಯದಿಂದ ಸರ್ಕಾರಿ ಶಾಲೆ ಆದೋಗತಿಗೆ ಇಳಿದಿದೆ.
ಹೊದಕೆ ಗ್ರಾಮದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 36 ಮಕ್ಕಳಿದ್ದಾರೆ. ಮುಖ್ಯ ಶಿಕ್ಷಕಿ ಸೇರಿ ಇಬ್ಬರು ಶಿಕ್ಷಕಿಯರು, ಓರ್ವ ಅತಿಥಿ ಶಿಕ್ಷಕರು ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಈ ಶಾಲೆಯಲ್ಲಿ ಶುಚಿತ್ವ ಎನ್ನುವುದೇ ಇಲ್ಲ. ಶಾಲೆಯ ಸುತ್ತಮುತ್ತಲೂ ಗಲೀಜನ್ನು ಎಸೆಯಲಾಗಿದೆ. ಬಾವಿಗೆ ಅಳವಡಿಸಿದ ವಿದ್ಯುತ್ ತಂತಿ ನೆಲಭಾಗಕ್ಕೆ ಮುಟ್ಟಿದ್ದು ಸ್ವಲ್ಪ ನಿರ್ಲಕ್ಷ ವಹಿಸಿದರೂ ಮಕ್ಕಳಿಗೆ ಶಾಕ್ ಕಟ್ಟಿಟ್ಟ ಬುತ್ತಿ. ಇನ್ನು ಶಾಲೆಯ ಮೇಲ್ಭಾಗಕ್ಕೆ ಬೇಕಾಬಿಟ್ಟಿ ತಗಡಿನ ಶೀಟ್ ಹಾಕಲಾಗಿದ್ದು, ದೊಡ್ಡ ಗಾಳಿ ಬೀಸಿದರೇ ಬಿದ್ದು ಹೋಗುವ ಸ್ಥಿತಿಯಲ್ಲಿದೆ.
ಶೌಚಾಲಯದಲ್ಲಿ ಇಲ್ಲ ನೀರು
ಇಲ್ಲಿನ ಪುಟ್ಟ ಮಕ್ಕಳಿಗೆ ಶೌಚಾಲಯಕ್ಕೆ ಹೋಗಲು ನೀರಿನ ವ್ಯವಸ್ಥೆ ಇಲ್ಲ. ಇರುವ ನಳ ತುಂಡಾಗಿ ಹಲವು ತಿಂಗಳುಗಳಾಗಿವೆ. ಪುಟ್ಟ ಮಕ್ಕಳು ಬಾವಿಯಲ್ಲಿ ನೀರು ಸೇದಿ ಭಾರವಾದ ಬಕೆಟ್‌ನಲ್ಲಿ ನೀರು ತುಂಬಿಕೊಂಡು ಶೌಚಾಲಯಕ್ಕೆ ಹೋಗಿ ಬಳಸಬೇಕು.
ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರು ಪಾಠ ಮಾಡುವ ಬದಲು ಶಾಲೆಗೆ ಬಂದು ವಿರಮಿಸುವ ಆರೋಪವನ್ನ ಇಲ್ಲಿನ ಪೋಷಕರು ಮಾಡಿದ್ದಾರೆ. ಮಕ್ಕಳಿಗೆ ಪಾಠ ಮಾಡುವುದಿಲ್ಲ. ಸಮಸ್ಯೆ ಬಗ್ಗೆ ಹೇಳಿದರೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ ಎಂದು ಊರಿನ ಶಾಲೆಗೆ ಸೇರಿಸಿದರೆ ಪ್ರಯೋಜನವಾಗುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

