ಬೆಂಗಳೂರು: ನಟ ಕೋಮಲ್ ಕುಮಾರ್ (Komal) ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರೋಲೆಕ್ಸ್’ (Rolex) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕೋಮಲ್‌ಗೆ ನಾಯಕಿಯಾಗಿ ಸೋನಾಲ್ ಮೊಂತೆರೊ (Sonal Montero) ನಟಿಸಿದ್ದು, ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಅರುಣಾ ಬಾಲರಾಜ್, ನವೀನ್ ಪಡೀಲ್, ರಾಣಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಬಳಿಕ ಚಿತ್ರತಂಡದ ಸದಸ್ಯರು ಸಿನಿಮಾದ ಬಗ್ಗೆ ಮಾತನಾಡಿದರು.
ಕಾಮಿಡಿ, ಪ್ರೀತಿ ಜೊತೆಗೆ ಕೌಟುಂಬಿಕ ಕಥೆ
ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ, ಚಿತ್ರದ ಮೊದಲ ಕಾಪಿ ನೋಡಿ ನಿರ್ಮಾಪಕರು ಖುಷಿಯಾಗಿದ್ದಾರೆ. ನಿರ್ಮಾಪಕರು ಸಂತಸಗೊಂಡಾಗ ನಿರ್ದೇಶಕರ ಶ್ರಮ ಸಾರ್ಥಕವಾದಂತೆ ಎಂದರು.
ಕೋಮಲ್ ಕುಮಾರ್ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡು ನಟಿಸಿದ್ದಾರೆ. ಚಿತ್ರದಲ್ಲಿ ಕಾಮಿಡಿ ಮತ್ತು ಪ್ರೀತಿಯ ಜೊತೆಗೆ ಭಾವನಾತ್ಮಕ ಕೌಟುಂಬಿಕ ಕಥೆಯಿದೆ. ಪ್ರೇಕ್ಷಕರಿಗೆ ನಗೆ ಹಬ್ಬದ ರಸದೌತಣ ನೀಡಲು ಕೋಮಲ್ ಸಜ್ಜಾಗಿದ್ದಾರೆ ಎಂದು ಹೇಳಿದರು.
ಸೋನಾಲ್ ಮೊಂತೆರೊ ಚಿತ್ರಕ್ಕೆ ಮತ್ತಷ್ಟು ಕಳೆ ತಂದಿದ್ದಾರೆ. ತಮ್ಮ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ‘ರೋಲೆಕ್ಸ್’ ಒಂದು ಮುಗ್ಧ ಭಾವನೆಯ ಕೌಟುಂಬಿಕ ಚಿತ್ರವಾಗಿದ್ದು, ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾ ಎಂದು ನಿರ್ದೇಶಕರು ತಿಳಿಸಿದರು.
ಇಂತಹ ಪಾತ್ರಕ್ಕಾಗಿ ಹುಡುಕುತ್ತಿದ್ದೆ ಎಂದ ಕೋಮಲ್
ನಟ ಕೋಮಲ್ ಕುಮಾರ್ ಮಾತನಾಡಿ, ವಿನೋದ್ ಪ್ರಭಾಕರ್ ಅವರೊಂದಿಗೆ ನಟಿಸಿದ್ದು ಖುಷಿ ಕೊಟ್ಟಿದೆ ಎಂದರು. ನಾಲ್ಕೈದು ಜನ ಬೇರೆ ಬೇರೆ ಸಿನಿಮಾಗಳನ್ನು ಮಾಡುವ ಬದಲು ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದರೆ ಚಿತ್ರರಂಗಕ್ಕೂ ಒಳ್ಳೆಯದು. ‘ರೋಲೆಕ್ಸ್’ ಚೆನ್ನಾಗಿ ಮೂಡಿಬಂದಿದೆ. ‘ಮಿಸ್ಟರ್ ಗರಗಸ’ ಚಿತ್ರದ ನಂತರ ಇಂತಹ ವಿಭಿನ್ನ ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದೆ. ಈಗ ಅಂತಹ ಪಾತ್ರ ಸಿಕ್ಕಿದೆ. ನಿರ್ದೇಶಕ ಶ್ರೀನಿವಾಸ್ ಕಥೆಗೆ ಏನು ಬೇಕೋ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ,” ಎಂದು ಕೋಮಲ್ ಹೇಳಿದರು. ಇದನ್ನೂ ಓದಿ: ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ‘ಕಾಕಾ’ ಗ್ಲಿಂಪ್ಸ್ ರಿಲೀಸ್
ಕೋಮಲ್ ಅವರ ಜೊತೆ ಕೆಲಸ ಮಾಡಿದ್ದು ಕಲಿಕೆಗೆ ಸಹಾಯವಾಯಿತು
ನಟಿ ಸೋನಾಲ್ ಮೊಂತೆರೊ ಮಾತನಾಡಿ, ನಿರ್ಮಾಪಕರು ಚಿತ್ರೀಕರಣದ ಸಮಯದಲ್ಲಿ ತಮ್ಮನ್ನು ಮಗಳಂತೆ ನೋಡಿಕೊಂಡಿದ್ದಾರೆ. ಇಡೀ ಚಿತ್ರತಂಡ ಕುಟುಂಬದಂತಿತ್ತು ಎಂದರು. ಇದೇ ಮೊದಲ ಬಾರಿಗೆ ಕೋಮಲ್ ಕುಮಾರ್ ಅವರೊಂದಿಗೆ ನಟಿಸಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದು ನನಗೆ ಸಾಕಷ್ಟು ಕಲಿಯಲು ಸಹಾಯವಾಯಿತು. ಮತ್ತೆ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ವಿನೋದ್ ಪ್ರಭಾಕರ್ ನನ್ನ ಅತ್ಯುತ್ತಮ ಸ್ನೇಹಿತರು. ಅವರ ಪಾತ್ರವೂ ಚೆನ್ನಾಗಿ ಮೂಡಿಬಂದಿದೆ. ನಾನು ಈವರೆಗೆ ಮಾಡಿರದ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ,” ಎಂದು ಸೋನಾಲ್ ಹೇಳಿದರು.
