– ಸಂಸತ್ತಿಗೆ ಆಟಿಕೆ ಕೋತಿ ತಂದ ಪವನ್ ಖೇರಾ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ (Parliament Protest) ನಡೆಸಿದರು. ಕಾಂಗ್ರೆಸ್ (Congress) ನಾಯಕ ಪವನ್ ಖೇರಾ (Pawan Khera) ಅವರು ಸಂಸತ್ತಿಗೆ ಆಟಿಕೆ ಮಂಗನನ್ನು ತಂದಿದ್ದರು. ಇದೇ ವೇಳೆ ಸಂಸದರು 56 ಇಂಚಿನ ಸಣ್ಣ ಕೋತಿ, ಬೇಗ ಸದನದೊಳಗೆ ಬಾ (ಛಪ್ಪನ್ ಇಂಚ್ ಕಾ ಛೋಟಾ ಬಂದರ್, ಜಲ್ದಿ ಆವೋ ಸದನ್ ಕೆ ಅಂಧರ್) ಎಂದು ಘೋಷಣೆ ಕೂಗಿದರು.
ಕಲಾಪ ಆರಂಭಕ್ಕೂ ಮೊದಲು ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವಿಷಯವಾಗಿ ಕಾಂಗ್ರೆಸ್ ಪಕ್ಷ ಮೌನ ವಹಿಸಿದೆ ಎಂದು ಆರೋಪಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದರು ಮಕರ ದ್ವಾರದ ಬಳಿ ಧರಣಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಪವನ್ ಖೇರಾ ನೇತೃತ್ವದಲ್ಲಿ ವಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಕೊನೆಯ ದಿನ ಲೋಕಸಭೆಗೆ ಮೋದಿ, ಶಾ ಆಗಮನ – ಮತ್ತೆ ಗದ್ದಲ, ಚರ್ಚೆ ಇಲ್ಲದೇ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ಮಾತನಾಡಿ, ಆಡಳಿತ ಪಕ್ಷವೇ ಸಂಸತ್ ಕಲಾಪ ನಡೆಯದಂತೆ ತಡೆಯುತ್ತಿದೆ. ಗೃಹ ಸಚಿವರು ಬಂದು ಹೇಳಿಕೆ ನೀಡಲಿ, ಪ್ರಧಾನಿ ಬಂದು ಉತ್ತರಿಸಲಿ ಎನ್ನುವುದು ವಿಪಕ್ಷಗಳ ಸಹಜ ಬೇಡಿಕೆ. ಆದರೆ ಆಡಳಿತ ಪಕ್ಷದವರು ರಾಹುಲ್ ಗಾಂಧಿ ಬಂದು ಮಾತನಾಡಲಿ ಎನ್ನುತ್ತಾರೆ, ರಾಹುಲ್ ಗಾಂಧಿಯವರು ಪ್ರತಿದಿನ ಸದನಕ್ಕೆ ಆಗಮಿಸುತ್ತಿದ್ದಾರೆ. ಪರೀಕ್ಷಾ ಅಕ್ರಮ ವಿಧೇಯಕ ಚರ್ಚೆ ವೇಳೆ ಗೃಹ ಸಚಿವರಾಗಲಿ ಅಥವಾ ಪ್ರಧಾನಿಯವರಾಗಲಿ ಏಕೆ ಬರಲಿಲ್ಲ? ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ದೂರಿದರು.
ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ , ಲೋಕಸಭೆಯು ಚರ್ಚೆ ನಡೆಸುವ ಪವಿತ್ರ ವೇದಿಕೆಯಾಗಿದೆ. ಆದರೆ ವಿಪಕ್ಷಗಳು ಯಾವುದನ್ನೂ ಕೇಳಿಸಿಕೊಳ್ಳಲು ಸಿದ್ಧವಿಲ್ಲ. ಚರ್ಚೆಯೇ ಇಲ್ಲದೆ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಸಂಸತ್ತು ಯಾರೊಬ್ಬರ ವೈಯಕ್ತಿಕ ಇಚ್ಛೆಯಂತೆ ನಡೆಯುವುದಿಲ್ಲ, ಇದು ಇಡೀ ದೇಶದ ಪ್ರತಿನಿಧಿಗಳ ವೇದಿಕೆ ಎಂದು ಹೇಳಿ ಕಾಂಗ್ರೆಸ್ ನಡೆಯನ್ನು ಟೀಕಿಸಿದರು.
ಅಧಿವೇಶನದ ಉದ್ದಕ್ಕೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆದ ಕಾದಾಟ ಸಂಸತ್ತಿನ ಒಳಗೆ ಹಾಗೂ ಹೊರಗೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಸಂಸತ್ ಭವನದ ಆವರಣದ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ಬಿಜೆಪಿ (BJP) ಹಾಗೂ INDIA ಒಕ್ಕೂಟದ ಸಂಸದರ ನಡುವೆ ಭಾರಿ ಮುಖಾಮುಖಿ ಮತ್ತು ಪ್ರತಿಯೊಬ್ಬರ ವಿರುದ್ಧ ಪ್ರತಿಭಟನೆಗಳು ನಡೆದಿತ್ತು. ಇದನ್ನೂ ಓದಿ: ತಾನು ಭಾಷಣ ಮಾಡಿದ ಜಾಗದಲ್ಲಿ ಶುದ್ಧೀಕರಣ ಹೋಮ – ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂದು ಖರ್ಗೆ ಕಿಡಿ
