ಬೆಂಗಳೂರು: ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿರುವ ಟೆಕ್ಕಿ (Trekking) ಅದ್ವೈತ್ ಉಪಾಧ್ಯಾಯ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಗುವ ಸಾಧ್ಯತೆ ಇದೆ. ಅದ್ವೈತ್ ಆತ್ಮಹತ್ಯೆ (Advaith Missing Case) ಮಾಡಿಕೊಂಡಿರುವಂತೆ ಬಿಂಬಿಸಿ ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾನಾ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.
ಕಳೆದ ಮೂರು ದಿನಗಳಿಂದ ಪೊಲೀಸರ ಐದು ತಂಡಗಳು ಶಿವಗಂಗೆ ಬೆಟ್ಟವನ್ನು ಇಂಚಿಂಚಾಗಿ ಪರಿಶೀಲನೆ ನಡೆಸಿವೆ. ಬೆಟ್ಟದ ಹಲವು ಭಾಗಗಳಲ್ಲಿ ಶೋಧ ನಡೆಸಿದರೂ, ಇದುವರೆಗೂ ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಅಥವಾ ಆತನಿಗೆ ಏನಾದರೂ ಆಗಿರುವುದಕ್ಕೆ ಒಂದೇ ಒಂದು ಪ್ರಮುಖ ಸುಳಿವು ಕೂಡ ಸಿಕ್ಕಿಲ್ಲ.
ಅದ್ವೈತ್ ಕೊನೆಯದಾಗಿ ಮದುವೆಯಾಗಬೇಕಿದ್ದ ಯುವತಿಗೆ ಶಿವಗಂಗೆ ಬೆಟ್ಟದಿಂದ ಫೋಟೋ ಕಳುಹಿಸಿದ್ದಾನೆ. ಆ ಬಳಿಕ ಯಾವುದೇ ಫೋನ್ ಕಾಲ್ ಅಥವಾ ಮೆಸೇಜ್ ಮಾಡಿಲ್ಲ. ಹೀಗಾಗಿ ಆತ ಉದ್ದೇಶಪೂರ್ವಕವಾಗಿಯೇ ಮೊಬೈಲ್ ಅನ್ನು ಬೆಟ್ಟದಲ್ಲಿ ಬಿಟ್ಟು ಹೋಗಿದ್ದಾನಾ ಎಂಬ ಅನುಮಾನವೂ ಪೊಲೀಸರಿಗೆ ಬಂದಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ – ಜೈಲಾಧಿಕಾರಿ ಸಸ್ಪೆಂಡ್, SPಗೆ ಶೋಕಾಸ್ ನೋಟಿಸ್
ಇದಕ್ಕೂ ಮುನ್ನ ಅದ್ವೈತ್ ಮನೆಯ ಲ್ಯಾಪ್‌ಟಾಪ್‌ನಲ್ಲಿ ಶಿವಗಂಗೆ ಬೆಟ್ಟ ಹಾಗೂ ಶಾಂತಲಾ ಡ್ರಾಪ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಸರ್ಚ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಜೊತೆಗೆ, ChatGPTಯಲ್ಲಿ ಮಾಡಿದ್ದ ಕೆಲವು ಸರ್ಚ್ ಹಿಸ್ಟರಿಯನ್ನು ಹಾಗೆಯೇ ಬಿಟ್ಟಿರುವುದು ಕೂಡ ತನಿಖಾಧಿಕಾರಿಗಳಿಗೆ ಅನುಮಾನ ಮೂಡಿಸಿದೆ.
ಅದ್ವೈತ್ ಟೆಕ್ಕಿಯಾಗಿದ್ದು, ತಾಂತ್ರಿಕವಾಗಿ ಸಾಕಷ್ಟು ಪರಿಣತಿ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ತನ್ನ ಮೊಬೈಲ್ ಸೇರಿದಂತೆ ಇತರ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ಬಿಟ್ಟು ಹೋಗುವ ರೀತಿಯಲ್ಲಿ ಯಾವುದಾದರೂ ಪ್ಲ್ಯಾನ್ ಮಾಡಿದ್ದಾನಾ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಅದ್ವೈತ್‌ನ ವೈಯಕ್ತಿಕ ಹಿನ್ನೆಲೆಯನ್ನೂ ಪೊಲೀಸರು ಪರಿಶೀಲಿಸಿದ್ದು, ಹಲವು ಯುವತಿಯರೊಂದಿಗೆ ಆತ ಸಲುಗೆಯಿಂದ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜಾರ್ಜಿನಾ ಕೈಹಿಡಿದ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ
ಒಂದು ವೇಳೆ ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮೂರು ದಿನಗಳ ಕಾಲ ಬೆಟ್ಟದಲ್ಲಿ ಶೋಧ ನಡೆಸಿದರೂ ಮೃತದೇಹದ ಯಾವುದೇ ಸುಳಿವು ಸಿಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೀಗಾಗಿ ಆತ ಮೊದಲೇ ಪ್ಲ್ಯಾನ್ ಮಾಡಿಕೊಂಡು ನಾಪತ್ತೆಯಾಗಿದ್ದಾನಾ ಎಂಬ ಅನುಮಾನ ಮತ್ತಷ್ಟು ಬಲವಾಗಿದೆ.
ಸದ್ಯ ಪೊಲೀಸರು ಅದ್ವೈತ್ ನಾಪತ್ತೆಯಾಗಿರುವ ಹಿಂದಿನ ನಿಜವಾದ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಹತ್ವದ ಸಾಕ್ಷ್ಯಗಳು ಸಿಕ್ಕರೆ ಮುಂದಿನ ಒಂದೆರಡು ದಿನಗಳಲ್ಲಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ.

