– ಈ ವರ್ಷ 74.58 ಕೋಟಿ ರೂ. ವೆಚ್ಚ
– ಫ್ರಾನ್ಸ್ ಪ್ರವಾಸಕ್ಕೆ 25.59 ಕೋಟಿ ರೂ.
– ರಾಜ್ಯಸಭೆಗೆ ಕೇಂದ್ರ ಸರ್ಕಾರ ಉತ್ತರ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು 2025ರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ ಮತ್ತು ಜಪಾನ್ ಸೇರಿದಂತೆ 23 ದೇಶಗಳಿಗೆ ಕೈಗೊಂಡ ಪ್ರವಾಸಗಳಿಗೆ(Foreign Visits)180 ಕೋಟಿ ರೂ. ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಸಭಾ ಸಂಸದರಾದ ಸಂಜಯ್ ಸಿಂಗ್ ಮತ್ತು ಡಾ. ವಿ. ಶಿವದಾಸನ್ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರೆಟಾ ಅವರು ಲಿಖಿತ ಉತ್ತರ ನೀಡಿದ್ದಾರೆ.
2021 ರಿಂದ ಪ್ರಧಾನಿ ಕೈಗೊಂಡ ದೇಶವಾರು ಪ್ರವಾಸಗಳು, ಪ್ರತಿ ಪ್ರವಾಸದ ವೆಚ್ಚ, ಸಹಿ ಮಾಡಲಾದ ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಅದರಿಂದ ಹರಿದುಬಂದ ಎಫ್‌ಡಿಐ(FDI) ಕುರಿತು ಸಂಸದರು ವಿವರಣೆ ಕೋರಿದ್ದರು.
ವರ್ಷಾವಾರು ಮಾಹಿತಿಯ ಪ್ರಕಾರ 2026ರಲ್ಲಿ ಇಲ್ಲಿಯವರೆಗೆ ಅವರ ವಿದೇಶಿ ಪ್ರವಾಸಗಳ ವೆಚ್ಚವು ಸುಮಾರು 74.58 ಕೋಟಿ ರೂ. ಆಗಿದೆ. ಇದರಲ್ಲಿ ಜುಲೈ 6 ರಿಂದ ಜುಲೈ 11 ರವರೆಗೆ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗೆ ಕೈಗೊಂಡ ಪ್ರವಾಸವೂ ಸೇರಿದೆ.

ಯಾವ ಪ್ರವಾಸಕ್ಕೆ ಎಷ್ಟು?
2025 ರಲ್ಲಿ ಮೋದಿ ಅವರ ವಿವಿಧ ದೇಶಗಳ ಪ್ರವಾಸಗಳಿಗೆ ಸುಮಾರು 187 ಕೋಟಿ ವೆಚ್ಚವಾಗಿದೆ. ಕಳೆದ ವರ್ಷದ ಪ್ರತ್ಯೇಕ ಪ್ರವಾಸಗಳ ವೆಚ್ಚದಲ್ಲಿ ಫ್ರಾನ್ಸ್ (25,59,82,902 ರೂ.), ಅಮೆರಿಕ (16,54,84,302 ರೂ.), ಸೌದಿ ಅರೇಬಿಯಾ (15,54,03,792.47 ರೂ.), ಬ್ರೆಜಿಲ್ (17,72,22,144 ರೂ.), ಚೀನಾ (10,59,90,561 ರೂ.) ಮತ್ತು ಬ್ರಿಟನ್ (9,91,55,061.39 ರೂ.) ಪ್ರಮುಖವಾಗಿವೆ.
2025 ರಲ್ಲಿ ಮೋದಿ ಅವರು ಮಾರಿಷಸ್, ಥೈಲ್ಯಾಂಡ್, ಶ್ರೀಲಂಕಾ, ಸೈಪ್ರಸ್, ಕೆನಡಾ, ಕ್ರೊಯೇಷಿಯಾ, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ನಮೀಬಿಯಾ, ಮಾಲ್ಡೀವ್ಸ್, ಜಪಾನ್, ಭೂತಾನ್, ದಕ್ಷಿಣ ಆಫ್ರಿಕಾ, ಜೋರ್ಡಾನ್, ಒಮಾನ್ ಮತ್ತು ಇಥಿಯೋಪಿಯಾಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ಡಾರ್ಕ್ ಪ್ಯಾಟರ್ನ್ ವಿರುದ್ಧ ಸಮರ – 9 ಕಂಪನಿಗಳಿಗೆ 20 ಲಕ್ಷ ರೂ. ವರೆಗೆ ದಂಡ
ಯಾವ ವರ್ಷ ಎಷ್ಟು?
2024 – 109 ಕೋಟಿ ರೂ.
2023 – 93 ಕೋಟಿ ರೂ.
2022 – 55.82 ಕೋಟಿ ರೂ.
2021 – 36 ಕೋಟಿ ರೂ.

