ಚಂಡೀಗಢ: ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಎಲ್ಲರ ಗಮನ ಸೆಳೆದರು. ಇದರ ಬೆನ್ನಲ್ಲೇ ಇದೀಗ ಕ್ರಿಸ್ ಗೇಲ್ (Chris Gayle) ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅತ್ಯುತ್ತಮ ವೈಭವ್ ಸೂರ್ಯವಂಶಿ, ಹೊಸ ಸಿಕ್ಸರ್ ಯಂತ್ರ ಎಂದು ಬಣ್ಣಿಸಿದ್ದಾರೆ.
ಈ ಪಂದ್ಯದಲ್ಲಿ ಕೇವಲ 3 ರನ್‌ಗಳ ಅಂತರದಲ್ಲಿ ಅವರು ಶತಕ ವಂಚಿತರಾದರು. 2012ರ ಐಪಿಎಲ್ ಆವೃತ್ತಿಯಲ್ಲಿ ಕ್ರಿಸ್ ಗೇಲ್ 59 ಸಿಕ್ಸರ್ ಸಿಡಿಸಿದ್ದರು. ಈ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ. ಸೂರ್ಯವಂಶಿ ಒಟ್ಟು ಈ ಋತುವಿನಲ್ಲಿ ಒಟ್ಟು 65 ಸಿಕ್ಸರ್ ಸಿಡಿಸಿ ಐಪಿಎಲ್ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ನಡುವೆ ವೈಭವ್ ಸೂರ್ಯವಂಶಿ ಗೇಲ್ ಅವರ ಅತ್ಯಂತ ವೇಗದ ಐಪಿಎಲ್ ಶತಕದ(30 ಎಸೆತ) ಸಿಡಿಸಿ ಈ ದಾಖಲೆ ಮುರಿಯುವುದನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೇಲ್, ಇದು ದುರದೃಷ್ಟಕರ, ಆದರೆ ಅವರು ಈ ದಾಖಲೆಯನ್ನು ಮುರಿಯುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಋತುವಿನಲ್ಲಿ ಸೂರ್ಯವಂಶಿ 15 ಇನ್ನಿಂಗ್ಸ್‌ಗಳಲ್ಲಿ 45.33 ಸರಾಸರಿಯಲ್ಲಿ ಮತ್ತು 242.85 ಸ್ಟ್ರೈಕ್ ರೇಟ್‌ನಲ್ಲಿ 680 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಒಳಗೊಂಡಿವೆ. ಅವರು ಎದುರಿಸಿರುವ 280 ಎಸೆತಗಳಲ್ಲಿ 55 ಬೌಂಡರಿ ಮತ್ತು 65 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರ ಬೌಂಡರಿ ಶಾಟ್‌ಗಳ ಅನುಪಾತ ಶೇ.2.3 ಮತ್ತು ಪ್ರತಿ ಆರು ಎಸೆತಗಳ ಅನುಪಾತವು ಶೇ4.3 ರಷ್ಟಿದೆ. 2019ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಂಡ್ರೆ ರಸೆಲ್ 510 ರನ್ ಕಲೆಹಾಕಿದ್ದರು. ಇದರಲ್ಲಿ ಶೇ.85.5 ರಷ್ಟು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದ್ದರು. ಇತ್ತ ವೈಭವ್ ಶೇ.88.9 ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ಐಪಿಎಲ್ ಇನ್ನಿಂಗ್ಸ್‌ವೊಂದರಲ್ಲಿ 10ಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿ ಗೇಲ್ ಅವರ ಈ ಹಿಂದಿನ ದಾಖಲೆಗಳನ್ನು ಸರಿಗಟ್ಟಿದ್ದಾರೆ. ಈ ಋತುವಿನಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ 10ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸುವ ಮೂಲಕ ಈ ದಾಖಲೆ ಬರೆದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
What a phenomenal player Vaibhav is. Great entertainment young man! New Six machine @IPL pic.twitter.com/ofElAousF7
— Chris Gayle (@henrygayle) May 27, 2026
ದಾಖಲೆಗಳು ಪುಡಿ ಪುಡಿ:
ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿ ಕೇವಲ ಎರಡು ಆವೃತ್ತಿಗಳಲ್ಲೇ ಹಲವು ಕ್ರಿಕೆಟ್ ದಿಗ್ಗಜರ ದಾಖಲೆ ಹಿಂದಿಕ್ಕಿರುವ ವೈಭವ್ ಸೂರ್ಯವಂಶಿ, 2008ರಲ್ಲಿ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಹಾಗೂ ಚೆನ್ನೈ ನಡುವಣ ನಡೆದಿದ್ದ ಪಂದ್ಯದ ಪವರ್ ಪ್ಲೇನಲ್ಲಿ 7 ಸಿಕ್ಸರ್ ಬಾರಿಸಿದ್ದ ಶ್ರೀಲಂಕಾದ ಬ್ಯಾಟರ್ ಸನತ್ ಜಯಸೂರ್ಯ ಅವರ ದಾಖಲೆಯನ್ನು ಕೂಡ ಹಿಂದಿಕ್ಕಿದ್ದಾರೆ.
