ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾವೇರಿ ನದಿ ನೀರಿಗಾಗಿ ಜಟಾಪಟಿ ನಡೆಯುತ್ತಿದೆ. ಇದೇ ಹೊತ್ತಲ್ಲಿ ಕೇಂದ್ರ ಸರ್ಕಾರದ ಹೇಳಿಕೆ ರಾಜ್ಯದ ಮಹತ್ವದ ಮೇಕೆದಾಟು ಯೋಜನೆಯ ಕನಸಿಗೆ ಹೊಸ ಜೀವ ನೀಡಿದೆ. ಯೋಜನೆ ಅನುಷ್ಠಾನಕ್ಕೆ ಪರಿಸರ ಅನುಮತಿ, ತಾಂತ್ರಿಕ ಪರಿಶೀಲನೆ ಹಾಗೂ ಆಡಳಿತಾತ್ಮಕ ಅನುಮೋದನೆ ಸೇರಿದಂತೆ ಹಲವು ಹಂತಗಳು ಇನ್ನೂ ಬಾಕಿಯಿವೆ. ಆದರೂ, ಈ ಬೆಳವಣಿಗೆಯಿಂದ ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಯೋಜನೆಯ ಆಗುಹೋಗು, ತಮಿಳುನಾಡು – ಕರ್ನಾಟಕದ ವಿವಾದ, ಯೋಜನೆಯಿಂದ ರಾಜ್ಯಕ್ಕೆ ಆಗುವ ಲಾಭದ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ತಮಿಳುನಾಡಿನ ಅಡ್ಡʻಗಾಲುʼ ಕಟ್!
ಮೇಕೆದಾಟು ಯೋಜನೆಯ ವಿಚಾರದಲ್ಲಿ ತಮಿಳುನಾಡು ರಾಜ್ಯ ಯಾವಾಗಲೂ ಅಡ್ಡಗಾಲು ಹಾಕುತ್ತಲೇ ಬಂದಿದೆ. ಇದೀಗ ಕರ್ನಾಟಕಕ್ಕೆ ಮೇಕೆದಾಟು ಡ್ಯಾಮ್ ನಿರ್ಮಾಣಕ್ಕೆ ಕಾನೂನುಬದ್ಧ ಹಕ್ಕಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ತಮಿಳುನಾಡಿನ ಅಡ್ಡʻಗಾಲುʼ ಮುರಿದಿದೆ!

ಸುಪ್ರೀಂ ಕೋರ್ಟ್ ತೀರ್ಪಿನಲ್ಲೇನಿದೆ?
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ತನ್ನ ಭೂಭಾಗದಲ್ಲಿ ಜಲಾಶಯ ನಿರ್ಮಿಸುವ ಕಾನೂನುಬದ್ಧ ಹಕ್ಕಿದೆ. ಈ ತೀರ್ಪಿನ ಆಧಾರದ ಮೇಲೆ ತಮಿಳುನಾಡು, ಕೇರಳ ಅಥವಾ ಪುದುಚೇರಿಯ ಅನುಮತಿ ಪಡೆಯುವ ಅಗತ್ಯವೇ ಇಲ್ಲಎಂದು ಕೇಂದ್ರ ಜಲಶಕ್ತಿ ಸಚಿವಾಲಯ ರಾಜ್ಯಸಭೆಯಲ್ಲಿ ತಿಳಿಸಿದೆ.

ಕೇದ್ರ ಸರ್ಕಾರ ಹೇಳಿದ್ದೇನು?
ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಉತ್ತರಿಸಿ, 2018ರ ಫೆಬ್ರವರಿ 16ರಂದು ಕಾವೇರಿ ಜಲ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಯಾವುದೇ ನಿರ್ಮಾಣ ಕೈಗೊಳ್ಳಲು ಕರ್ನಾಟಕವು ಇತರ ತೀರ ರಾಜ್ಯಗಳಾದ ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ಒಪ್ಪಿಗೆ ಪಡೆಯಬೇಕು ಎಂಬ ಉಲ್ಲೇಖವೇ ಇಲ್ಲಎಂದು ತಿಳಿಸಿದ್ದರು.