ಈ ಪ್ರವಾಸಗಳ ಸಮಯದಲ್ಲಿ ಸಹಿ ಮಾಡಲಾದ ದ್ವಿಪಕ್ಷೀಯ ಒಪ್ಪಂದಗಳು ಮತ್ತು ತಿಳುವಳಿಕಾಪತ್ರಗಳ (MoU) ದೇಶಾವಾರು ವಿವರಗಳು, ಘೋಷಿಸಲಾದ ಹೂಡಿಕೆ ಬದ್ಧತೆಗಳು ಮತ್ತು ಇದರ ಪರಿಣಾಮವಾಗಿ ಭಾರತದಲ್ಲಿ ಸ್ವೀಕರಿಸಲಾದ ನೈಜ ಪ್ರತ್ಯಕ್ಷ ವಿದೇಶಿ ಹೂಡಿಕೆಯ (FDI) ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಕೇಳಲಾಗಿತ್ತು.
ಏಪ್ರಿಲ್ 2021 ರಿಂದ ಡಿಸೆಂಬರ್ 2025 ರ ಅವಧಿಯಲ್ಲಿ ಸ್ವೀಕರಿಸಲಾದ ಒಟ್ಟು 381.8 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಹೂಡಿಕೆ (FDI) ಸ್ವೀಕರಿಸಲಾಗಿದೆ. ಹಂಚಿಕೊಳ್ಳಲಾದ ಪಟ್ಟಿಯ ಪ್ರಕಾರ, ಜುಲೈ 2021 ರಿಂದ ಪ್ರಧಾನಿಯವರ ವಿದೇಶಿ ಪ್ರವಾಸಗಳ ಸಮಯದಲ್ಲಿ 316 ತಿಳುವಳಿಕಾಪತ್ರಗಳಿಗೆ (MoU) ಸಹಿ ಹಾಕಲಾಗಿದೆ.
ರಾಜ್ಯಸಭೆಗೆ ಸಲ್ಲಿಸಿದ ಉತ್ತರದಲ್ಲಿ ಯುಪಿಎ ಆಡಳಿತಾವಧಿಯಲ್ಲಿ ದಿವಂಗತ ಡಾ. ಮನ್‌ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕೈಗೊಂಡ ಕೆಲವು ಪ್ರಮುಖ ವಿದೇಶಿ ಪ್ರವಾಸಗಳ ವೆಚ್ಚವನ್ನೂ ಸಚಿವಾಲಯ ಹೋಲಿಕೆಗಾಗಿ ಉಲ್ಲೇಖಿಸಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಪ್ರದೂಷ್ ಮಾಫಿ ಸಾಕ್ಷಿಗೆ ಪ್ರಾಸಿಕ್ಯೂಷನ್ ಷರತ್ತುಬದ್ಧ ಒಪ್ಪಿಗೆ; ಆ.10 ಕ್ಕೆ ಕೋರ್ಟ್ ಆದೇಶ

ಮನಮೋಹನ್ ಸಿಂಗ್ ಪ್ರವಾಸ
2011 – ಅಮೆರಿಕ ಪ್ರವಾಸ: 10.74 ಕೋಟಿ ರೂ.
2013 – ರಷ್ಯಾ ಪ್ರವಾಸ: 9.96 ಕೋಟಿ ರೂ.
2011 – ಫ್ರಾನ್ಸ್ ಪ್ರವಾಸ: 8.33 ಕೋಟಿ ರೂ.
2013 – ಜರ್ಮನಿ ಪ್ರವಾಸ: 6.02 ಕೋಟಿ ರೂ.
ಈ ಹಿಂದಿನ ಒಂದೊಂದು ಪ್ರವಾಸದ ವೆಚ್ಚವು ಪ್ರಸಕ್ತ ವರ್ಷದಲ್ಲಿ ಪ್ರಧಾನಿ ಮೋದಿ ಅವರ ಸಂಪೂರ್ಣ ವಿದೇಶಿ ಪ್ರವಾಸಗಳಿಗೆ ತಗುಲಿದ ಒಟ್ಟು ವೆಚ್ಚಕ್ಕಿಂತ ಹೆಚ್ಚಾಗಿತ್ತು ಎಂದು ಸಚಿವಾಲಯ ತಿಳಿಸಿದ್ದು, ಈ ಅಂಕಿ-ಅಂಶಗಳನ್ನು ಹಣದುಬ್ಬರ ಅಥವಾ ದರ ವ್ಯತ್ಯಾಸಕ್ಕೆ ಸರಿಹೊಂದಿಸದೆ ನೇರ ನಿವ್ವಳ ವೆಚ್ಚದ ಆಧಾರದಲ್ಲಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.



