ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳುನಾಡು ವೆಟ್ರಿ ಕಳಗಂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅಧಿಕಾರದ ಗದ್ದುಗೆ ಏರಲು ಬೇಕಾದ ಮ್ಯಾಜಿಕ್ ನಂಬರ್ ಕೊರತೆಯಿಂದಾಗಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ವಿಜಯ್ ನೇತೃತ್ವದ ಟಿವಿಕೆ ಪಕ್ಷವನ್ನು ಬೆಂಬಲಿಸಲು ವಿಸಿಕೆ ಪಕ್ಷ ತಮ್ಮದೇ ಆದ ಷರತ್ತುಗಳನ್ನು ವಿಧಿಸಿದೆ. ಇದು ಟಿವಿಕೆಗೆ ತಲೆನೋವಾಗಿ ಪರಿಣಮಿಸಿದೆ. ವಿಜಯ್‌ಗೆ ಮ್ಯಾಜಿಕ್ ನಂಬರ್ ಸಿಗದೇ ಹೋದರೆ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಆತಂಕ ಎದುರಾಗಿದೆ. ಹಾಗಾದ್ರೆ ರಾಷ್ಟ್ರಪತಿ ಆಡಳಿತವನ್ನು ಯಾವಾಗ ಜಾರಿ ಮಾಡುತ್ತಾರೆ? ಅಧಿಕಾರ ಅವಧಿ ಎಷ್ಟು? ಕರ್ನಾಟಕದಲ್ಲಿ ಎಷ್ಟು ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ರಾಷ್ಟ್ರಪತಿ ಆಡಳಿತ ಎಂದರೇನು?
ಒಂದು ರಾಜ್ಯದ ಸರ್ಕಾರ ಸಂವಿಧಾನದ ಪ್ರಕಾರ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ, ಆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗುತ್ತದೆ. ಸಂವಿಧಾನದ 356ನೇ ವಿಧಿಯು ಕೇಂದ್ರ ಸರ್ಕಾರಕ್ಕೆ ಯಾವುದೇ ರಾಜ್ಯ ಸರ್ಕಾರವನ್ನು ವಜಾ ಮಾಡಿ, ಆ ರಾಜ್ಯದ ನಿಯಂತ್ರಣವನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀಡುತ್ತದೆ. ಕೇಂದ್ರ ಸರ್ಕಾರದ ನಿಯಮಗಳು ಮತ್ತು ಕಾನೂನುಗಳು ರಾಜ್ಯದಲ್ಲಿ ಅನ್ವಯವಾಗುತ್ತವೆ. ಅಂದರೆ, ಆ ರಾಜ್ಯದ ಸಂಪೂರ್ಣ ಆಡಳಿತದ ನಿಯಂತ್ರಣವು ರಾಷ್ಟ್ರಪತಿಗಳಿಗೆ ಬರುತ್ತದೆ. ಇನ್ನು ರಾಷ್ಟ್ರಪತಿ ಆಡಳಿತದ ಸಮಯದಲ್ಲಿ, ಕೇಂದ್ರ ಸರ್ಕಾರವು ನೇರವಾಗಿ ಸಂಬಂಧಪಟ್ಟ ರಾಜ್ಯದ ಮೇಲೆ ಹಿಡಿತ ಸಾಧಿಸುತ್ತದೆ. ಹಾಗೂ ಈ ಸಂದರ್ಭದಲ್ಲಿ ರಾಜ್ಯಪಾಲರು ನೇರವಾಗಿ ರಾಷ್ಟ್ರಪತಿಗಳ ಹೆಸರಿನಲ್ಲಿ ರಾಜ್ಯಭಾರ ನಡೆಸುತ್ತಾರೆ.
ರಾಷ್ಟ್ರಪತಿ ಆಡಳಿತ ಜಾರಿ ಹೇಗೆ?
ಆಯಾ ರಾಜ್ಯಗಳ ರಾಜ್ಯಪಾಲರು ರಾಜಕೀಯ ಪರಿಸ್ಥಿತಿಗಳ ಕುರಿತು ಶಿಫಾರಸು ವರದಿ ತಯಾರಿಸುತ್ತಾರೆ. ಈ ವರದಿಯನ್ನು ಅನುಸರಿಸಿ ಕೇಂದ್ರ ಸಚಿವ ಸಂಪುಟ ತೀರ್ಮಾನ ಕೈಗೊಳ್ಳುತ್ತದೆ. ನಂತರ ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆದು ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತದೆ.
ಆಡಳಿತದ ಅವಧಿ ಎಷ್ಟು?