2007ರ ಕಾವೇರಿ ಜಲ ವಿವಾದ ನ್ಯಾಯಮಂಡಳಿ ತೀರ್ಪಿನ 18ನೇ ವಿಧಿಯನ್ನು ಸಮರ್ಥಿಸಿರುವ ಸುಪ್ರೀಂ ಕೋರ್ಟ್, ಈ ನ್ಯಾಯಮಂಡಳಿಯ ಆದೇಶವು ಯಾವುದೇ ರಾಜ್ಯವು ತನ್ನ ಗಡಿಗಳೊಳಗೆ ನೀರಿನ ಬಳಕೆಯನ್ನು ನಿಯಂತ್ರಿಸುವ ಅಥವಾ ಆ ರಾಜ್ಯದ ನೀರಿನ ಪ್ರಯೋಜನವನ್ನು ಪಡೆಯುವ ಹಕ್ಕು, ಅಧಿಕಾರ ಅಥವಾ ಶಕ್ತಿಯನ್ನು ಹಾನಿಗೊಳಿಸುವುದಿಲ್ಲ. ಆದರೆ, ಅದು ನ್ಯಾಯಮಂಡಳಿಯ ಆದೇಶಕ್ಕೆ ವಿರುದ್ಧವಾಗಿರಬಾರದು ಎಂದು ಪುನರುಚ್ಚರಿಸಿದೆ ಎಂದು ತಿಳಿಸಿದ್ದರು.
ಮೇಕೆದಾಟು ಡಿಪಿಆರ್ ವಾಪಸ್ – ಆಕ್ಷೇಪ ಏಕೆ?
ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಕರ್ನಾ ಟಕ ಸರ್ಕಾರ ಸಿದ್ದಪಡಿಸಿ ಕಳುಹಿಸಿಕೊಟ್ಟಿದ್ದ ಪರಿಷ್ಕೃತ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಅನ್ನು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ವಾಪಸ್ ಕಳಿಸಿದೆ. ಮೂಲಗಳ ಪ್ರಕಾರ, ಜೂ.29ರಂದೇ ಸಿಡಬ್ಲ್ಯುಸಿಯು ಪರಿಷ್ಕೃತ ಯೋಜನಾ ವರದಿ (ಡಿಪಿಆರ್)ಯನ್ನು ಕರ್ನಾಟಕಕ್ಕೆ ವಾಪಸ್ ಕಳುಹಿಸಿಕೊಟ್ಟಿದೆ ಎಂದು ತಿಳಿದು ಬಂದಿದೆ.
2018ರಲ್ಲಿ ಮೇಕೆದಾಟು ಯೋಜನೆ ಕುರಿತು ಪ್ರಸ್ತಾಪ ಮಾಡಿದ್ದ ಕರ್ನಾಟಕ, ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ 4.75 ಟಿಎಂಸಿ ನೀರು ಬಳಸುವ ಉದ್ದೇಶ ಇಟ್ಟುಕೊಂಡಿರುವುದಾಗಿ ಹೇಳಿತ್ತು. ಅದರಂತೆ ಯೋಜನೆಯ ಡಿಪಿಆರ್ ಸಲ್ಲಿಸಲು ಸಿಡಬ್ಲ್ಯುಸಿ ಅನುಮತಿ ನೀಡಿತ್ತು. ಅದರಂತೆ ಕರ್ನಾಟಕವು 2019ರಲ್ಲಿ ಮೂಲ ಡಿಪಿಆರ್ ಸಲ್ಲಿಸಿತ್ತು. ಅದಕ್ಕೆ ಸಂಬಂಧಿಸಿ ಎತ್ತಿದ್ದ ಆಕ್ಷೇಪಗಳಿಗೆ ಪೂರಕವಾಗಿ ಪರೀಷ್ಕೃತ ಡಿಪಿಆರ್ ಸಲ್ಲಿಸಲಾಗಿತ್ತು.
ಪರಿಷ್ಕೃತ ಡಿಪಿಆರ್‌ನಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿಗೆ ಕುಡಿಯುವ ನೀರಿನ ಬಳಕೆ ಪ್ರಮಾಣವನ್ನು 2.2 ಟಿಎಂಸಿಯಷ್ಟು ಹೆಚ್ಚಿಸುವ, ಅಂದರೆ ಈ ಹಿಂದಿನ 4.75 ಟಿಎಂಸಿಯಿಂದ 6.95 ಟಿಎಂಸಿಗೆ ಹೆಚ್ಚಿಸುವ ಪ್ರಸ್ತಾಪವಿದೆ.
2021 ರಲ್ಲಿ ಮೇಕೆದಾಟು ಪಾದಯಾತ್ರೆ ನಡೆಸಿದ್ದ ಡಿಕೆಶಿ
2021ರಲ್ಲಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಾಯಕತ್ವದಲ್ಲಿ, ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ನಡೆದಿತ್ತು.

ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚದಲ್ಲಿ ಏರಿಕೆ
ಮೇಕೆದಾಟು ಯೋಜನೆಯ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2019ರಲ್ಲಿ ಸುಮಾರು 4,500 ಕೋಟಿ ರೂ. ಎಂದು ಅಂದಾಜಿಸಲಾಗಿದ್ದ ಯೋಜನಾ ವೆಚ್ಚ, ಬಳಿಕ 9,000 ಕೋಟಿಗೆ ಏರಿಕೆಯಾಗಿತ್ತು. ಈಗ ಹೊಸ ಡಿಪಿಆರ್ ಪ್ರಕಾರ ಯೋಜನೆ ಪೂರ್ಣಗೊಳ್ಳುವ ವೇಳೆಗೆ ವೆಚ್ಚವು 14 ಸಾವಿರ ಕೋಟಿ ರೂ. ದಾಟುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.
ಯೋಜನೆಯ ಪ್ರಮುಖ ವಿವರ
ಕಾವೇರಿ-ಅರ್ಕಾವತಿ ಸಂಗಮದಿಂದ ಸುಮಾರು 2 ಕಿ.ಮೀ ದೂರದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಪ್ರಸ್ತಾವನೆ ಇದೆ. ಸುಮಾರು 99 ಮೀಟರ್ ಎತ್ತರದ ಅಣೆಕಟ್ಟೆನಲ್ಲಿ 67.17 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಇರಲಿದೆ. ಇದು ಕಾವೇರಿ ನದಿಯಲ್ಲಿ ಕರ್ನಾಟಕ ನಿರ್ಮಿಸುವ ಅತಿ ದೊಡ್ಡ ಜಲಾಶಯ ಆಗಿರಲಿದೆ.
ಕರ್ನಾಟಕಕ್ಕೆ ಲಾಭವೇನು?
ಮೇಕೆದಾಟು ಯೋಜನೆಯ ಪ್ರಮುಖ ಉದ್ದೇಶ ಕುಡಿಯುವ ನೀರಿನ ಪೂರೈಕೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ದೀರ್ಘಾವಧಿಯ ನೀರಿನ ಭದ್ರತೆ ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ.
ಬೆಂಗಳೂರು ನಗರಕ್ಕೆ ಮಾತ್ರ ಸುಮಾರು 4.75 ಟಿಎಂಸಿ ನೀರನ್ನು ಮೀಸಲಿಡುವ ಪ್ರಸ್ತಾವವಿದ್ದು, ಮುಂದಿನ ಹಲವು ದಶಕಗಳ ಜನಸಂಖ್ಯೆಯ ಅಗತ್ಯಗಳನ್ನು ಮನಗಂಡು ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 2 ಕೋಟಿ ಜನರಿಗೆ ಇದರ ಪ್ರಯೋಜನ ದೊರೆಯಲಿದೆ.
ಮೇಕೆದಾಟು ಹೆಸರು ಬಂದಿದ್ದು ಹೇಗೆ?
ಮೇಕೆದಾಟು ಎಂದರೇನು ಎಂದು ಕೇಳಿದರೆ ಸಿಗುವ ಉತ್ತರ ಪಿಕ್ನಿಕ್ ಸ್ಪಾಟ್. ಬೆಂಗಳೂರಿನಿಂದ 90 ಕಿ.ಮೀ ದೂರದ ರಾಮನಗರ ಜಿಲ್ಲೆಯಲ್ಲಿರುವ ಸ್ಥಳವೇ ಮೇಕೆದಾಟು. ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ 4 ಕಿಲೋಮೀಟರ್ ದೂರದಲ್ಲಿದೆ ಮೇಕೆದಾಟು. ಇಲ್ಲಿ ಕಾವೇರಿ ನದಿ ಮೇಕೆ ಹಾರಿ ದಾಟುವಷ್ಟು ಕಿರು ಜಾಗದಲ್ಲಿ ಹರಿದು ಆಳವಾದ ಕಂದಕಕ್ಕೆ ಧುಮುಕುತ್ತದೆ. ಇಲ್ಲಿಗೆ ಮೇಕೆದಾಟು ಎಂಬ ಹೆಸರು ಬರಲು ಒಂದು ಕಥೆಯೇ ಇದೆ. ನೂರಾರು ವರ್ಷಗಳ ಹಿಂದೆ ಇಲ್ಲಿ ಕುರಿಗಾಹಿಯೊಬ್ಬ ತನ್ನ ಮೇಕೆಗಳನ್ನು ಮೇಯಿಸುತ್ತ ಇದ್ದನಂತೆ. ನೂರಾರು ಮೇಕೆಗಳು ಒಂದೆಡೆ ಮೇಯುತ್ತಾ ಇದ್ದರೆ ಒಂದು ಮೇಕೆ ಮಾತ್ರ ಒಬ್ಬಂಟಿಯಾಗಿ ಓಡಾಡುತ್ತ ಸೊಪ್ಪು ತಿನ್ನುತ್ತಾ ಇತ್ತು. ಈ ಸಮಯದಲ್ಲಿ ಬೇಟೆಯಾಡಲು ಬಂದಿದ್ದ ಒಂದು ಹುಲಿ ಒಂಟಿಯಾಗಿ ಸೊಪ್ಪು ತಿನ್ನುತ್ತಿದ್ದ ಮೇಕೆಯನ್ನು ನೋಡಿ ಅದರ ಮೇಲೆ ದಾಳಿ ನಡೆಸಿತು. ಹುಲಿಯಿಂದ ತಪ್ಪಿಸಿಕೊಂಡ ಮೇಕೆ ನದಿಯ ತೀರದಲ್ಲೇ ಪ್ರಾಣ ಉಳಿಸಲು ಓಡತೊಡಗಿತು.

