ಬೀದರ್: ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ರೈತರ ಜೀವನಾಡಿ ಕಾರಂಜಾ ಜಲಾಶಯದ (Karanja Dam) ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಮಳೆ ಕೊರತೆಯಿಂದಾಗಿ ಭಾಲ್ಕಿ (Bhalki) ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿಯ ಕಾರಂಜಾ ಡ್ಯಾಂ ಒಳಹರಿವು ಶೂನ್ಯವಾಗಿದೆ. 7.65 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಾರಂಜಾ ಜಲಾಶಯದಲ್ಲಿ ಸದ್ಯ 4.5 ಟಿಎಂಸಿ ನೀರು ಮಾತ್ರ ಇದ್ದು, ಬಹುತೇಕ 1 ಟಿಎಂಸಿ ನೀರು ಡೆಡ್ ಸ್ಟೋರೆಜ್ ಇದೆ. ಸದ್ಯ 3 ಟಿಎಂಸಿ ನೀರು ಮಾತ್ರ ಇದ್ದು, ಈ ತಿಂಗಳು ಮಳೆ ಬಾರದೆ ಇದ್ರೆ ಡ್ಯಾಂ ಸಂಪೂರ್ಣ ಬರಿದಾಗಲಿದೆ. ಇದನ್ನೂ ಓದಿ: ಭಾರೀ ಮಳೆಯಿಂದ ಹಿಡಕಲ್ ಜಲಾಶಯ ಭರ್ತಿ; ಹುನ್ನೂರು ವಿಠ್ಠಲ ದೇವಸ್ಥಾನ ಮುಳುಗಡೆ
ಸದ್ಯ ಜಿಲ್ಲೆಯ ಜನರಿಗೆ ಕುಡಿಯುವುದಕ್ಕಷ್ಟೇ ನೀರು ಬರುತ್ತಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ ರೈತರ ಬೆಳೆಗಳಿಗೆಲ್ಲ ನೀರೂ ಇಲ್ಲದೆ ಒಣಗುತ್ತಿವೆ. ಸರ್ಕಾರದ ಆದೇಶದಂತೆ ಡ್ಯಾಂನಿಂದ ಕಾಲುವೆಗೆ ನೀರು ಬಿಡುವುದು ಸಂಪೂರ್ಣ ಸ್ಥಗಿತವಾಗಿದ್ದು, ಜಲಾಶಯದ ನೀರನ್ನು ನಂಬಿಕೊಂಡು ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಭಾಲ್ಕಿ ತಾಲೂಕಿನ 29 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ನೀರು ಒದಗಿಸುತ್ತಿದ್ದ ಕಾರಂಜಾ ಡ್ಯಾಂ ಸದ್ಯ ಬಂದ್ ಆಗಿದೆ.
ವಾಡಿಕೆಯಂತೆ ಜಿಲ್ಲೆಯಲ್ಲಿ ಮಳೆಯಾಗದ ಹಿನ್ನೆಲೆ ಅಧಿಕಾರಿಗಳು ಬೆಳೆಗಳಿಗೆ ನೀರು ಬಿಡದೇ ಬಂದ್ ಮಾಡಿದ್ದಾರೆ. ಬೀದರ್ ನಗರ, ಚಿಟಗುಪ್ಪಾ, ಹುಮ್ನಾಬಾದ್ ಪಟ್ಟಣ ಮತ್ತು ಗ್ರಾಮೀಣ ಭಾಗಗಳಿಗೆ ಇಲ್ಲಿಂದಲೇ ಕುಡಿಯುವ ನೀರು ಸರಬರಾಜು ಆಗುತ್ತದೆ. ಭವಿಷ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಬೆಳೆಗಳಿಗೆ ನೀಡು ಬಿಡುವುದು ಸ್ಥಗಿತವಾಗಿದೆ.ಇದನ್ನೂ ಓದಿ: ಘಟಪ್ರಭಾ ನದಿಯ ಆರ್ಭಟ: ನಂದಗಾಂವ-ಅವರಾದಿ ಸೇತುವೆ ಜಲಾವೃತ
