ಬಾಗಲಕೋಟೆ: ಜಿಲ್ಲೆಯ ಇಳಕಲ್ ಭಾಗದ ಮಹಿಳೆ, ಶಾಲೆಯ ಮೆಟ್ಟಿಲು ಹತ್ತದಿದ್ದರೂ ಸೂಜಿ–ದಾರದ ಮೂಲಕ ಕಲೆಯ ಲೋಕವನ್ನೇ ಸೃಷ್ಟಿಸಿದ ಗ್ರಾಮೀಣ ಮಹಿಳೆಯೊಬ್ಬರ ಕಲಾ ಸಾಧನೆಗೆ ಇದೀಗ ನಾಡಿನ ಗೌರವ (Karnataka Rajyotsava Award 2026) ಸಂದಿದೆ.
ಇಳಕಲ್ ತಾಲೂಕಿನ ಕೋಡಿಹಾಳ ಗ್ರಾಮದ ಗೋಂದಳಿ ಬುಡುಬುಡುಕಿ (ವಿಮುಕ್ತ ಬುಡಕಟ್ಟು) ಸಮುದಾಯದ ಕೌದಿ ಕಸೂತಿ ಕಲಾವಿದೆ ರುಕ್ಮಿಣಿಬಾಯಿ ನಾಗಪ್ಪ ವಾಷ್ಠರ್ ಅವರು 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸೂಜಿ–ದಾರವೇ ಬದುಕಿನ ಬಂಡವಾಳ
ಔಪಚಾರಿಕ ಶಿಕ್ಷಣ ಪಡೆಯದ ರುಕ್ಮಿಣಿಬಾಯಿ ಅವರಿಗೆ ಓದು–ಬರಹ ತಿಳಿದಿಲ್ಲ. ಆದರೆ, ಬಾಲ್ಯದಿಂದಲೇ ತಮ್ಮ ಸಮುದಾಯದ ಸಾಂಪ್ರದಾಯಿಕ ಕಲೆಯಾದ ಕೌದಿ ಹೊಲಿಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹಳೆಯ ಬಟ್ಟೆಗಳ ಚಿಂದಿಗಳನ್ನು ಜೋಡಿಸಿ, ಸೂಜಿ–ದಾರದ ಮೂಲಕ ವಿವಿಧ ಜ್ಯಾಮಿತೀಯ ಆಕಾರಗಳು, ಚಿತ್ತಾರಗಳು ಹಾಗೂ ಪ್ರಕೃತಿಯ ವಿನ್ಯಾಸಗಳನ್ನು ಮೂಡಿಸುವ ಕಲೆಯಲ್ಲಿ ಅವರು ಪರಿಣತಿ ಪಡೆದಿದ್ದಾರೆ.
ಕೌದಿ ಕಸೂತಿ ಕೇವಲ ಕುಲಕಸುಬಾಗಿ ಉಳಿಯದೆ, ಅವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ವರ್ಷಗಳ ಪರಿಶ್ರಮ, ಅನುಭವ ಮತ್ತು ಕಲೆಯ ಮೇಲಿನ ಆಸಕ್ತಿ ಅವರ ಕೈಚಳಕದಲ್ಲಿ ಪ್ರತಿಬಿಂಬಿಸಿವೆ.
ಕಲಾ ಸಾಧನೆಗೆ ರಾಜ್ಯದ ಮನ್ನಣೆ
ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕರಕುಶಲ ಕಲೆಯ ಪ್ರತೀಕವಾಗಿರುವ ಕೌದಿ ಕಲೆಯ ಉಳಿವು ಹಾಗೂ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿರುವ ರುಕ್ಮಿಣಿಬಾಯಿ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದನ್ನೂ ಓದಿ: ಕಬ್ಬು ಬೆಳೆಗಾರರ ಹೋರಾಟಕ್ಕೆ ಜಿಲ್ಲಾಡಳಿತ ಬ್ರೇಕ್ – ರಾಷ್ಟ್ರೀಯ ಹೆದ್ದಾರಿ, ಟೋಲ್ ಪ್ಲಾಜಾಗಳ ಬಂದ್ಗೆ ನಿಷೇಧಾಜ್ಞೆ ಜಾರಿ
ಗ್ರಾಮೀಣ ಭಾಗದ ಅನಕ್ಷರಸ್ಥ ಮಹಿಳೆಯೊಬ್ಬರ ಸಾಂಪ್ರದಾಯಿಕ ಕಲಾ ಸಾಧನೆಗೆ ರಾಜ್ಯಮಟ್ಟದ ಗೌರವ ದೊರೆತಿರುವುದು ಕೋಡಿಹಾಳ ಗ್ರಾಮ ಸೇರಿದಂತೆ ಇಳಕಲ್, ಹುನಗುಂದ ಹಾಗೂ ಬಾಗಲಕೋಟೆ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.
ಓದು–ಬರಹ ಬಾರದ ನಮಗೆ ಸೂಜಿ–ದಾರವೇ ಸರ್ವಸ್ವ. ನಮ್ಮ ಕುಲಕಸುಬಾದ ಕೌದಿ ಹೊಲಿಯುವ ಕಲೆಯನ್ನು ಗುರುತಿಸಿ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ನಮ್ಮ ಇಡೀ ಕುಟುಂಬ ಹಾಗೂ ಸಮುದಾಯಕ್ಕೆ ಅಪಾರ ಸಂತೋಷ ತಂದಿದೆ ಎಂದು ರುಕ್ಮಿಣಿಬಾಯಿ ನಾಗಪ್ಪ ವಾಷ್ಠರ್ ಸಂತಸ ವ್ಯಕ್ತಪಡಿಸಿದ್ದಾರೆ.
ಅಕ್ಷರ ಜ್ಞಾನವಿಲ್ಲದ ಕೈಗಳಲ್ಲೂ ಅಪರೂಪದ ಕಲಾ ಪ್ರತಿಭೆ ಅರಳಬಲ್ಲದು ಎಂಬುದಕ್ಕೆ ರುಕ್ಮಿಣಿಬಾಯಿ ಅವರ ಸಾಧನೆಯೇ ಸಾಕ್ಷಿಯಾಗಿದೆ.ಇದನ್ನೂ ಓದಿ: 2019ರಲ್ಲಿಯೇ `ಪಬ್ಲಿಕ್ ಟಿವಿ’ ಗುರುತಿಸಿದ್ದ ಶಿವಾನಂದ ಸ್ವಾಮೀಜಿಗೆ ರಾಜ್ಯೋತ್ಸವ ಪ್ರಶಸ್ತಿ

