ಚಿತ್ರದುರ್ಗ: ಕಾಂಗ್ರೆಸ್ (Congress) ಮಾಜಿ ಎಂಎಲ್‌ಸಿ ರಘು ಆಚಾರ್ (Raghu Achar) ನೂತನ ಗೃಹ ಪ್ರವೇಶದ ಹಿನ್ನೆಲೆಯಲ್ಲಿ ಚಿತ್ರದುರ್ಗದ (Chitradurga) ಜಿಜೆಪಿ (BJP) ಶಾಸಕ ಜಿಹೆಚ್ ತಿಪ್ಪಾರೆಡ್ಡಿಯವರ (GH Thippareddy) ಕಾಲು ಮುಗಿದು ಗೃಹಪ್ರವೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ ಕೈ ಕಾರ್ಯಕರ್ತರು ಆಚಾರ್ ನಡೆ ವಿರುದ್ಧ ಕಿಡಿ ಕಾರಿದ್ದಾರೆ.
ಮುಂಬರುವ 2023ರ ವಿಧಾನಸಭಾ ಚುನಾವಣೆಯ ಪ್ರತಿಸ್ಪರ್ಧಿಗಳೆಂದು ಬಿಂಬಿತವಾಗಿರುವ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹಾಗೂ ರಘು ಆಚಾರ್ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿರುವ ಆಚಾರ್, ಆಹ್ವಾನ ಪತ್ರಿಕೆ ಕೊಟ್ಟು, ಶಾಸಕ ತಿಪ್ಪಾರೆಡ್ಡಿ ಕಾಲಿಗೆ ಬಿದ್ದಿರುವುದು ಹೊಸ ಚರ್ಚೆಗೆ ದಾರಿಯಾಗಿದೆ.
ಬಿಜೆಪಿ ಶಾಸಕರಲ್ಲದೇ, ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಸ್.ಕೆ ಬಸವರಾಜನ್ ಮನೆಗೂ ಭೇಟಿ ನೀಡಿರುವ ಆಚಾರ್ ಅವರು, ಬಸವರಾಜನ್ ಪತ್ನಿ ಹಾಗೂ ಮಾಜಿ ಜಿ.ಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ (Soubhagya Basavarajan) ಕಾಲು ಮುಗಿದು ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ಜೆ.ಪಿ ನಡ್ಡಾ ಭೇಟಿಯಾದ ಸುಮಲತಾ- ಬಹುತೇಕ ಬಿಜೆಪಿ ಸೇರ್ಪಡೆ ಖಚಿತ
ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಇಂತಹ ಸಂದರ್ಭದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರತಿಸ್ಪರ್ಧಿಗಳ ಕಾಲು ಮುಗಿದು ಆಹ್ವಾನಿಸಿರುವ ಮಾಜಿ ಎಂಎಲ್‌ಸಿ ರಘು ಆಚಾರ್ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಹೀಗಾಗಿ 2023ರ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಜ್ಜಾಗಿರುವ ಆಚಾರ್ ನಡೆ ಬಗ್ಗೆ ಭಾರೀ ಅನುಮಾನ ಮೂಡಿಸಿದೆ.
ಬಿಜೆಪಿಯಿಂದ ಸ್ಪರ್ಧಿಸಲಿರುವ ಶಾಸಕ ತಿಪ್ಪಾರೆಡ್ಡಿ ಹಾಗೂ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಬಸವರಾಜನ್ ಪತ್ನಿ ಕಾಲಿಗೆ ಬಿದ್ದಿರುವ ಆಚಾರ್ ನಡೆ ಬಗ್ಗೆ ಕೋಟೆನಾಡಲ್ಲಿ ಹೊಸ ಚರ್ಚೆ ಶುರುವಾಗಿದೆ. ಇದು ರಾಜಿ ಸಂಧಾನದ ಯತ್ನವೋ ಅಥವಾ ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಸಂಬಂಧದ ಬಾವವೇ ಬೇರೆ ಎಂದು ಸಂದೇಶ ನೀಡುವ ಯತ್ನವೋ ಎಂಬ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಏಕವಚನದಲ್ಲಿಯೇ ವಾಗ್ದಾಳಿ ನಡೆಸಿ ಹೆಚ್‍ಡಿಕೆಗೆ ಶಿವನಗೌಡ ಸವಾಲ್