– ದೀನದಯಾಳು ಉಪಾಧ್ಯಾಯ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ
ನವದೆಹಲಿ: ನಮ್ಮ ಬದುಕು ರೂಪುಗೊಳ್ಳುವಲ್ಲಿ ದೇಶ ಮತ್ತು ಸಮಾಜದ ಪಾತ್ರ ಮಹತ್ವದ್ದಾಗಿದ್ದು, ಯುವಜನತೆ ಇದನ್ನು ಎಂದಿಗೂ ಮರೆಯಬಾರದು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು (Vishwaprasanna Teertha Swamiji) ಹೇಳಿದರು.
ನವದೆಹಲಿಯ ದೀನದಯಾಳು ಉಪಾಧ್ಯಾಯ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪನಿಷತ್ತುಗಳು ‘ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿದೇವೋ ಭವ’ ಎಂದು ಸಾರಿವೆ. ತಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥರು ಇದಕ್ಕೆ ‘ರಾಷ್ಟ್ರದೇವೋ ಭವ’ ಎಂಬ ಸಂದೇಶವನ್ನೂ ಸೇರಿಸಿದ್ದರು ಎಂದು ಹೇಳಿದರು. ಇದನ್ನೂ ಓದಿ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ರೆ ಹುಷಾರ್ – ತ್ರಿಷಾ ಟೀಕಿಸಿದವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ವಿಜಯ್
ಮನುಷ್ಯರು ಸಮಾಜಜೀವಿಗಳಾಗಿದ್ದು, ನಾವು ಬದುಕುತ್ತಿರುವ ನೆಲ, ಸಮಾಜ ಹಾಗೂ ದೇಶದಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತೇವೆ. ನೀರು, ಗಾಳಿ, ಆಕಾಶದಿಂದ ಹಿಡಿದು ಸರ್ಕಾರ ಒದಗಿಸುವ ರಸ್ತೆ, ವಿದ್ಯುತ್, ಪಡಿತರ ಸೇರಿದಂತೆ ಹಲವು ಸೌಲಭ್ಯಗಳನ್ನು ಬಳಸಿಕೊಂಡೇ ನಮ್ಮ ಬದುಕು ಸಾಗುತ್ತದೆ. ಹೀಗಾಗಿ, ಯುವ ಪೀಳಿಗೆ ತಮ್ಮ ಜೀವನದಲ್ಲಿ ದೇಶದ ಪಾತ್ರವನ್ನು ಮರೆಯಬಾರದು ಎಂದರು.
ಒಳ್ಳೆಯ ವಿದ್ಯೆ ಪಡೆದು, ಯುಕ್ತವಾದ ಉದ್ಯೋಗದಲ್ಲಿ ತೊಡಗಿಕೊಂಡು, ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ಶ್ರೇಷ್ಠ ನಾಗರಿಕರಾಗಿ ಬದುಕುವುದೇ ಸಮಾಜ ಮತ್ತು ದೇಶಕ್ಕೆ ಸಲ್ಲಿಸುವ ದೊಡ್ಡ ಸೇವೆ ಎಂದು ಹೇಳಿದರು.
ಹಕ್ಕುಗಳ ಜೊತೆಗೆ ಕರ್ತವ್ಯಕ್ಕೂ ಆದ್ಯತೆ
ವಿದ್ಯಾರ್ಥಿಗಳು ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಪ್ರಶ್ನಿಸುವಷ್ಟೇ ಆಸಕ್ತಿಯಿಂದ ಮೂಲಭೂತ ಕರ್ತವ್ಯಗಳ ಪಾಲನೆಯಲ್ಲೂ ಗಮನ ಹರಿಸಬೇಕು ಎಂದು ಪೇಜಾವರ ಶ್ರೀ ಕರೆ ನೀಡಿದರು. ಮಹಾಭಾರತ ಮತ್ತು ಭಗವದ್ಗೀತೆಯಲ್ಲಿನ ಉದಾಹರಣೆಗಳನ್ನು ಉಲ್ಲೇಖಿಸಿ ಹಕ್ಕು ಮತ್ತು ಕರ್ತವ್ಯಗಳ ಮಹತ್ವವನ್ನು ವಿವರಿಸಿದರು. ಇದನ್ನೂ ಓದಿ: ನೆತ್ತರು ಹರಿದ ಜಾಗವೀಗ ಪ್ರವಾಸಿ ತಾಣ – ʻಡಾರ್ಕ್ ಟೂರಿಸಂʼನೊಂದಿಗೆ ಇತಿಹಾಸದ ಕರಾಳ ಪುಟಗಳ ಮೆಲುಕು
ಸಂವಾದದ ವೇಳೆ ವಿದ್ಯಾರ್ಥಿಯೊಬ್ಬರು ಪ್ರಸ್ತುತ ಜಾತ್ಯತೀತತೆಯ ಪರಿಕಲ್ಪನೆ ಭಾರತೀಯ ಅಧ್ಯಾತ್ಮಿಕ ಪರಂಪರೆಗೆ ಹೊಂದಿಕೆಯಾಗುತ್ತದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪೇಜಾವರ ಶ್ರೀ, ಭಾರತದ ಅಧ್ಯಾತ್ಮಿಕ ಪರಂಪರೆಯಲ್ಲಿರುವ ಜಾತ್ಯತೀತತೆಯ ಪರಿಕಲ್ಪನೆ ಅತ್ಯುತ್ತಮವಾದದ್ದು ಎಂದು ಪ್ರತಿಪಾದಿಸಿದರು. ಸನಾತನ ಪರಂಪರೆಯಲ್ಲಿಯೇ ಜಾತ್ಯತೀತತೆಯ ಶ್ರೇಷ್ಠ ತತ್ವಗಳು ಅಡಕವಾಗಿವೆ. ಆದರೆ, ಪ್ರಸ್ತುತ ರಾಜಕೀಯವಾಗಿ ರೂಪುಗೊಂಡಿರುವ ಜಾತ್ಯತೀತತೆಯ ವ್ಯಾಖ್ಯಾನ ತಪ್ಪಾಗಿದ್ದು, ಅದು ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.
