ಮಂಗಳೂರು: ದಾಖಲೆ ಜೆರಾಕ್ಸ್ ಮಾಡುವ ವೇಳೆ ಅಚಾನಕ್ಕಾಗಿ ಕಾಗದ ಸುಟ್ಟುಹೋದ ವಿಚಾರಕ್ಕೆ ಸಂಬಂಧಿಸಿದಂತೆ ಜೆರಾಕ್ಸ್ ಅಂಗಡಿ ಮಾಲೀಕರು ಮತ್ತು ಗ್ರಾಹಕರು ಹೊಡೆದಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ(Putturu) ದರ್ಬೆಯಲ್ಲಿ ನಡೆದಿದೆ.
ಸುಳ್ಯದ ಮಂಡೆಕೋಲು ನಿವಾಸಿಗಳಾದ ಫಾತಿಮಾ ಮತ್ತು ಮುಬಾಶಿರಾ ಎಂಬವರು ದರ್ಬೆಯಲ್ಲಿರುವ ಸುದರ್ಶನ್ ಪೈ ಎಂಬವರಿಗೆ ಸೇರಿದ ಜನಸೇವಾ ಜೆರಾಕ್ಸ್ ಅಂಗಡಿಗೆ ದಾಖಲೆಗಳ ಜೆರಾಕ್ಸ್ ಪ್ರತಿ ಮಾಡಿಸಲು ಬಂದಿದ್ದರು. ಜೆರಾಕ್ಸ್(Xerox Shop) ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಂದು ದಾಖಲೆ ಪತ್ರ ಸುಟ್ಟು ಹೋಗಿದೆ. ಈ ವಿಚಾರವಾಗಿ ಅಂಗಡಿ ಮಾಲೀಕ ಸುದರ್ಶನ್ ಪೈ ಹಾಗೂ ಮಹಿಳೆಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಮಾತಿನ ಚಕಮಕಿ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಮುಸ್ಲಿಂ ಯುವಕರ ಗುಂಪೊಂದು ಸುದರ್ಶನ್ ಪೈ ಅವರ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದೆ. ಸುದರ್ಶನ್ ಅವರನ್ನು ಅಂಗಡಿಯಿಂದ ಹೊರಗೆಳೆದು ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ಗಲಾಟೆ ತಡೆಯಲು ಬಂದ ಅವರ ಪತ್ನಿ ಅಂಜನಾ ಪೈ ಅವರ ಮೇಲೂ ಹಲ್ಲೆ ನಡೆಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು (Police) ಪರಿಸ್ಥಿತಿಯನ್ನು ನಿಯಂತ್ರಿಸಿ, ವಿಚಾರಣೆಗಾಗಿ ಸುದರ್ಶನ್ ಪೈ ಅವರನ್ನು ಪೊಲೀಸ್ ಜೀಪಿನಲ್ಲಿ ಠಾಣೆಗೆ ಕರೆದೊಯ್ಯಲು ಮುಂದಾದರು. ಈ ವೇಳೆ ರೊಚ್ಚಿಗೆದ್ದ ಗುಂಪು ಪೊಲೀಸ್ ವಾಹನವನ್ನು ತಡೆದು, ಜೀಪಿನೊಳಗೆ ನುಗ್ಗಿ ಸುದರ್ಶನ್ ಅವರನ್ನು ಹೊರಗೆಳೆಯಲು ಯತ್ನಿಸಿದೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದನ್ನೂ ಓದಿ: ಒಡಿಶಾ ಕರಾವಳಿಯಲ್ಲಿ ಪನಾಮ ಧ್ವಜ ಹೊತ್ತ ಬೃಹತ್ ಹಡಗು ಮುಳುಗಡೆ
ಕೃತ್ಯ ನಡೆದ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದು ಅದರ ದೃಶ್ಯಾವಳಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

