– ʻಮಹಾʼ ಆಪರೇಷನ್ ಟೈಗರ್ ಚುರುಕು
– ಠಾಕ್ರೆ ಬಣದ 6 ಸಂಸದರು ಶಿಂಧೆ ಬಣಕ್ಕೆ ಶಿಫ್ಟ್?
ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಮತ್ತೆ ರಾಜಕೀಯ ಸಂಚಲನ ಸೃಷ್ಠಿಯಾಗಿದೆ. ಉದ್ಧವ್ ಠಾಕ್ರೆ ಬಣ ಮತ್ತೊಮ್ಮೆ ಒಡೆದು ಚೂರಾಗುವ ಸ್ಪಷ್ಟ ಮುನ್ಸೂಚನೆ ಸಿಕ್ಕಿದೆ. 9 ಸಂಸದರ ಪೈಕಿ 6 ಸಂಸದರು ಡಿಸಿಎಂ ಏಕನಾಥ್ ಶಿಂಧೆ (Eknath Shindhe) ನೇತೃತ್ವದ ಶಿವಸೇನೆ ಸೇರುವ ಸಾಧ್ಯತೆಗಳಿವೆ. ʻಆಪರೇಷನ್ ಟೈಗರ್ʼ ಹೆಸರಿನಲ್ಲಿ ನಡೆದ ಈ ಮಿಷನ್ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಕ್ರಾಂತಿ ಸೃಷ್ಠಿಸಿದೆ.
ಈ ಮಧ್ಯೆ ಉದ್ಧವ್ ಸೇನಾ ಪಕ್ಷದ ಸಂಸದ ಸಂಜಯ್ ರಾವತ್ (Uddhav Sena) ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಉದ್ಧವ್ ಬಣದ ಸಂಸದರನ್ನ (Uddhav Thackeray MPs) ಖರೀದಿಸಲು ಪ್ರತಿಯೊಬ್ಬರಿಗೂ 50 ಕೋಟಿ ರೂ. ಹಣ ಆಫರ್ ನೀಡಲಾಗಿದೆ ಎಂದು ಬಾಂಬ್ ಸಿಡಿಸಿದ್ದಾರೆ.
15 ಕೋಟಿ ಮುಂಗಡ ಹಣ ನೀಡಲಾಗಿದೆ. ಸಂಸದರನ್ನ ದೆಹಲಿಗೆ ಕರೆದೊಯ್ಯಲು ಖಾಸಗಿ ಜೆಟ್‌ಗಳನ್ನ ಕಳುಹಿಸಲಾಗುತ್ತಿದೆ. ಮಂಗಳವಾರ ನಾಂದೇಡ್ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ ಮೂರು ಸ್ಥಳಗಳಿಗೆ ಮೂರು ಖಾಸಗಿ ಜೆಟ್‌ಗಳನ್ನ ಕಳುಹಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: Operation Tiger | ಟಿಎಂಸಿ ಬಳಿಕ ಉದ್ಧವ್ ಶಿವಸೇನೆ ಸರದಿ – 16 ಶಾಸಕರು, 7 ಸಂಸದರು ಗುಡ್‌ಬೈ ಹೇಳುವ ಸಾಧ್ಯತೆ

ಉದ್ಧವ್ ಪ್ಲ್ಯಾನ್ ತಯಾರಿ; ನಾಳೆ ಸಭೆ
ಈ ಮಧ್ಯೆ ಉದ್ಧವ್ ಬಣದ ಶಿವಸೇನೆ ದಂಗೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಪಕ್ಷವು ಬುಧವಾರ ತನ್ನ ಸಂಸದೀಯ ಪಕ್ಷದ ಸಭೆ ಕರೆದಿದೆ. ಎಲ್ಲಾ ಸಂಸದರು ಜೂನ್ 18ರ ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ನಡೆಯಲಿರುವ ಸಂಸದರ ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಿದೆ. ಸಭೆಯಲ್ಲಿ ಪಾಲ್ಗೊಳ್ಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಹತ್ವದ ಸಾಧನೆ – 1.78 ಲಕ್ಷ ಕೋಟಿ ರೂ. ತಲುಪಿದ ಉತ್ಪಾದನೆ
ಯಾರೆಲ್ಲಾ ಶಿಂಧೆ ಬಣ ಸೇರುವ ಸಾಧ್ಯತೆ
ಉದ್ಧವ್ ಠಾಕ್ರೆ ಬಣದ ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ಸಂಜಯ್ ಜಾಧವ್ ಏಕನಾಥ್ ಶಿಂಧೆ ಬಣ ಸೇರುವ ಸಾಧ್ಯತೆಗಳಿವೆ. ಹೆಚ್ಚುವರಿಯಾಗಿ ರಾಜಭಾವು ವಾಜೆ ಕೂಡ ಆರು ಸಂಸದರೊಂದಿಗೆ ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ಇದೆ.

ಠಾಕ್ರೆ ನೇತೃತ್ವದ ಶಿವಸೇನೆಯ 6 ಸಂಸದರು ತಮ್ಮ ಫೋನ್‌ಗಳನ್ನ ಸ್ವಿಚ್ ಆಫ್ ಮಾಡಿಕೊಂಡಿದ್ದು, ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಇಂದು ದೆಹಲಿಯಲ್ಲಿ ಲೋಕಸಭೆ ಸ್ಪೀಕರ್ ಓಂಬಿರ್ಲಾ ಅವರನ್ನು ಭೇಟಿಯಾಗಿ ಡಿಸಿಎಂ ಏಕನಾಥ್ ಶಿಂಧೆ ಬಣಕ್ಕೆ ಬೆಂಬಲ ಪತ್ರ ನೀಡಲಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಾಹುವಾ ಮೊಯಿತ್ರಾ, 15 ಕೋಟಿ ರೂಪಾಯಿಯೇ? ಅಷ್ಟೊಂದು ಕಡಿಮೆಗೆ ಯಾಕೆ ಹೋಗುತ್ತಿದ್ದೀರಿ? ನಮ್ಮನ್ನು ನಂಬಿ, ನಮ್ಮವರಿಗೆ ಮುಂಗಡವಾಗಿ 4 ಕೋಟಿ ರೂಪಾಯಿ ಮತ್ತು ಮುಂದಿನ 36 ತಿಂಗಳವರೆಗೆ ತಿಂಗಳಿಗೆ 1 ಕೋಟಿ ರೂಪಾಯಿಯಂತೆ ಸಿಕ್ಕಿದೆ. ಹನಿ ಪ್ಲಸ್ ಮನಿ ಎಂದು ‘X’ ನಲ್ಲಿ ಪೋಸ್ಟ್ ಕುಟುಕಿದ್ದಾರೆ.
