ಇಸ್ಲಾಮಾಬಾದ್: ಸಿಂಧೂ ನದಿ ನೀರು ಒಪ್ಪಂದ ವಿಚಾರವಾಗಿ ಭಾರತಕ್ಕೆ ಪಾಕಿಸ್ತಾನ ಯುದ್ಧದ ಎಚ್ಚರಿಕೆ ನೀಡಿದೆ. ನೀರು ನಮ್ಮ ರಾಷ್ಟ್ರೀಯ ಭದ್ರತೆಯ ಭಾಗವಾಗಿದ್ದು, ಅದರ ಮೇಲೆ ಯಾವುದೇ ರೀತಿಯ ಅಪಾಯ ಎದುರಾದರೆ ಭಾರತದ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಉದ್ಧಟತನ ಪ್ರದರ್ಶಿಸಿದ್ದಾರೆ.
ಪಾಕಿಸ್ತಾನ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಸಿಫ್, ನಮ್ಮ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎದುರಾದರೆ, ಅದರಲ್ಲೂ ನೀರು ನಮ್ಮ ಭದ್ರತೆಯ ಭಾಗವಾಗಿರುವುದರಿಂದ, ಭಾರತ ವಿರುದ್ಧ ಯುದ್ಧಕ್ಕೂ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಸಿ.ಆರ್ ಪಾಟೀಲ್ 2028ರ ಜೂನ್ ವೇಳೆಗೆ ಸಿಂಧೂ ನದಿ ನೀರು ಹರಿವನ್ನು ಪಾಕಿಸ್ತಾನಕ್ಕೆ ತಡೆಯುವ ಸಾಮರ್ಥ್ಯ ಭಾರತಕ್ಕೆ ಸಿಗಬಹುದು ಎಂಬ ಹೇಳಿಕೆ ಪಾಕಿಸ್ತಾನಕ್ಕೆ ಹೆಚ್ಚು ಆತಂಕ ಸೃಷ್ಟಿಸಿದೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಬಲಿಯಾದ ಕಾರಣ ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ಭಾರತ 1960ರ ಸಿಂಧೂ ಜಲ ಒಪ್ಪಂದ ಅಮಾನತುಗೊಳಿಸಿತ್ತು.