ರಾಷ್ಟ್ರಪತಿಗಳ ಆಡಳಿತವನ್ನು ಕೇಂದ್ರ ಸರ್ಕಾರವು ಆರು ತಿಂಗಳ ಅವಧಿಗೆ ಜಾರಿ ಮಾಡಲಾಗಿರುತ್ತದೆ. ಇನ್ನು ಕೇಂದ್ರವು ಯಾವುದಾದರೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಿದರೆ, ಜಾರಿ ಮಾಡಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳಿಂದ ಸರಳ ಬಹುಮತದೊಂದಿಗೆ ಅನುಮೋದನೆ ಪಡೆಯಬೇಕು. ಇನ್ನು ಕೇಂದ್ರ ಸರ್ಕಾರವು ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳ ಕಾಲ ಒಟ್ಟು ಆರು ಬಾರಿ ವಿಸ್ತರಿಸ ಬಹುದಾಗಿದೆ. ಆದರೆ ಒಟ್ಟಿಗೆ ಗರಿಷ್ಟವಾಗಿ ಮೂರು ವರ್ಷಗಳವರೆಗೂ ಜಾರಿ ಮಾಡಬಹುದಾಗಿದೆ. ಇನ್ನು ರಾಜಕೀಯ ಅಸ್ಥಿರತೆಯ ಕಾರಣದಿಂದ ಜಾರಿಯಾಗಿದ್ದರೆ, ಚುನಾವಣಾ ಆಯೋಗವು ಅಲ್ಲಿ ಆರು ತಿಂಗಳೊಳಗೆ ಚುನಾವಣೆಯನ್ನು ನಡೆಸಬೇಕು.
ರಾಷ್ಟ್ರಪತಿ ಆಡಳಿತ ಹೇಗೆ ಕಾರ್ಯನಿರ್ವಹಿಸುತ್ತದೆ?
ರಾಷ್ಟ್ರಪತಿ ಆಡಳಿತ ಜಾರಿ ಆದಾಗ, ರಾಷ್ಟ್ರಪತಿಗಳ ಪ್ರತಿನಿಧಿಯಾಗಿರುವ ರಾಜ್ಯಪಾಲರು ರಾಜ್ಯದ ಆಡಳಿತ ನಿಯಂತ್ರಣವನ್ನು ವಹಿಸಿಕೊಳ್ಳುತ್ತಾರೆ. ಇದರರ್ಥ ಆ ರಾಜ್ಯದ ಆಡಳಿತವನ್ನು ರಾಜ್ಯಪಾಲರು ನಿರ್ವಹಿಸುತ್ತಾರೆ. ಇನ್ನು ಈ ಸಂದರ್ಭದಲ್ಲಿ ವಿಧಾನಸಭೆಯನ್ನು ವಿಸರ್ಜಿಸಲಾಗಿರುತ್ತದೆ. ಇದರಿಂದ ಮುಖ್ಯಮಂತ್ರಿ ಮತ್ತು ಮಂತ್ರಿ ಮಂಡಳಿಗಳು ಅಸ್ತಿತ್ವದಲ್ಲಿರುವುದಿಲ್ಲ. ಇನ್ನು ರಾಜ್ಯದ ಆಡಳಿತವು ರಾಜ್ಯಪಾಲರ ಕೈಗೆ ಹೋಗುವುದರಿಂದ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಆಡಳಿತವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ರಾಜ್ಯಪಾಲರ ಮುಖ್ಯ ಕಾಯಕವಾಗಿದೆ. ಇದರೊಂದಿಗೆ ರಾಜ್ಯದ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ಸೂಚನೆಗಳ ಪ್ರಕಾರ ಕೆಲಸ ಮಾಡುತ್ತಾರೆ.
356ನೇ ವಿಧಿ ಯಾವಾಗ ಜಾರಿ ಮಾಡಬಹುದು?
-ಮುಖ್ಯಮಂತ್ರಿ ನೇಮಕದಲ್ಲಿ ವಿಫಲವಾದರೆ.
-ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟರೆ.
-ರಾಜ್ಯ ಸರ್ಕಾರ ಅಸಾಂವಿಧಾನಿಕವಾಗಿ ಕಾರ್ಯನಿರ್ವಹಿಸಿದರೆ.
-ಮೈತ್ರಿಕೂಟಗಳು ಭಂಗಗೊಂಡರೆ.
-ರಾಜಕೀಯ ಅಸ್ಥಿರತೆ ತಲೆದೋರಿದರೆ.
-ಕಾನೂನು ಸುವ್ಯವಸ್ಥೆ ಕುಸಿದರೆ.
