ಬೆಂಗಳೂರು: ಪುಟ್ಟಗೌರಿ ಮದುವೆ ಧಾರಾವಾಹಿಯಿಂದಲ್ಲೇ ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಗೌರಿ ಅಲಿಯಾಸ್ ರಂಜನಿ ರಾಘವನ್ ಬೆಳ್ಳಿತೆರೆಗೂ ಎಂಟ್ರಿ ನೀಡಿ ಮೊದಲ ಚಿತ್ರ ರಾಜಹಂಸದಲ್ಲಿಯೇ ಯಶಸ್ಸು ಕಂಡಿದ್ದಾರೆ. ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ರಂಜನಿ ಈಗ ಸ್ಯಾಂಡಲ್ ವುಡ್ನಲ್ಲೂ ತಮ್ಮ ಚಾಪನ್ನು ಮೂಡಿಸುತ್ತಿದ್ದಾರೆ.
ಚಾಲೆಜಿಂಗ್ ಸ್ಟಾರ್ ದರ್ಶನ್ ಕುಟುಂಬದಿಂದ ಬಂದಿರುವ ಮನೋಜ್ ಅವರು ನಟಿಸುತ್ತಿರುವ ಮೊದಲ ಸಿನಿಮಾ ‘ಟಕ್ಕರ್’ ಚಿತ್ರದಲ್ಲಿ ರಂಜಿನಿ ರಾಘವನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ನಿರ್ದೇಶಕ ರಘು ಶಾಸ್ತ್ರಿ ಹಾಗೂ ನಿರ್ಮಾಪಕ ಕೆ.ಎನ್ ನಾಗೇಶ್ ಕೋಗಿಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.
ಈ ಚಿತ್ರ ಶುರುವಾಗುವ ಮೊದಲೇ ಸಾಕಷ್ಟು ಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದವು. ಈ ಚಿತ್ರಕ್ಕೆ ಹಲವಾರು ನಟಿಯರ ಹೆಸರು ಕೇಳಿಬಂದಿತ್ತು. ಆದರೆ ಈಗ ಈ ಚಿತ್ರಕ್ಕೆ ರಂಜನಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ.
ಇನ್ನೇನು ಕೆಲವು ದಿನಗಳಲ್ಲೇ ‘ಟಕ್ಕರ್’ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆಯಲ್ಲಿ ಚಿತ್ರತಂಡ ತೊಡಗಿದೆ.