Connect with us

Bollywood

ಕುಟುಂಬಸ್ಥರ ಜೊತೆ ಪೈಲ್ವಾನ್ ವೀಕ್ಷಿಸಲಿದ್ದಾರೆ ಸಲ್ಮಾನ್ ಖಾನ್

Published

on

ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಕಿಚ್ಚ ಸುದೀಪ್ ಅವರು ನಟಿಸಿದ ‘ಪೈಲ್ವಾನ್’ ಚಿತ್ರವನ್ನು ತಮ್ಮ ಕುಟುಂಬಸ್ಥರ ಜೊತೆ ವೀಕ್ಷಿಸಲಿದ್ದಾರೆ.

ಸಲ್ಮಾನ್ ಖಾನ್ ಅವರು ಹಿಂದಿಯಲ್ಲಿ ಬಿಡುಗಡೆಯಾಗುವ ಪೈಲ್ವಾನ್ ಚಿತ್ರವನ್ನು ತಮ್ಮ ಕುಟುಂಬಸ್ಥರ ಜೊತೆ ವೀಕ್ಷಿಸಲಿದ್ದಾರೆ. ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಅವರು ಸೆ.10 ಅಂದರೆ ಮಂಗಳವಾರ ಈ ಸಿನಿಮಾವನ್ನು ನೋಡಬೇಕಿತ್ತು. ಆದರೆ ಕಾರಣಾಂತರದಿಂದ ಚಿತ್ರತಂಡ ಈ ಸಿನಿಮಾವನ್ನು ಸಲ್ಮಾನ್ ಅವರಿಗೆ ತೋರಿಸಲು ಆಗಲಿಲ್ಲ. ಹಾಗಾಗಿ ಈ ವೀಕೆಂಡ್ ಸಲ್ಮಾನ್ ಅವರು ಪೈಲ್ವಾನ್ ಚಿತ್ರ ನೋಡಲಿದ್ದಾರೆ.

ಪೈಲ್ವಾನ್ ಸಿನಿಮಾ ವೀಕ್ಷಿಸಲು ಸ್ವತಃ ಸಲ್ಮಾನ್ ಅವರೇ ಆಸಕ್ತಿ ತೋರಿದ್ದಾರೆ. ಅಲ್ಲದೆ ಮುಂಬೈನಲ್ಲಿ ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬಸ್ಥರಿಗೆ ಸ್ಪೆಷಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ನಿರ್ದೇಶಕ ಎಸ್. ಕೃಷ್ಣ ಸೇರಿದಂತೆ ಚಿತ್ರತಂಡದ ಹಲವು ಮುಖ್ಯ ವ್ಯಕ್ತಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಪೈಲ್ವಾನ್ ಚಿತ್ರದ ಟೀಸರ್ ಬಿಡುಗಡೆ ಆಗಿದ್ದಾಗ ಸಲ್ಮಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಸಿನಿಮಾ ಟೀಸರ್‍ನ ಯೂಟ್ಯೂಬ್ ಲಿಂಕ್ ಹಾಕಿ, “ಕಿಚ್ಚ ಸುದೀಪ್ ನೀವು ನಮ್ಮ ಪ್ರಯತ್ನವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಆಲ್ ದಿ ಬೆಸ್ಟ್ ಪೈಲ್ವಾನ್ ಹಾಗೂ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದರು.

ಸೆ. 12ರಂದು ಅಂದರೆ ಗುರುವಾರದಂದು ಪೈಲ್ವಾನ್ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಕೆಲವು ದಿನಗಳ ನಂತರ ಹಿಂದಿ ಭಾಷೆಯಲ್ಲಿ ಪೈಲ್ವಾನ್ ಬಿಡುಗಡೆ ಆಗಲಿದೆ.

ಕರ್ನಾಟಕದಲ್ಲಿ ಪೈಲ್ವಾನ್ ಸಿನಿಮಾ 400 ಚಿತ್ರಮಂದಿರಗಳಲ್ಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 450ಕ್ಕೂ ಹೆಚ್ಚು ಚಿತ್ರಮಂದಿರ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ವಿಶ್ವಾದ್ಯಂತ 3000 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

Click to comment

Leave a Reply

Your email address will not be published. Required fields are marked *