ಮುಂದೆ ಸಾಗಿದಂತೆ ದಾರಿ ಕಾಣದ ಮೇಕೆ ಒಂದೇ ನೆಗೆತಕ್ಕೆ ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ನೆಗೆದು ಪ್ರಾಣ ಉಳಿಸಿಕೊಂಡಿತು. ಆದರೆ ಹುಲಿ ಮಾತ್ರ ನದಿಯನ್ನು ಹಾರುವಂತಹ ಸಾಹಸಕ್ಕೆ ಕೈ ಹಾಕಲಿಲ್ಲ. ಮೇಕೆಯನ್ನು ಹಿಂಬಾಲಿಸುವ ಕಾರ್ಯವನ್ನು ನಿಲ್ಲಿಸಿದ ಹುಲಿ ಅಲ್ಲಿಂದ ಹಸಿದ ಹೊಟ್ಟೆಯಲ್ಲೇ ಹೊರಟಿತು ಎಂಬುದು ಪೂರ್ವಜರು ಹೇಳುವ ಕಥೆ. ಹೀಗಾಗಿ ಈ ಸ್ಥಳ ಮೇಕೆದಾಟು ಎಂಬ ಹೆಸರು ಬಂದು ಪ್ರಸಿದ್ಧಿ ಪಡೆದುಕೊಂಡಿತು.
ಯೋಜನೆಗೆ ತಮಿಳುನಾಡು ವಿರೋಧ ಯಾಕೆ?
ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬೇಕೆಂಬ ಪ್ರಸ್ತಾಪ 1952ರಲ್ಲೇ ಚಿಗುರೊಡೆದಿತ್ತು. ಆದರೆ ಕೆಲ ಕಾರಣಗಳಿಂದ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. 1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣ ಮುಂದೆ ಇದ್ದ ಕಾರಣ ಮೊದಲು ಈ ವಿವಾದವನ್ನು ಬಗೆಹರಿಸಿಕೊಳ್ಳಿ, ನಂತರ ಈ ವಿಚಾರವನ್ನು ಪ್ರಸ್ತಾಪ ಮಾಡಿ ಎಂದು ಹೇಳುವ ಮೂಲಕ ವಿದ್ಯುತ್ ಪ್ರಾಧಿಕಾರ ಉಪಾಯದಿಂದ ಜಾರಿಕೊಂಡಿತ್ತು.
2007ರಲ್ಲಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಗರಿಗೆದರತೊಡಗಿತು. ಅಂತಿಮವಾಗಿ 2013ರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು. ರಾಜ್ಯ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದಂತೆ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಕೇಂದ್ರದ ಮೊರೆ ಹೋಗಿ, ಸುಪ್ರೀಂನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಅಲ್ಲದೇ ಸಿಎಂ ಪಳನಿಸ್ವಾಮಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಈಗ ಕೇಂದ್ರದ ಹೇಳಿಕೆ ಕರ್ನಾಟಕದ ಕನಸಿಗೆ ನೀರೆರೆದಿದೆ.
ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕರ್ನಾಟಕ ನಿರ್ಮಿಸಿರುವ ಅಣೆಕಟ್ಟುಗಳು
ಹಾರಂಗಿ(ಕೊಡಗು), ಕಬಿನಿ(ಮೈಸೂರು), ಹೇಮಾವತಿ(ಹಾಸನ), ಕೆಆರ್‌ಎಸ್(ಮಂಡ್ಯ)ದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದೆ
