ಚಂಡೀಗಢ: ಪಂಜಾಬ್ ಇಂಧನ ಸಚಿವ ಸಂಜೀವ್ ಅರೋರಾ (Sanjeev Arora) ಅವರನ್ನು ಇ.ಡಿ (Enforcement Directorate) ಬಂಧಿಸಿದೆ.
ಅರೋರಾ ಮತ್ತು ಇತರ ಕೆಲವು ಸಚಿವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಶನಿವಾರ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸಿದೆ. ಈ ಕ್ರಮವನ್ನು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನೂ ಓದಿ: ಹಾರ್ಮುಜ್‌ನಲ್ಲಿ ಬೆಂಕಿಗೆ ಆಹುತಿಯಾದ ಬೋಟ್ – ಭಾರತೀಯ ನಾವಿಕ ಸಾವು, ನಾಲ್ವರಿಗೆ ಗಾಯ
62 ವರ್ಷದ ಅರೋರಾ, ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದ ಎಎಪಿ ಶಾಸಕ. ಅರೋರಾ ಮತ್ತು ಅವರ ಸಂಸ್ಥೆಗಳಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002 ರ ಅಡಿಯಲ್ಲಿ ದಾಳಿ ನಡೆಸಿತು. ಚಂಡೀಗಢ ಮತ್ತು ದೆಹಲಿ-NCR ಪ್ರದೇಶದಲ್ಲಿ ದಾಳಿ ನಡೆಸಲಾಯಿತು. ಸಚಿವರನ್ನು ಚಂಡೀಗಢದ ಸೆಕ್ಟರ್ 2 ನಲ್ಲಿರುವ ಅವರ ಅಧಿಕೃತ ನಿವಾಸದಿಂದ ಬಂಧಿಸಲಾಯಿತು.
ಈ ವರ್ಷ ಅರೋರಾ ಮೇಲೆ ದಾಳಿ ನಡೆಯುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಈ ತಿಂಗಳ ಆರಂಭದಲ್ಲಿ ಮತ್ತು ಏಪ್ರಿಲ್‌ನಲ್ಲಿ ಅವರ ವಿರುದ್ಧ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆ. ದಾಳಿಗಳ ಕುರಿತು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಕೇಜ್ರಿವಾಲ್, ಪಕ್ಷವು ಜಾರಿ ನಿರ್ದೇಶನಾಲಯದಂತಹ ಕೇಂದ್ರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

