– ಭಕ್ತರ ಹಣ ದೋಚಲು ನಕಲಿ ಕಾಣಿಕೆ ಪೆಟ್ಟಿಗೆ
– ಎಸ್‌ಬಿಐ ಸಿಬ್ಬಂದಿಗೂ ತನಿಖೆಯ ಬಿಸಿ
– ರಾಮನ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ
ಲಕ್ನೋ: ಅಯೋಧ್ಯೆಯ(Ayodhya) ಶ್ರೀ ರಾಮ ಮಂದಿರದ ಕಾಣಿಕೆ ಹಣ ದುರುಪಯೋಗ ಪ್ರಕರಣದ (Ram Temple Donation Theft Case) ಪ್ರಮುಖ ಆರೋಪಿ ಅವಿನಾಶ್ ಶುಕ್ಲಾನ (Avinash Shukla) ಬಾಡಿಗೆ ಮನೆಯ ಮೇಲೆ ವಿಶೇಷ ತನಿಖಾ ತಂಡ (SIT) ನಡೆಸಿದ ಜಂಟಿ ದಾಳಿಯ ವೇಳೆ, ಭಕ್ತರನ್ನು ವಂಚಿಸಲು ಬಳಸುತ್ತಿದ್ದ ನಕಲಿ “ರಾಮರಾಜ್ಯ ಕೋಶ” ಕಾಣಿಕೆ ಪೆಟ್ಟಿಗೆ ಮತ್ತು ಅದಕ್ಕೆ ಅಂಟಿಸಲಾಗಿದ್ದ ಡಿಜಿಟಲ್ ಕ್ಯೂಆರ್ ಕೋಡ್ (QR Code) ಪತ್ತೆಯಾಗಿದೆ.
ಭಕ್ತರು ದೇವಸ್ಥಾನಕ್ಕೆ ನೀಡುತ್ತಿದ್ದ ಕಾಣಿಕೆಯನ್ನು ಲೂಟಿ ಮಾಡಲು ಆರೋಪಿಗಳು ಡಿಜಿಟಲ್ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡಿರುವುದು ಈ ಸಾಕ್ಷ್ಯದಿಂದ ಸಾಬೀತಾಗಿದ್ದು, ಸದ್ಯ ಇಡೀ ಪ್ರಕರಣ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದೆ.
ಎಸ್‌ಐಟಿ ಜಂಟಿ ಶೋಧದ ವೇಳೆ ಆರೋಪಿ ಅವಿನಾಶ್ ಶುಕ್ಲಾ ವಾಸವಿದ್ದ ಬಾಡಿಗೆ ಮನೆ(ಯೋಗ ಕೇಂದ್ರದ) ಕೊಠಡಿಯಲ್ಲಿ ರಾಮರಾಜ್ಯ ಕೋಶ(Ramrajya Kosh) ಎಂದು ಬರೆಯಲಾದ ಮರದ ಕಾಣಿಕೆ ಪೆಟ್ಟಿಗೆಯೊಂದು ಸಿಕ್ಕಿದೆ. ಈ ಪೆಟ್ಟಿಗೆಯ ಮೇಲೆ ಡಿಜಿಟಲ್ ಪಾವತಿಗಾಗಿ ಯುಪಿಐ ಕ್ಯೂಆರ್ ಕೋಡ್ ಅನ್ನು ಕೂಡ ಅಂಟಿಸಲಾಗಿದೆ.
