– ಕರ್ನಾಟಕದಿಂದ ಕೇರಳಕ್ಕೆ ಹೋಗುತ್ತಿದ್ದ ಕಾರು
ತಿರುವನಂತಪುರಂ: ಕೇರಳ-ಕರ್ನಾಟಕ ಗಡಿಯ ಬಳಿ ವಯನಾಡಿನಲ್ಲಿ ವಾಹನ ತಪಾಸಣೆ ವೇಳೆ ಭಾರಿ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ. ಚಾಲಕನ ಸೀಟಿನ ಕೆಳಗೆ ಅಡಗಿಸಿಟ್ಟಿದ್ದ 1.44 ಕೋಟಿ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಿರುನೆಲ್ಲಿ ಪೊಲೀಸರು ಮತ್ತು ಜಿಲ್ಲಾ ಮಾದಕ ದ್ರವ್ಯ ವಿರೋಧಿ ವಿಶೇಷ ಕಾರ್ಯಪಡೆ (DANSAF) ತಂಡವು ಕರ್ನಾಟಕದ ಕಡೆಯಿಂದ ಬರುತ್ತಿದ್ದ ವಾಹನವನ್ನು ತಡೆದಾಗ ತೋಲ್ಪೆಟ್ಟಿಯಲ್ಲಿ ಹಣ ಸೀಜ್ ಮಾಡಿದ್ದಾರೆ.
ವಾಹನ ತಪಾಸಣೆ ವೇಳೆ ಚಾಲಕನ ಸೀಟಿನ ಕೆಳಗೆ ಬಚ್ಚಿಟ್ಟಿದ್ದ ನಗದು ಬಂಡಲ್‌ಗಳನ್ನು ಪೊಲೀಸರು ಪತ್ತೆಹಚ್ಚಿದರು. ಒಟ್ಟು 1,44,50,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಕೋಝಿಕ್ಕೋಡ್‌ನ ವಡಕರ ನಡಕ್ಕಾವು ಸ್ಟ್ರೀಟ್‌ನ ಪ್ರಭು ರಾಜ್ (20), ಕಣ್ಣೂರಿನ ಪಾನೂರಿನವರಾದ ಸ್ವಪ್ನಿಲ್ (23), ಮಹಾರಾಷ್ಟ್ರ ಮೂಲದ ರಾಹುಲ್ (26) ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಯಾರದ್ದು, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು, ಯಾರಿಗೆ ಕೊಡಲು ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಪೊಲೀಸರು ಮತ್ತು DANSAF ತಂಡ ಜಂಟಿಯಾಗಿ ನಡೆಸಿತು.