ಪವರ್ ಪ್ಲೇನಲ್ಲಿ ಅತಿ ಹೆಚ್ಚು ರನ್:
ಈ ಹಿಂದೆ 2016ರ ಐಪಿಎಲ್ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ಅವರು ಆ ಋತುವಿನ ಎಲ್ಲಾ ಪಂದ್ಯಗಳ ಪವರ ಪ್ಲೇನಲ್ಲಿ ಎಸ್‌ಆರ್‌ಹೆಚ್ ಪರ 467 ರನ್ ಕಲೆಹಾಕಿದ್ದರು. ವೈಭವ್ ಸೂರ್ಯವಂಶಿ ಈ ಸೀಸನ್‌ನಲ್ಲಿ 490 ರನ್ ಕಲೆಹಾಕುವುದರ ಮೂಲಕ ಆ ದಾಖಲೆಯನ್ನೂ ಕೂಡ ಹಿಂದಿಕ್ಕಿದ್ದಾರೆ.
ವೈಭವ್ ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದ ಪವರ್ ಪ್ಲೇನಲ್ಲೇ ಅರ್ಧಶತಕ ಬಾರಿಸಿದ್ದರು. ಈ ಮೂಲಕ ಅವರು ಪವರ್‌ಪ್ಲೇನಲ್ಲಿ ಒಟ್ಟು 5 ಬಾರಿ 50ಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಇತ್ತ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 6 ಬಾರಿ 50+ ರನ್ ಬಾರಿಸಿ ಅವರಿಗಿಂತ ಮುಂದಿದ್ದಾರೆ.
ಪ್ಲೇಆಫ್ ಪಂದ್ಯವೊಂದರಲ್ಲಿ 50+ ಸ್ಕೋರ್:
ಐಪಿಎಎಲ್ ನಾಕೌಟ್ ಪಂದ್ಯದಲ್ಲಿ ಈ ಹಿಂದೆ 2014ರಲ್ಲಿ ಸುರೇಶ್ ರೈನಾ 87 ರನ್ ಹಾಗೂ 2009 ರಲ್ಲಿ ಆಸ್ಟ್ರೇಲಿಯಾದ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ 74 ರನ್ ಸಿಡಿಸಿದ್ದರು. ಇದೀಗ ಸೂರ್ಯವಂಶಿ ಹೈದರಾಬಾದ್ ವಿರುದ್ಧ 97 ರನ್ ಸಿಡಿಸುವ ಮೂಲಕ ಪ್ಲೇಆಫ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಸಿಡಿಸಿದ ಆಟಗಾರ ಎಂದೆನಿಸಿಕೊAಡಿದ್ದಾರೆ.
ನಾಕೌಟ್ ಪಂದ್ಯವೊಂದರಲ್ಲಿ ಹೆಚ್ಚು ಸಿಕ್ಸರ್‌ಗಳು:
ಸೂರ್ಯವಂಶಿ ಎಸ್‌ಆರ್‌ಹೆಚ್ ವಿರುದ್ಧ 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪ್ಲೇಆಫ್ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. 2023ರಲ್ಲಿ ಶುಭಮನ್ ಗಿಲ್ ಮುಂಬೈ ವಿರುದ್ಧದ ಪ್ಲೇಆಫ್ ಪಂದ್ಯದಲ್ಲಿ 10 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ದಾಖಲೆಯನ್ನೂ ಸೂರ್ಯವಂಶಿ ಮುರಿದಿದ್ದಾರೆ. ಐಪಿಎಲ್ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಆರ್‌ಆರ್ ಪರ ಎರಡನೇ ಅತ್ಯಧಿಕ ಸ್ಕೋರ್:
ನಾಕೌಟ್ ಪಂದ್ಯದಲ್ಲಿ ಆರ್‌ಆರ್ ಪರ ವೈಯಕ್ತಿಕವಾಗಿ ಹೆಚ್ಚು ರನ್ ಸಿಡಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ 2022ರ ಕ್ವಾಲಿಫೈಯರ್ ಪಂದ್ಯದಲ್ಲಿ ಇಂಗ್ಲೆಂಡಿನ ಜೋಶ್ ಬಟ್ಲರ್ ಆರ್‌ಸಿಬಿ ವಿರುದ್ಧ ಅಜೇಯರಾಗಿ 106 ರನ್ ಗಳಿಸಿದ್ದರು.
ಜೈಸ್ವಾಲ್ ಹಿಂದಿಕ್ಕಿದ ವೈಭವ್:
ಐಪಿಎಲ್ ಆವೃತ್ತಿಯೊಂದರಲ್ಲಿ ಅನ್‌ಕ್ಯಾಪ್ಡ್ ಭಾರತೀಯ ಬ್ಯಾಟರ್ ಅತಿ ಹೆಚ್ಚು ರನ್ ಕಲೆಹಾಕಿದ ದಾಖಲೆಯೂ ಇದೀಗ ವೈಭವ್ ಸೂರ್ಯವಂಶಿ ಹೆಸರಿನಲ್ಲಿದೆ. ಈ ದಾಖಲೆ ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಹೆಸರಿನಲ್ಲಿತ್ತು. ಅವರು 2023ರಲ್ಲಿ 625 ರನ್ ಗಳಿಸಿದ್ದರು. ಇದೀಗ 680 ರನ್ ಸಿಡಿಸುವ ಮೂಲಕ ಸೂರ್ಯವಂಶಿ ಹಿಂದಿಕ್ಕಿದ್ದು, ಐಪಿಎಲ್ ಋತುವಿನಲ್ಲಿ 600 ರನ್ ಪೂರ್ಣಗೊಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಎಡಗೈ ಯಾವೊಬ್ಬ ಎಡಗೈ ಬ್ಯಾಟರ್ ಕೂಡ 600 ರನ್ ಗಳಿಸಿರಲಿಲ್ಲ. ವೈಭವ್ ಇದೀಗ ಈ ದಾಖಲೆಯನ್ನು ಬರೆದಿದ್ದಾರೆ.