ಈ ಕ್ಯೂಆರ್ ಕೋಡ್ ಕೇವಲ ಒಂದು ಬ್ಯಾಂಕ್ ಖಾತೆಗೆ ಸೀಮಿತವಾಗಿರಲಿಲ್ಲ. ಭಕ್ತರನ್ನು ದಾರಿ ತಪ್ಪಿಸಲು ರಾಮರಾಜ್ಯ ಕೋಶ ಮತ್ತು “ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ” ಎಂಬ ಹೆಸರನ್ನೇ ಹೋಲುವ ನಕಲಿ ಯುಪಿಐ ಐಡಿಗಳನ್ನು ಇವರು ಸೃಷ್ಟಿಸಿದ್ದರು. ಭಕ್ತರು ತಾವೂ ನೇರವಾಗಿ ದೇವಸ್ಥಾನದ ಟ್ರಸ್ಟ್‌ಗೇ ಹಣ ಕಳುಹಿಸುತ್ತಿದ್ದೇವೆ ಎಂದು ನಂಬಿ ಸ್ಕ್ಯಾನ್ ಮಾಡಿಸುತ್ತಿದ್ದರು. ಆದರೆ ಆ ಹಣ ನೇರವಾಗಿ ಆರೋಪಿಗಳ ವೈಯಕ್ತಿಕ ಖಾತೆಗಳಿಗೆ ಜಮೆಯಾಗುತ್ತಿತ್ತು. ಇದನ್ನೂ ಓದಿ: Ram Temple Theft| ಆರೋಪಿಗಳ ಆಸ್ತಿ 100 ಪಟ್ಟು ಹೆಚ್ಚಳ; ಡಿಲೀಟ್ ಆಯ್ತು ಮೊಬೈಲ್ ಡೇಟಾ
ಈ ಕ್ಯೂಆರ್ ಕೋಡ್ ಅನ್ನು ಸಿದ್ಧಪಡಿಸಿಕೊಟ್ಟಿದ್ದು ಯಾರು? ಇದು ಯಾವಾಗದಿಂದ ಕಾರ್ಯನಿರ್ವಹಿಸುತ್ತಿದೆ? ಮತ್ತು ಇದರ ಮೂಲಕ ಭಕ್ತರಿಂದ ಎಷ್ಟು ಹಣವನ್ನು ದೋಚಲಾಗಿದೆ ಎಂಬ ವಿವರಗಳನ್ನು ಕಲೆಹಾಕಲಾಗುತ್ತಿದೆ. ಸಂಗ್ರಹವಾದ ಕೋಟ್ಯಂತರ ರೂಪಾಯಿ ಹಣ ಯಾವ ಬ್ಯಾಂಕ್ ಖಾತೆಗಳಿಗೆ ಹೋಗಿದೆ? ಅಲ್ಲಿಂದ ಬೇರೆ ಯಾರಿಗೆಲ್ಲ ವರ್ಗಾವಣೆಯಾಗಿದೆ ಎಂಬುದರ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಲಾಗುತ್ತಿದೆ.
VIDEO | Uttar Pradesh: Ayodhya Police is investigating an alleged donation embezzlement case linked to the Ram Temple, with serious allegations against Avinash Shukla. Police reportedly recovered over Rs 20 lakh in cash during a raid on his rented house on June 5.
Volunteer… pic.twitter.com/Pnh2ov6Qm7
— Press Trust of India (@PTI_News) July 1, 2026
ಆಸ್ತಿ ಜಪ್ತಿಗೆ ಸಿದ್ಧತೆ
ವಂಚನೆ ಮಾಡಿದ ಹಣದಿಂದ ಆರೋಪಿಗಳು ಎಲ್ಲಾದರೂ ಭೂಮಿ, ವಾಹನ ಅಥವಾ ಇನ್ಯಾವುದೇ ಆಸ್ತಿ ಖರೀದಿಸಿದ್ದಾರೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಿ, ಆ ಆಸ್ತಿಗಳನ್ನು ಜಪ್ತಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಆರೋಪಿಗಳ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಡಿಜಿಟಲ್ ಡ್ರೈವ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ಡಿಲೀಟ್ ಮಾಡಲಾದ ಚಾಟ್‌ಗಳು ಮತ್ತು ಹಣದ ವ್ಯವಹಾರದ ಡೇಟಾವನ್ನು ಮರುಪಡೆಯಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾಗಿರುವ ಎಂಟು ಆರೋಪಿಗಳ ಮನೆಗಳ ಮೇಲೆ ಸ್ಥಳೀಯ ಮ್ಯಾಜಿಸ್ಟ್ರೇಟ್‌ಗಳ ಸಮ್ಮುಖದಲ್ಲಿ ಪೊಲೀಸರು ಏಕಕಾಲಕ್ಕೆ ಸರಣಿ ದಾಳಿ ನಡೆಸಿದ್ದಾರೆ. ಈ ವೇಳೆ ತನಿಖೆಗೆ ಪೂರಕವಾದ ಹಲವು ಪ್ರಮುಖ ದಾಖಲೆಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ರಾಮನ ದೇಣಿಗೆ ಕದ್ದವರ ಪರ ವಕಾಲತ್ತು ವಹಿಸಿದ್ರೆ 5 ಲಕ್ಷ ದಂಡ – ಬಾರ್ ಅಸೋಸಿಯೇಷನ್ ಖಡಕ್ ಎಚ್ಚರಿಕೆ

ವ್ಯವಸ್ಥೆಯ ಲೋಪದೋಷಗಳೇ ವರದಾನ
ಪ್ರಾಥಮಿಕ ತನಿಖೆಯ ಪ್ರಕಾರ, ರಾಮ ಮಂದಿರದ ಕಾಣಿಕೆ ನಿರ್ವಹಣೆಯಲ್ಲಿ ಭಾರಿ ಪ್ರಮಾಣದ ಲೋಪದೋಷಗಳು ನಡೆದಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಕಾಣಿಕೆ ಹಣ ಎಣಿಕೆ ಮತ್ತು ಸಂಗ್ರಹಣೆಯ ಮೇಲ್ವಿಚಾರಣೆಯಲ್ಲಿ ಭದ್ರತಾ ಲೋಪವಿತ್ತು.ಹೊರಗುತ್ತಿಗೆ (Outsource) ಆಧಾರದ ಮೇಲೆ ನೇಮಕಗೊಂಡಿದ್ದ ನೌಕರರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಿರಲಿಲ್ಲ. ಸಿಸಿಟಿವಿಗಳ ಉಸ್ತುವಾರಿ ಮತ್ತು ಬ್ಯಾಂಕ್ ವಹಿವಾಟುಗಳ ಮೇಲ್ವಿಚಾರಣೆಯಲ್ಲಿನ ನಿರ್ಲಕ್ಷ್ಯವನ್ನು ಬಳಸಿಕೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ.
ಎಸ್‌ಬಿಐ ಮೇಲೆ ಅನುಮಾನ
ರಾಮ ಮಂದಿರದ ಕಾಣಿಕೆ ಖಾತೆಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೂಡ ಈಗ ತನಿಖೆಯ ವ್ಯಾಪ್ತಿಗೆ ಬಂದಿದೆ. ಖಾಸಗಿ ಏಜೆನ್ಸಿಗಳ ಮೂಲಕ ಬ್ಯಾಂಕ್ ನಿಯೋಜಿಸಿದ್ದ ಹೊರಗುತ್ತಿಗೆ ಸಿಬ್ಬಂದಿಯ ಪಾತ್ರದ ಬಗ್ಗೆ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಬ್ಯಾಂಕ್ ಖಾತೆಗಳ ವಿವರ ಮತ್ತು ಆರ್ಥಿಕ ವಹಿವಾಟುಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗುತ್ತಿದೆ.
ಕ್ಯೂಆರ್ ಕೋಡ್ ಹಿಂದೆ ಪ್ರಭಾವಿಗಳು
ದೇಶದ ಇತರೆಡೆಗಳಲ್ಲೂ ಇಂತಹ ನಕಲಿ ಕ್ಯೂಆರ್ ಕೋಡ್ ಅಥವಾ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದೆಯೇ ಮತ್ತು ಈ ಸಂಚಿನ ಹಿಂದೆ ಇನ್ನು ಯಾರಾದರೂ ಪ್ರಭಾವಿಗಳಿದ್ದಾರೆಯೇ ಎಂಬ ತನಿಖೆ ಮುಂದುವರಿದಿದೆ. ಮುಂಬರುವ ದಿನಗಳಲ್ಲಿ ಈ ಪ್ರಕರಣದಲ್ಲಿ ಇನ್ನೂ ಹಲವರ ಬಂಧನವಾಗುವ ಸಾಧ್ಯತೆಯಿದೆ.
ನ್ಯಾಯಾಲಯವು ತನಿಖಾ ಸಂಸ್ಥೆಗೆ ಇನ್ನು 15 ದಿನಗಳ ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ವಂಚನೆಯಾದ ಒಟ್ಟು ಮೊತ್ತದ ನಿಖರ ಮಾಹಿತಿ ಮತ್ತು ಈ ಜಾಲದ ಹಿಂದೆ ಇನ್ನು ಯಾರಾದರೂ ಪ್ರಭಾವಿ ವ್ಯಕ್ತಿಗಳಿದ್ದಾರೆಯೇ ಎಂಬುದು ಸಂಪೂರ್ಣವಾಗಿ ಹೊರಬರಬೇಕಿದೆ.
