ಕಾಮಿಡಿ ಕಿಂಗ್ ಎಂದೇ ಗುರುತಿಸಿಕೊಂಡಿರುವ ಸ್ಯಾಂಡಲ್‌ವುಡ್ ಹಾಸ್ಯನಟ ಚಿಕ್ಕಣ್ಣ (Chikkanna-Pavana Reception) ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ಉದ್ಯಮಿ ಪಾವನಾ ಗೌಡ ಜೊತೆ ನಾಳೆ ಭಾನುವಾರ ಸಪ್ತಪದಿ ತುಳಿಯಲಿದ್ದಾರೆ. ಮದುವೆಗೂ ಮೊದಲು ಇಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ಧೂರಿ ರೆಸೆಪ್ಷನ್ ಆಯೋಜಿಸಲಾಗಿದೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಗೌಡ ಜೋಡಿ ಎಲ್ಲರ ಗಮನಸಳೆದಿದ್ದಾರೆ.
ಚಿಕ್ಕಣ್ಣ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಶರ್ಟ್ ಹಾಗೂ ನೀಲಿ ಬ್ಲೇಜರ್ ಧರಿಸಿದ್ದರೆ, ಪಾವನಾ ಗೌಡ ನೀಲಿ ಬಣ್ಣದ ಮಿಂಚುವ ಲೆಹೆಂಗಾದಲ್ಲಿ ಗಮನ ಸೆಳೆದಿದ್ದಾರೆ. ಆಗಸ್ಟ್ 30ರಂದು ಧಾರಾಮುಹೂರ್ತದೊಂದಿಗೆ ಚಿಕ್ಕಣ್ಣ-ಪಾವನಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ಸಂಭ್ರಮದ ಭಾಗವಾಗಿ ಈಗಾಗಲೇ ಮೆಹಂದಿ ಹಾಗೂ ಅರಿಶಿಣ ಶಾಸ್ತ್ರಗಳು ನೆರವೇರಿವೆ. ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಚಿಕ್ಕಣ್ಣ ಮತ್ತು ಪಾವನಾ ಗೌಡ ಸಂಭ್ರಮದಿಂದ ಪಾಲ್ಗೊಂಡಿದ್ದರು. ಇದನ್ನೂ ಓದಿ: ಅದ್ಧೂರಿ ಆರತಕ್ಷತೆಯಲ್ಲಿ ಮಿಂಚಿದ ನಟ ಚಿಕ್ಕಣ್ಣ-ಪಾವನಾ ಜೋಡಿ

ಶನಿವಾರ ನಡೆಯುತ್ತಿರುವ ಆರತಕ್ಷತೆಗೆ ಸ್ಯಾಂಡಲ್‌ವುಡ್‌ನ ಹಲವು ಗಣ್ಯರು, ಚಿತ್ರರಂಗದ ಸ್ನೇಹಿತರು ಹಾಗೂ ಗಣ್ಯ ಅತಿಥಿಗಳು ಆಗಮಿಸಿ ಶುಭ ಕೋರಿದರು. ಮೈಸೂರು ಮೂಲದ ಪಾವನಾ ಗೌಡ ಅವರನ್ನು ಚಿಕ್ಕಣ್ಣ ವಿವಾಹವಾಗುತ್ತಿದ್ದಾರೆ. ಹಿರಿಯರು ನಿಶ್ಚಯಿಸಿರುವ ಈ ಮದುವೆ, ಅರೇಂಜ್ ಕಮ್ ಲವ್ ಮ್ಯಾರೇಜ್ ಎಂದು ಚಿಕ್ಕಣ್ಣ ಮುಕ್ತವಾಗಿ ಹೇಳಿಕೊಂಡಿದ್ದರು.
ಪಾವನಾ ಗೌಡ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪರಿಸರ ಸ್ನೇಹಿ ಉದ್ಯಮವನ್ನೂ ನಡೆಸುತ್ತಿದ್ದಾರೆ. ಚಿಕ್ಕಣ್ಣ-ಪಾವನಾ ಜೋಡಿ ರಿಸೆಪ್ಷನ್‌ನಲ್ಲಿ ಭಾಗವಹಿಸಿ ಹಿರಿಯ ನಟ ರಂಗಾಯಣ ರಘು, ನಟಿ ಅದಿತಿ ಪ್ರಭುದೇವ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ, ನಟಿ ಮೇಘನಾ ಗೌಂಕರ್, ನಟ ಅನೀಶ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಸಾಹಿತಿ ನಾಗೇಂದ್ರ ಪ್ರಸಾದ್, ಉಮಾಮತಿ ಶ್ರೀನಿವಾಸ್ ಗೌಡ, ನಟ ಡಾಲಿ ಧನಜಂಯ್ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಕೂಡ ಜೋಡಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: Photo Gallery | ಚಿಕ್ಕಣ್ಣ ಮದುವೆ ಸಡಗರ – ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ
