– ಶಸ್ತ್ರಾಸ್ತ್ರ ಹುಡುಕಲು ಹೋಗಿದ್ದ ಪೊಲೀಸರಿಗೆ ಸಿಕ್ಕಿದ್ದು ಭಾರಿ ಹಣ
ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಾಗರ್ ಜಿಲ್ಲೆಯ ಗೋಪಾಲಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ (ನಿನ್ನೆ) ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಆಟೋ ಚಾಲಕನ (Auto Driver) ಮನೆಯಲ್ಲಿ ಶಸ್ತ್ರಾಸ್ತ್ರ ಹುಡುಕಲು ಹೋಗಿದ ಪೊಲೀಸರು ಭಾರೀ ಹಣ ಕಂಡು ಬೆಚ್ಚಿಬಿದ್ದಿದ್ದಾರೆ.

ಹೌದು. ಆಟೋ ಚಾಲಕನ ಮನೆಯೊಂದರಲ್ಲಿ ಸುಮಾರು 3 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು (Cash Found), ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದೆ.
ಮನೆಯೊಂದರಲ್ಲಿ ಶಸ್ತ್ರಾಸ್ತ್ರ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಆದರೆ ಶೋಧದ ವೇಳೆ ಯಾವುದೇ ಶಸ್ತ್ರಾಸ್ತ್ರ ಪತ್ತೆಯಾಗಿಲ್ಲ. ಬದಲಾಗಿ, ಮನೆಯಲ್ಲಿದ್ದ ಚೀಲಗಳಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಹಣದ ಪ್ರಮಾಣ ಹೆಚ್ಚಿದ್ದರಿಂದ ಸ್ಥಳದಲ್ಲೇ ನೋಟು ಎಣಿಸುವ ಯಂತ್ರವನ್ನು ತರಿಸಿ ಎಣಿಕೆ ಮಾಡಬೇಕಾಯಿತು.

ಸೋಷಿಯಲ್ ಮೀಡಿಯಾದಲ್ಲಿ ವೈರಲ್
ವರದಿಗಳ ಪ್ರಕಾರ, ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಬಂದೂಕು ಹಿಡಿದಿರುವ ಫೋಟೋವನ್ನ ಹಂಚಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಗೋಪಾಲಗಂಜ್ ಪೊಲೀಸರು ರಾಜೇಶ್ ಅಹಿರ್ವಾರ್ ಅವರ ಪುತ್ರ ಸೌರಭ್ ಅವರ ಮನೆಗೆ ತೆರಳಿ ಶೋಧ ನಡೆಸಿದರು. ಶೋಧದ ವೇಳೆ ಯಾವುದೇ ಬಂದೂಕು ಅಥವಾ ಇತರೆ ಶಸ್ತ್ರಾಸ್ತ್ರ ಸಿಗಲಿಲ್ಲ. ಆದರೆ ಮನೆಯಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿದೆ. ಬಳಿಕ ಪ್ರಕರಣದ ತನಿಖೆಯ ದಿಕ್ಕೇ ಬದಲಾಗಿದೆ.
ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳದಲ್ಲೇ ನೋಟುಗಳ ಎಣಿಕೆ ಪ್ರಾರಂಭಿಸಲಾಯಿತು.
5 ಗಂಟೆ ಎಣಿಸಿ ಎಣಿಸಿ ಸುಸ್ತಾದ ಅಧಿಕಾರಿಗಳು
ಮನೆಯಲ್ಲಿ ಪತ್ತೆಯಾದ ನಗದು ಪ್ರಮಾಣ ಎಷ್ಟಿತ್ತೆಂದರೆ ಸುಮಾರು 5 ಗಂಟೆಗಳ ಕಾಲ ಅಧಿಕಾರಿಗಳು ಎಣಿಸಿ ಎಣಿಸಿಯೇ ಸುಸ್ತಾಗಿದ್ದರು. ಇದಕ್ಕಾಗಿ ನೋಟು ಎಣಿಸುವ ಯಂತ್ರವನ್ನೇ ಸ್ಥಳಕ್ಕೆ ತರಿಸಲಾಗಿತ್ತು. ಇದೇ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳನ್ನೂ ಸ್ಥಳಕ್ಕೆ ಕರೆಸಲಾಯಿತು.
ಸದ್ಯ ಪೊಲೀಸರು ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಅದರ ಮೂಲ ಮತ್ತು ಮಾಲೀಕತ್ವದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಹಣ ಎಂಜಿನಿಯರ್ ಸಂಬಂಧಿಕರದ್ದು
ಇನ್ನೂ ನಗದು ಪತ್ತೆಯಾದ ಬಳಿಕ ಮನೆಯಲ್ಲಿ ಇದ್ದ ಕುಟುಂಬ ಸದಸ್ಯರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕುಟುಂಬಸ್ಥರು, ಪತ್ತೆಯಾದ ಹಣವು ಭೋಪಾಲ್‌ನಲ್ಲಿ ಸರ್ಕಾರಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಿಕರೊಬ್ಬರಿಗೆ ಸೇರಿದ್ದು ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಆದರೆ ಹಣದ ನಿಜವಾದ ಮಾಲೀಕತ್ವ ಅಥವಾ ಅದರ ಮೂಲವನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಇಷ್ಟು ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಿ ಏಕೆ ಇರಿಸಲಾಗಿತ್ತು? ಹಣಕ್ಕೆ ಸೂಕ್ತ ದಾಖಲೆಗಳಿವೆಯೇ? ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಈ ಸಂಬಂಧ ಸೌರಭ್ ಅಹಿರ್ವಾರ್ ಮತ್ತು ಅಂಕಿತ್ ಅಹಿರ್ವಾರ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಅಕ್ರಮ ಹಣ ವರ್ಗಾವಣೆ ನಡೆದಿದೆಯೇ ಎನ್ನುವ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.
