ಬೆಳಗಾವಿ: ಬೆಳಗಾವಿಯಲ್ಲಿ 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣದಲ್ಲಿ ಎಫ್‌ಐಆರ್ ದಾಖಲು ಬೆನ್ನಲ್ಲೇ ಆರೋಪಿ ಶಿವಾನಂದ್ ನೀಲಣ್ಣವರ್ ಬಂಧಿಸಲಾಗಿದೆ.
ಬೆಳಗಾವಿಯಲ್ಲಿ ಮಾಜಿ ಸೈನಿಕರು ಹಾಗೂ ಸಾರ್ವಜನಿಕರ ಹಣ ದುರಪಯೋಗದ ಗಂಭೀರ ಆರೋಪ ಕೇಳಿ ಬಂದಿತ್ತು. ಬರೋಬ್ಬರಿ 4,500 ಸಾವಿರ ಜನ ಶಿವಂ ಅಸೋಸಿಯೇಟ್ಸ್ನಲ್ಲಿ 4,500 ಕೋಟಿ ರೂಪಾಯಿ ಹಣವನ್ನ ಹೂಡಿಕೆ ಮಾಡಿದ್ದಾರೆ. ಇಲ್ಲಿ ಯಾವುದೇ ನಿಯಮಗಳು ಪಾಲನೆಯಾಗಿಲ್ಲ, ಬದಲಿಗೆ ಹೆಚ್ಚಿನ ಬಡ್ಡಿ ಕೊಡುವ ಬಗ್ಗೆ ಆಮಿಷವೊಡ್ಡಲಾಗಿತ್ತು ಎಂಬ ಆರೋಪಗಳು ಸಹ ಇದೆ. ಗುರುವಾರ ಮಧ್ಯಾಹ್ನದಿಂದ ಮನೆ, ಕಚೇರಿ, ಅಪಾರ್ಟ್ಮೆಂಟ್ ಸೇರಿ ಎಲ್ಲಾ ಕಡೆ ಶೋಧ ಮಾಡಿದ ಅಧಿಕಾರಿಗಳು ಸದ್ಯ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ನಂತರ ಶಿವಾನಂದ ನೀಲಣ್ಣವರ್ ವಿರುದ್ಧ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಜನರ ಹಣಕ್ಕೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ ತನಿಖೆಗೆ ಡಿಸಿ ಮೊಹಮ್ಮದ್ ರೋಷನ್ ಆದೇಶ ಮಾಡಿದ್ದರು. ಇದರ ಬೆನ್ನಲ್ಲೇ ಶಿವಾನಂದಗೆ ಸೇರಿದ ಕಚೇರಿ, ಮನೆ, ಅಪಾರ್ಟಮೆಂಟ್ ಮೇಲೆ ಗುರುವಾರ ಸಂಜೆ ನಾಲ್ಕು ಗಂಟೆಯ ವೇಳೆಗೆ ಎಸಿ ಶ್ರವಣ ಕುಮಾರ್, ಸಹಕಾರ ಇಲಾಖೆಯ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಾಯ ಪಡೆದು ದಾಳಿ ಮಾಡಿದ್ದರು. ಈ ವೇಳೆಯಲ್ಲಿ ಬೆಚ್ಚಿ ಬಿಳಿಸುವ ದಾಖಲೆಗಳು ಪತ್ತೆಯಾಗಿವೆ.
ಶಿವಾನಂದ ನೀಲಣ್ಣವರ್ ಹೆಚ್ಚಿನ ಬಡ್ಡಿ ನೀಡುವುದಾಗಿ ಮಾಜಿ ಸೈನಿಕರು ಹಾಗೂ ಸಾರ್ವಜನಿಕರಿಂದ (40ರಿಂದ 45ಸಾವಿರ ಜನರಿಂದ) 4500 ಕೋಟಿ ರೂಪಾಯಿ ಹಣ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ. ಹಣ ಸಂಗ್ರಹಣೆಗೆ ಯಾವುದೇ ಆರ್‌ಬಿಐ ಗೈಡ್‌ಲೈನ್ಸ್ ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಗರ ಪೊಲೀಸ್ ಆಯುಕ್ತರ ಜಂಟಿಯಾಗಿ ದಾಳಿ ಮಾಡಿ ಪರಿಶೀಲನೆಗೆ ಸೂಚನೆ ನೀಡಿದ್ದರು.

