– ಉಕ್ರೇನ್ ಯುದ್ಧದ ನಂತರ ನಡೆದ ಚುನಾವಣೆ
– 355ಕ್ಕೂ ಹೆಚ್ಚು ಸ್ಥಾನ ಗೆದ್ದು ಇತಿಹಾಸ ಸೃಷ್ಟಿ
ಮಾಸ್ಕೋ: ಉಕ್ರೇನ್(Ukraine) ಮೇಲಿನ ಪೂರ್ಣ ಪ್ರಮಾಣದ ಆಕ್ರಮಣದ ನಂತರ ರಷ್ಯಾದಲ್ಲಿ(Russia) ನಡೆದ ಮೊದಲ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರ ಯುನೈಟೆಡ್ ರಷ್ಯಾ ಪಕ್ಷವು ಗೆಲುವು ಸಾಧಿಸಿದೆ ಎಂದು ರಷ್ಯಾದ ಚುನಾವಣಾ ಆಯೋಗವು ಸೋಮವಾರ ತಿಳಿಸಿದೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈ ಚುನಾವಣೆಯನ್ನು ರಷ್ಯಾದಲ್ಲಿ ಕರೆಯಲಾಗುವ “ವಿಶೇಷ ಮಿಲಿಟರಿ ಕಾರ್ಯಾಚರಣೆ”ಗೆ ಸಾರ್ವಜನಿಕರ ಬೆಂಬಲವನ್ನು ಅಳೆಯುವ ಜನಾಭಿಪ್ರಾಯ ಸಂಗ್ರಹದಂತೆ ಬಿಂಬಿಸಿದ್ದರು. ಪುಟಿನ್ ಮತ್ತು ಕ್ರೆಮ್ಲಿನ್‌ನ ಯುದ್ಧ ನೀತಿಯನ್ನು ಬೆಂಬಲಿಸುವ ಪಕ್ಷಗಳಿಗೆ ಮಾತ್ರ ಸ್ಪರ್ಧಿಸಲು ಅನುಮತಿ ನೀಡಲಾಗಿತ್ತು ಹಾಗೂ ಪ್ರಮುಖ ವಿರೋಧ ಪಕ್ಷಗಳನ್ನು ಚುನಾವಣೆಯಿಂದ ದೂರವಿಡಲಾಗಿತ್ತು.
ಬೆಲೆ ಏರಿಕೆ, ರಾಜಕೀಯ ವಿರೋಧಿಗಳು ಮತ್ತು ಇಂಟರ್ನೆಟ್ ಮೇಲಿನ ನಿಯಂತ್ರಣ, ಇಂಧನ ಕೊರತೆ ಹಾಗೂ ಚುನಾವಣೆ ಮುಗಿದ ನಂತರ ಮತ್ತೆ ನಾಗರಿಕರನ್ನು ಸೇನೆಗೆ ಸೇರ್ಪಡೆಗೊಳಿಸುವ ಕಾರ್ಯಾಚರಣೆ ನಡೆಯಲಿದೆ ಎಂಬ ವದಂತಿಗಳ ನಡುವೆಯೇ ಈ ಚುನಾವಣೆ ನಡೆಯಿತು.
ಶೇ.95 ರಷ್ಟು ಮತಗಳ ಎಣಿಕೆ ಪೂರ್ಣಗೊಂಡಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪಕ್ಷವು ಶೇ.57.83 ರಷ್ಟು ಮತಗಳನ್ನು ಪಡೆದುಕೊಂಡಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಪ್ರಾಥಮಿಕ ಫಲಿತಾಂಶಗಳ ಪ್ರಕಾರ, 450 ಸ್ಥಾನಗಳಿರುವ ಡುಮಾ (ರಷ್ಯಾದ ಸಂಸತ್ತಿನ ಕೆಳಮನೆ) ಸಭೆಯಲ್ಲಿ ಯುನೈಟೆಡ್ ರಷ್ಯಾ ಪಕ್ಷವು 355 ಸ್ಥಾನಗಳನ್ನು ಪಡೆಯಲಿದೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥೆ ಎಲ್ಲಾ ಪಂಫಿಲೋವಾ ತಿಳಿಸಿದ್ದಾರೆ. ಇದು ಪಕ್ಷವು ಪ್ರಸ್ತುತ ಹೊಂದಿರುವ ಸ್ಥಾನಗಳಿಗಿಂತ ಸುಮಾರು 20 ಸ್ಥಾನಗಳು ಹೆಚ್ಚಾಗಿದ್ದು, ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜಯವನ್ನು ದಾಖಲಿಸಿದೆ. ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ 1,100 ಡ್ರೋನ್‌ಗಳ ದಾಳಿ – ರಷ್ಯಾ ಮೇಲೆ ಉಕ್ರೇನ್ ಅತಿದೊಡ್ಡ ಅಟ್ಯಾಕ್
ಈ ಚುನಾವಣೆಯು ಮಾಸ್ಕೋ ಆಕ್ರಮಿಸಿಕೊಂಡು ಅಕ್ರಮವಾಗಿ ವಶಪಡಿಸಿಕೊಂಡ ಉಕ್ರೇನ್‌ನ ನಾಲ್ಕು ಪ್ರದೇಶಗಳಾದ ಡೊನೆಟ್ಸ್ಕ್, ಲುಹಾನ್ಸ್ಕ್, ಖೇರ್ಸನ್ ಮತ್ತು ಜಪೋರಿಝಿಯಾದ ನಿವಾಸಿಗಳನ್ನು ಒಳಗೊಂಡ ಮೊದಲ ಸಂಸದೀಯ ಚುನಾವಣೆಯಾಗಿದೆ. 2014 ರಲ್ಲಿ ರಷ್ಯಾ ಅಕ್ರಮವಾಗಿ ವಶಪಡಿಸಿಕೊಂಡ ಕ್ರೈಮಿಯಾದಲ್ಲೂ ಮತದಾನ ನಡೆಯಿತು.
ಉತ್ತರ ಕಾಕಸಸ್ ಪ್ರದೇಶದಲ್ಲಿರುವ ರಷ್ಯಾದ ಗಣರಾಜ್ಯವಾದ ಚೆಚೆನ್ಯಾದ ನಾಯಕರಾಗಿ ಪುಟಿನ್ ಅವರ ಆಪ್ತ ಮಿತ್ರ ರಂಜಾನ್ ಕದಿರೋವ್ 5ನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಅವರು ಶೇ.99.85 ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. 2021 ರಲ್ಲಿ ಅವರು ಶೇಕಡಾ 99.73 ರಷ್ಟು ಮತಗಳನ್ನು ಪಡೆದಿದ್ದರು.
ಈ ಸಣ್ಣ ಪ್ರದೇಶದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಗಳನ್ನು ಅಂತಾರಾಷ್ಟ್ರೀಯ ವೀಕ್ಷಕರು ಈ ಹಿಂದೆಯೂ ತೀವ್ರವಾಗಿ ಟೀಕಿಸಿದ್ದರು. ಪತ್ರಕರ್ತರು ಮತ್ತು ಸಲಿಂಗಕಾಮಿಗಳನ್ನು ಗುರಿಯಾಗಿಸುವುದು ಸೇರಿದಂತೆ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಎಸಗಿರುವ ಆರೋಪವನ್ನು ಕದಿರೋವ್ ಸರ್ಕಾರ ಎದುರಿಸುತ್ತಿದ್ದು, ಈ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.


