– ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆಯಿಂದ ರಕ್ಷಣಾ ಕಾರ್ಯ ಶುರು
ಭುವನೇಶ್ವರ: ಒಡಿಶಾದ ಪ್ಯಾರದೀಪ್ ಕರಾವಳಿಯಿಂದ (Odisha Paradip Coast) ಸುಮಾರು 240 ನಾಟಿಕಲ್ ಮೈಲು (444 ಕಿಮೀ) ದೂರದಲ್ಲಿರುವ ಬಂಗಾಳ ಕೊಲ್ಲಿಯಲ್ಲಿ ಶನಿವಾರ ಪನಾಮ (Panama) ಧ್ವಜ ಹೊತ್ತ ಹಡಗು ಮುಳುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
24 ಸಿಬ್ಬಂದಿಯನ್ನ ಹೊತ್ತ ಹಡಗು (Panama Ship) ಕಬ್ಬಿಣದ ಅದಿರಿನ ಸರಕುಗಳನ್ನ ತುಂಬಿಕೊಂಡು ಒಡಿಶಾದಿಂದ ಸಿಂಗಾಪುರದ ಕಡೆಗೆ ಸಾಗುತ್ತಿತ್ತು. ಹಡಗು ತನ್ನ ಮುಂದಿನ ಪ್ರಯಾಣ ಆರಂಭಿಸುವುದಕ್ಕೂ ಮುನ್ನ ಆ.20 ರಂದು ಪ್ಯಾರದೀಪ್ ಕರಾವಳಿಗೆ ತಲುಪಿತ್ತು. ಶುಕ್ರವಾರ ಒಡಿಶಾದಿಂದ ಹೊರಟ ನಂತರ ದುರಂತ ಸಂಭವಿಸಿದೆ.
ಘಟನೆಯ ನಂತರ ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಭಾರತೀಯ ನೌಕಾಪಡೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿವೆ. ಈ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ಇತರ ಹಡಗುಗಳಿಗೂ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ.
ಈ ಬಗ್ಗೆ ಐಪಿಎಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಪನಾಮ ಧ್ವಜ ಹೊತ್ತ ಹಡಗು ಮುಳುಗಡೆಯಾಗಿದೆ. 24 ಸಿಬ್ಬಂದಿ ಹಡಗಿನಲ್ಲಿದ್ದರು. ಈವರೆಗೆ ಎಷ್ಟು ಜನರನ್ನ ರಕ್ಷಣೆ ಮಾಡಲಾಗಿದೆ ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೆಚ್ಚಿನವರಲ್ಲಿ ಚೀನಿ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದ್ದಾರೆ.