ರೋಲೆಕ್ಸ್ ಎಲ್ಲರನ್ನೂ ಮನರಂಜಿಸಲಿದೆ
ನಟ ವಿನೋದ್ ಪ್ರಭಾಕರ್ ಮಾತನಾಡಿ, ಚಿತ್ರದಲ್ಲಿ ತಾವು ವಿಶೇಷ ಹಾಗೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿದರು. ಮಾದೇವ ಚಿತ್ರದ ಬಳಿಕ ಸೋನಾಲ್ ಮೊಂತೆರೊ ಅವರೊಂದಿಗೆ ‘ರೋಲೆಕ್ಸ್’ ಚಿತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಸೋನಾಲ್ ಅವರೇ ನೀಡಿದ್ದಾರೆ. ಇದು ಎಲ್ಲರನ್ನು ಮನರಂಜಿಸುವ ಚಿತ್ರವಾಗಲಿದೆ. ಇಡೀ ಚಿತ್ರತಂಡದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದರು.
ಸಿನಿಮಾಗೆ ಯಾವುದೇ ಭಾಷೆ, ಗಡಿ ಇಲ್ಲ
ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಮಾತನಾಡಿ, ಲೈಟ್‌ಬಾಯ್‌ನಿಂದ ಹಿಡಿದು ನಿರ್ದೇಶಕರವರೆಗೆ ಪ್ರತಿಯೊಬ್ಬರ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದರು. ಸಿನಿಮಾಗೆ ಯಾವುದೇ ಭಾಷೆ ಅಥವಾ ಗಡಿ ಇಲ್ಲ. ತೆಲುಗಿನಿಂದ ಬಂದು ಕನ್ನಡ ಸಿನಿಮಾ ಮಾಡಿದ್ದೇನೆ. ಈ ಹಿಂದೆ ಆಂಧ್ರಪ್ರದೇಶದಲ್ಲೂ ಡಾ. ರಾಜ್‌ಕುಮಾರ್ ಅವರ ಸಿನಿಮಾಗಳು ಪ್ರದರ್ಶನ ಕಂಡು ಜನಪ್ರಿಯವಾಗಿದ್ದವು. ಈಗ ಡಬ್ಬಿಂಗ್ ಸಿನಿಮಾಗಳು ಕೂಡ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಾಣುತ್ತಿವೆ,” ಎಂದು ಹೇಳಿದರು.

ನಾಯಕನಾಗಿ ಚಿತ್ರರಂಗಕ್ಕೆ ಬಂದು ಬಳಿಕ ನಿರ್ಮಾಪಕರಾಗಿದ್ದೇನೆ. ಕಲಾವಿದರಿಗೆ ಇರುವ ಜನಪ್ರಿಯತೆ ಬೇರೆ ಯಾರಿಗೂ ಇಲ್ಲ. ಕೋಮಲ್ ಅವರ ಪಾತ್ರವನ್ನು ನೋಡಿ ಮೂಕವಿಸ್ಮಿತನಾಗಿದ್ದೇನೆ ಎಂದರು.
ಸೋನಾಲ್ ಮೊಂತೆರೊ ಅವರನ್ನು ತಮ್ಮ ಮೂರನೇ ಮಗಳಂತೆ ನೋಡಿಕೊಳ್ಳುವುದಾಗಿ ಹೇಳಿದ ಅವರು, ಸೋನಾಲ್ ಕೂಡ ಅಷ್ಟೇ ಪ್ರೀತಿ ತೋರಿಸುತ್ತಾರೆ ಎಂದರು. ವಿನೋದ್ ಪ್ರಭಾಕರ್ ಅವರ ಪಾತ್ರವೂ ಉತ್ತಮವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಸಸ್ಪೆನ್ಸ್ ಮತ್ತು ಕಾಮಿಡಿ ಇದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಫಾದರ್ : ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್ ಕಾಂಬಿನೇಷನ್ ಜೋರು
ಕಾರ್ಯಕಾರಿ ನಿರ್ಮಾಪಕ ಮುರುಳಿ ಕೃಷ್ಣ ಮಾತನಾಡಿ, ತಮ್ಮ ಮೇಲೆ ನಂಬಿಕೆ ಇಟ್ಟು ಬಂಡವಾಳ ಹೂಡಿದ ನಿರ್ಮಾಪಕರಿಗೆ ಬೆನ್ನೆಲುಬಾಗಿ ನಿಂತಿದ್ದೇನೆ. ಕಲಾವಿದರು ಮತ್ತು ತಂತ್ರಜ್ಞರ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದರು.
ಕಲಾವಿದರಾದ ರಾಣಾ, ಸುನಂದ ಕಲಬುರಗಿ, ಛಾಯಾಗ್ರಾಹಕ ರಾಕೇಶ್ ತಿಲಕ್, ಸಂಕಲನಕಾರ ಅರವಿಂದ್ ರೆಡ್ಡಿ, ಕ್ರಿಯೇಟಿವ್ ಹೆಡ್ ರಾಜೇಶ್ ವರ್ಮ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ‘ರೋಲೆಕ್ಸ್’ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
