– ಓವಲ್ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ
– ರೆಜಿಮ್ ಚೇಂಜ್ ಪುಸ್ತಕದಲ್ಲಿ ಸ್ಫೋಟಕ ಮಾಹಿತಿ
ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ (Russia-Ukraine War)ವಿರಾಮ ಹಾಡಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance) ಅವರು ಭಾರತೀಯ ಸೈನಿಕರನ್ನು ಬಳಸಿಕೊಳ್ಳಲು ಗಂಭೀರ ಯೋಜನೆ ರೂಪಿಸಿದ್ದ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ.
ಉಕ್ರೇನ್‌ನಲ್ಲಿ ಶಾಂತಿಪಾಲನಾ ಪಡೆಯಾಗಿ (Peacekeepers) ಭಾರತ ಅಥವಾ ಸೌದಿ ಅರೇಬಿಯಾದ ಸೇನೆಯನ್ನು ನಿಯೋಜಿಸುವ ವ್ಯಾನ್ಸ್ ಅವರ ಈ ಪ್ರಸ್ತಾಪವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೇರವಾಗಿ ತಿರಸ್ಕರಿಸಿದ್ದರು ಎಂದು ಹೊಸ ಪುಸ್ತಕವೊಂದು ಬಹಿರಂಗಪಡಿಸಿದೆ.
ನ್ಯೂಯಾರ್ಕ್ ಟೈಮ್ಸ್ (NYT) ಪತ್ರಕರ್ತರಾದ ಮ್ಯಾಗಿ ಹ್ಯಾಬರ್ಮನ್ ಮತ್ತು ಜೊನಾಥನ್ ಸ್ವಾನ್ ಜಂಟಿಯಾಗಿ ಬರೆದಿರುವ Regime Change: Inside the Imperial Presidency of Donald Trump ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅದರಲ್ಲಿ ಶ್ವೇತಭವನದ ಈ ರಹಸ್ಯ ಕಾರ್ಯತಂತ್ರದ ಬಗ್ಗೆ ಉಲ್ಲೇಖವಿದೆ.
ಸಭೆಯಲ್ಲಿ ಏನಾಗಿತ್ತು?
ಜನವರಿ 30 ರಂದು ಶ್ವೇತಭವನದ ಪ್ರತಿಷ್ಠಿತ ಓವಲ್ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆಯೊಂದು ನಡೆದಿತ್ತು. ಈ ಸಭೆಯಲ್ಲಿ ಡೊನಾಲ್ಡ್ ಟ್ರಂಪ್, ಜೆ.ಡಿ. ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಮೈಕ್ ವಾಲ್ಟ್ಜ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.
ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್‌ನಲ್ಲಿ ಸೇನಾ ರಹಿತ ವಲಯ (Demilitarized Zone) ಒಂದನ್ನು ನಿರ್ಮಿಸಬೇಕು ಎನ್ನುವುದು ವ್ಯಾನ್ಸ್ ಆಲೋಚನೆಯಾಗಿತ್ತು. ಉಕ್ರೇನ್‌ಗೆ ನ್ಯಾಟೋ (NATO) ದೇಶಗಳ ಸೈನಿಕರನ್ನು ಕಳುಹಿಸಿದರೆ ಅದು ರಷ್ಯಾವನ್ನು ಮತ್ತಷ್ಟು ಕೆರಳಿಸಬಹುದು ಮತ್ತು ಅಮೆರಿಕವನ್ನು ನೇರವಾಗಿ ಯುದ್ಧಕ್ಕೆ ಎಳೆದಂತಾಗುತ್ತದೆ. ನ್ಯಾಟೋ ಸೈನಿಕರ ಬದಲಾಗಿ, ಜಾಗತಿಕವಾಗಿ ತಟಸ್ಥ ನಿಲುವು ಹೊಂದಿರುವ ಭಾರತ ಅಥವಾ ಸೌದಿ ಅರೇಬಿಯಾದ ಪಡೆಗಳನ್ನು ಅಲ್ಲಿ ಶಾಂತಿ ಸ್ಥಾಪನೆಗಾಗಿ ನಿಯೋಜಿಸಬಹುದು ಎಂದು ವ್ಯಾನ್ಸ್ ಪ್ರಸ್ತಾಪಿಸಿದ್ದರು. ಇದನ್ನೂ ಓದಿ: ಟ್ರಂಪ್ ಧಮಕಿಗೆ ಇರಾನ್ ಕೆಂಡ: ಶಾಂತಿ ಮಾತುಕತೆ ವೇದಿಕೆಯಿಂದ ಇರಾನ್ ಹೊರ ನಡೆದಿದ್ದು ಯಾಕೆ?

ಟ್ರಂಪ್ ಹೇಳಿದ್ದೇನು?
ಡೊನಾಲ್ಡ್ ಟ್ರಂಪ್ ಅವರು ವ್ಯಾನ್ಸ್ ಅವರ ಈ ಪ್ರಸ್ತಾಪವನ್ನು ಖಡಾಖಂಡಿತವಾಗಿ ಒಪ್ಪಲಿಲ್ಲ. ಅಮೆರಿಕದ ಅತ್ಯಂತ ಪ್ರಮುಖ ಕಾರ್ಯತಂತ್ರದ ಪಾಲುದಾರ ದೇಶವಾಗಿರುವ ಭಾರತದಂತಹ ಮಿತ್ರರಾಷ್ಟ್ರವನ್ನು ಇಂತಹ ಅಪಾಯಕಾರಿ ಯುದ್ಧ ವಲಯಕ್ಕೆ ತಳ್ಳುವುದು ಸರಿಯಲ್ಲ. ಇಂತಹ ದೊಡ್ಡ ಮಟ್ಟದ ಮಿಲಿಟರಿ ಕಾರ್ಯಾಚರಣೆಯ ಭಾರೀ ವೆಚ್ಚವನ್ನು ಭಾರತ ಭರಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾತನಾಡಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಾನು ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ನಾನು ಮೋದಿ ಅವರನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಮತ್ತು ಅವರನ್ನು ಭೇಟಿಯಾಗಲು ಬಯಸಿದ್ದೇನೆ ಎಂದು ಹೇಳಿರುವುದು ಪುಸ್ತಕದಲ್ಲಿ ಉಲ್ಲೇಖವಾಗಿದೆ.
ಭಾರತದ ನಿಲುವು ಏನು?
ಜಾಗತಿಕ ವೇದಿಕೆಗಳಲ್ಲಿ ಭಾರತವು ಮೊದಲಿನಿಂದಲೂ ಇದು ಯುದ್ಧದ ಯುಗವಲ್ಲ ಎಂದು ಸಾರುತ್ತಾ, ರಷ್ಯಾ ಮತ್ತು ಉಕ್ರೇನ್ ವಿಷಯದಲ್ಲಿ ರಾಜತಾಂತ್ರಿಕ ತಟಸ್ಥ ನಿಲುವನ್ನು ಕಾಯ್ದುಕೊಂಡು ಬಂದಿದೆ. ಮಾತುಕತೆಯ ಮೂಲಕವೇ ಯುದ್ಧ ಕೊನೆಗೊಳ್ಳಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಅಮೆರಿಕದ ಶ್ವೇತಭವನದ ಆಂತರಿಕ ವಲಯದಲ್ಲಿ ಭಾರತೀಯ ಸೇನೆಯ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯ ಕುರಿತು ಇಷ್ಟೊಂದು ದೊಡ್ಡ ಮಟ್ಟದ ಚರ್ಚೆ ನಡೆದಿರುವುದು ಜಾಗತಿಕ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಜೆ.ಡಿ. ವ್ಯಾನ್ಸ್ ಅವರ ಆಕ್ರಮಣಕಾರಿ ವಿದೇಶಾಂಗ ನೀತಿಯ ಆಲೋಚನೆಗಳು ಮತ್ತು ಟ್ರಂಪ್ ಅವರ ಅಮೆರಿಕ ಫಸ್ಟ್ (America First) ನೀತಿಯ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಈ ಹೊಸ ಪುಸ್ತಕವು ಜಗತ್ತಿನ ಮುಂದೆ ತೆರೆದಿಟ್ಟಿದೆ.