ಇದುವರೆಗೂ ಸುಮಾರು 126 ಬಾರಿ ವಿವಿಧ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಅದರಲ್ಲಿ ಕಾಂಗ್ರೆಸ್ ಆಳ್ವಿಕೆಯ ಕಾಲದಲ್ಲಿ ಅತಿ ಹೆಚ್ಚು ಬಾರಿ ಜಾರಿ ಮಾಡಲಾಗಿದೆ. ಆದರಂತೆ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಒಟ್ಟು 88 ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಅದರಲ್ಲೂ ಇಂದಿರಾ ಗಾಂಧಿ ಅವಧಿಯಲ್ಲಿ 35 ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಇನ್ನು ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ಇದುವರೆಗೂ 7 ಬಾರಿ ವಿವಿಧ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.
ಇದುವರೆಗೆ ಅತಿ ಹೆಚ್ಚಿನ ಅವಧಿಗೆ ರಾಷ್ಟ್ರಪತಿ ಆಳ್ವಿಕೆ ಹೇರಿರುವುದು ಜಮ್ಮು- ಕಾಶ್ಮೀರದಲ್ಲಿ. ಆರು ವರ್ಷಗಳ ಕಾಲ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಆ ನಂತರ ಪಂಜಾಬ್‌ನಲ್ಲಿ ನಾಲ್ಕು ವರ್ಷ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗಿತ್ತು. ಆದರೆ ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಇದುವರೆಗೂ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿಲ್ಲ.
ರಾಷ್ಟ್ರಪತಿ ಆಡಳಿತ ಹೇರಿದ್ದ ಕೆಲವೊಂದು ರಾಜ್ಯಗಳು:
ಮಹಾರಾಷ್ಟ್ರ: (2019 ನವೆಂಬರ್ 12ರಿಂದ 23)
ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಬಳಿಕ ಕೆಲವು ದಿನಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಫಲಿತಾಂಶದ ಬಳಿಕ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್‌ಸಿಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸದೇ ಇದ್ದಾಗ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ರಾಜ್ಯದ ಆಡಳಿತದ ಚುಕ್ಕಾಣಿ ವಹಿಸಿಕೊಂಡಿದ್ದರು.
ಜಮ್ಮು-ಕಾಶ್ಮೀರ: (2018 ಜೂನ್ 19ರಿಂದ ಅಕ್ಟೋಬರ್ 30)
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಬಿಜೆಪಿಯು ಬೆಂಬಲ ವಾಪಸ್ ಪಡೆದ ಕಾರಣ ಮುಖ್ಯಮಂತ್ರಿ ಮೆಹಬೂಬಾ ಮುಫಿ ರಾಜೀನಾಮೆ ನೀಡಿದ್ದರು. ಪರಿಣಾಮವಾಗಿ ಜೂನ್ 19ರಿಂದ ಅಕ್ಟೋಬರ್ 30ರ ರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಅಕ್ಟೋಬರ್ 31ರಂದು ರಾಜ್ಯವು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಂಡಿತು. ಲೆಫ್ಟಿನೆಂಟ್ ಗವರ್ನರ್ ಮೂಲಕ ಅಧಿಕಾರವು ಕೇಂದ್ರದ ಹಿಡಿತಕ್ಕೊಳಪಟ್ಟಿತು.
ಉತ್ತರಾಖಂಡ: (2016 ಮಾರ್ಚ್ 27ರಿಂದ ಏಪ್ರಿಲ್ 22)
ಕಾಂಗ್ರೆಸ್ ಪಕ್ಷದಲ್ಲಿ ಒಡಕಿನ ಪರಿಣಾಮವಾಗಿ ಮುಖ್ಯಮಂತ್ರಿ ಹರೀಶ್ ರಾವತ್ ನೇತೃತ್ವದ ಸರ್ಕಾರ ಪತನಗೊಂಡಿತ್ತು. ಆಗ ಮೂರು ತಿಂಗಳ ಅವಧಿಯಲ್ಲಿ ಉತ್ತರಾಖಂಡದಲ್ಲಿ ಎರಡು ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು.
ಅರುಣಾಚಲ ಪ್ರದೇಶ: (2016 ಜನವರಿ 25ರಿಂದ ಫೆಬ್ರುವರಿ 19)
ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡ ಅರುಣಾಚಲ ಪ್ರದೇಶ ಸರ್ಕಾರ ಅಸ್ಥಿರಗೊಂಡಿತ್ತು. ಬಳಿಕ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಕಾನೂನು ವ್ಯಾಪ್ತಿಗೆ ಮೀರಿದ್ದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಬಳಿಕ ಮರಳಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಜಮ್ಮು-ಕಾಶ್ಮೀರ: ( 2015 ಜನವರಿ 9ರಿಂದ ಮಾರ್ಚ್ 1)
2015ರ ವಿಧಾನಸಭೆ ಚುನಾವಣೆ ಬಳಿಕ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು.
ಮಹಾರಾಷ್ಟ್ರ: (2014 ಸೆಪ್ಟೆಂಬರ್ 28)
ಆಗಿನ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಮಿತ್ರಪಕ್ಷಗಳು ಹಿಂತೆಗೆದುಕೊಂಡಿದ್ದರಿಂದ 33 ದಿನಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು.
ದೆಹಲಿ: (2014 ಫೆಬ್ರುವರಿ 14)
ಜನ ಲೋಕಪಾಲ ಮಸೂದೆ ಮಂಡಿಸಲು ಸಾಧ್ಯವಾಗದ ಕಾರಣ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ರಾಜೀನಾಮೆ ನೀಡಿದ್ದರು.
ಆಂಧ್ರ ಪ್ರದೇಶ ವಿಭಜನೆಯಾದ ಬಳಿಕ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 2014ರ ಜೂನ್‌ನಲ್ಲಿ 100 ದಿನಗಳ ವರೆಗೆ ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದವು.
ಜಾರ್ಖಂಡ್: (2009 ಜನವರಿ 19 ರಿಂದ ಡಿಸೆಂಬರ್ 29)
ಚುನಾಯಿತ ಸರ್ಕಾರವು ಬಹುಮತ ಕಳೆದುಕೊಂಡ ಕಾರಣ 2009ರ ಜನವರಿ 19ರಿಂದ ಡಿಸೆಂಬರ್ 29ರ ವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು. ಇದೇ ಅವಧಿಯಲ್ಲಿ 2010 ಮತ್ತು 2013ರಲ್ಲಿಯೂ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು.
ಮಣಿಪುರ:
ಮೇ 2023ರಿಂದ ಮಣಿಪುರದಲ್ಲಿ ಆರಂಭವಾದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿತ್ತು. ಈ ಹಿನ್ನೆಲೆಯಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯಿಂದಾಗಿ, ಅಂದಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ 2025ರ ಫೆಬ್ರವರಿ 9ರಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಸದ್ಯ ಫೆ.4 2026ರಂದು ಬಿಜೆಪಿ ನಾಯಕ ಯುಮ್ನಮ್ ಖೇಮ್‌ಚಂದ್ ಸಿಂಗ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ.
ಕರ್ನಾಟಕದಲ್ಲಿ ಎಷ್ಟು ಬಾರಿ ರಾಷ್ಟ್ರಪತಿ ಆಡಳಿತ ಜಾರಿಯಾಗಿದೆ?
ಇನ್ನು ಕರ್ನಾಟಕದಲ್ಲಿ ಇದುವರೆಗೂ ಒಟ್ಟು ಆರು ಬಾರಿ ರಾಷ್ಟ್ರಪತಿಗಳ ಆಡಳಿತ ಜಾರಿಯಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ವೀರೆಂದ್ರ ಪಾಟೀಲ್ ರಾಜಿನಾಮೆ ನೀಡಿದಾಗ ಅಂದರೆ ಮಾರ್ಚ್ 20, 1972 ರಿಂದ ಡಿಸೆಂಬರ್ 31, 1977 ರವರೆಗೆ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು.
ಡಿ. ದೇವರಾಜ ಅರಸ್ ರಾಜೀನಾಮೆ ನೀಡಿದ ನಂತರ ಡಿಸೆಂಬರ್ 31, 1977 ರಿಂದ ಫೆಬ್ರವರಿ 28,1978 ರವರೆಗೆ, ಹಾಗೂ ಎಸ್. ಆರ್. ಬೊಮಾಯಿ ರಾಜೀನಾಮೆ ನೀಡಿದ ನಂತರ ಏಪ್ರಿಲ್ 21, 1989 ರಿಂದ ನವೆಂಬರ್ 30, 1989 ರವರೆಗೆ, ಮುಂದೆ ಪುನಃ ವೀರೆಂದ್ರ ಪಾಟಿಲ್ ರಾಜೀನಾಮೆ ನೀಡಿದ ನಂತರ ನವೆಂಬರ್ 30, 1989 ರಿಂದ ಅಕ್ಟೋಬರ್ 10, 1990 ರವರೆಗೆ ಹಾಗೂ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದ ನಂತರ ಫೆಬ್ರುವರಿ 03, 2006 ರಿಂದ ಅಕ್ಟೋಬರ್ 08, 2007 ರವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು.
ಕೊನೆಯಾದಗಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ನವೆಂಬರ್ 20, 2007 ರಿಂದ ಮೇ 29, 2008 ರವರೆಗೆ ರಾಷ್ಟ್ರಪತಿಗಳ ಆಡಳಿತ ಜಾರಿಯಾಗಿದೆ. ಕರ್ನಾಟಕದಲ್ಲಿ ಒಟ್ಟು ಆರು ಬಾರಿ ರಾಷ್ಟ್ರಪತಿಗಳ ಆಡಳಿತ ಜಾರಿಯಾಗಿದೆ.

