ಶಿವಮೊಗ್ಗ: ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-169ಎ ಆಗುಂಬೆ ಘಾಟ್‌ನಲ್ಲಿ (Agumbe Ghat) ಭಾರಿ ವಾಹನಗಳ ಸಂಚಾರವನ್ನ ನಿಷೇಧಿಸಿ ಶಿವಮೊಗ್ಗ (Shivamogga) ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್‌ನಲ್ಲಿ ಇದೇ ಜೂ.15 ರಿಂದ ಮಳೆಗಾಲ ಮುಗಿಯುವವರೆಗೂ ಭಾರಿ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ನೀಡಿದ್ದಾರೆ. ಇದನ್ನೂ ಓದಿ: ಇಂದು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್
ಶಿವಮೊಗ್ಗದಿಂದ ಹೊಸನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಮತ್ತು ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ನಂತರ ನಡೆಯುತ್ತಿರುವ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ-ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿಯೂ ಇದು ಮುಂದುವರಿದಲ್ಲಿ ಅಲ್ಲಲ್ಲಿ ರಸ್ತೆಯ ಬದಿಯ ಭೂಕುಸಿತ ಆಗುವ, ಅಫಘಾತವಾಗುವ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಜೊತೆಗೆ ಆರೋಗ್ಯ ಸಮಸ್ಯೆಯ ಕುರಿತು ಮಣಿಪಾಲ್, ಉಡುಪಿ, ಮಂಗಳೂರಿಗೆ ಹೋಗುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಯ ನಾಗರಿಕರಿಗೆ ಇರುವ ಸಂಪರ್ಕ ಬಂದ್ ಆದರೆ, ನಾಲ್ಕು ಜಿಲ್ಲೆಯ ಜನರಿಗೆ ತುಂಬಾ ತೊಂದರೆಯಾಗಲಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಡಿಸಿ ಈ ಆದೇಶ ಹೊರಡಿಸಿದ್ದಾರೆ.
ಆಗುಂಬೆ ಘಾಟ್‌ನ ಬದಲಾಗಿ ಪರ್ಯಾಯ ಸಂಚಾರ ಮಾರ್ಗಗಳಾದ ತೀರ್ಥಹಳ್ಳಿ–ಉಡುಪಿ ಕಡೆಗೆ ಹೋಗುವ ವಾಹನಗಳು ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಮತ್ತು ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಸಂಚರಿಸುವುದು ಹಾಗೂ ಉಡುಪಿ-ತೀರ್ಥಹಳ್ಳಿ ಕಡೆಗೆ ಹೋಗುವ ವಾಹನಗಳು ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಮತ್ತು ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ- ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ನಿನಗೊಪ್ಪಿಸಿದ ಮುಂಗಾರು ಮಿಂಚಿಗೊಂದು ಥ್ಯಾಂಕ್ಸ್!
