– ಚೀನಾದಿಂದ ಭಾರತೀಯರ ಸ್ಥಳಾಂತರಕ್ಕೆ ಸಿದ್ಧತೆ
ನವದೆಹಲಿ: ನೇಪಾಳ-ಚೀನಾ ಗಡಿ (Nepal China Border) ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಚೀನಾದ ಭಾಗದಲ್ಲಿ ಸಿಲುಕಿರುವ 400ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿದ್ದಾರೆ. ಇದರೊಂದಿಗೆ ತೊಂದರೆಗೆ ಒಳಗಾಗಿರುವ ನೂರಾರು ಭಾರತೀಯರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ಮುಂದುವರಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಶುಕ್ರವಾರ ತಿಳಿಸಿದ್ದಾರೆ.
Bi-Weekly Media Briefing by the Official Spokesperson (August 28, 2026)
https://t.co/8Mi8vc0etK— Randhir Jaiswal (@MEAIndia) August 28, 2026
ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಭಾರತೀಯರೊಂದಿಗೆ (Indians) ಸಂಪರ್ಕ ಸಾಧಿಸಲು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳು, ತಂಡದ ನಾಯಕರು ಹಾಗೂ ಪ್ರವಾಸ ಏಜೆಂಟರ ಮೂಲಕ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯರ ಕುಟುಂಬ ಸದಸ್ಯರೂ ಸಹ ರಾಯಭಾರ ಕಚೇರಿ ಆರಂಭಿಸಿರುವ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಾಸ್ತವವಾಗಿ ಸುಮಾರು 400 ಭಾರತೀಯ ಪ್ರಜೆಗಳಿದ್ದಾರೆ. ನಮ್ಮ ರಾಯಭಾರ ಕಚೇರಿ ಅವರಲ್ಲಿ ಹಲವರೊಂದಿಗೆ, ವಿಶೇಷವಾಗಿ ಅವರ ತಂಡದ ನಾಯಕರು ಮತ್ತು ಪ್ರವಾಸ ಏಜೆಂಟರೊಂದಿಗೆ ಸಂಪರ್ಕದಲ್ಲಿದೆ. ಅವರ ಕುಟುಂಬದ ಹಲವು ಸದಸ್ಯರೂ ಬೀಜಿಂಗ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ನಡೆಸುತ್ತಿರುವ ಸಹಾಯವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದಾರೆ.
EAM @DrSJaishankar’s interaction with 21 pilgrims from Tamil Nadu, rescued from Nepal. https://t.co/CDc3rTpVSp
— Randhir Jaiswal (@MEAIndia) August 28, 2026
ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿದ್ದು, ಹೊಸ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಂಖ್ಯೆಗಳಲ್ಲೂ ಬದಲಾವಣೆಯಾಗಬಹುದು. ಸದ್ಯ ಚೀನಾ ಭಾಗದಲ್ಲಿರುವ 400 ಮಂದಿ ಸುರಕ್ಷಿತವಾಗಿದ್ದು, ಇನ್ನೂ 300 ಮಂದಿ ಸಂಪರ್ಕಕ್ಕಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
96 ಮಂದಿ ನೇಪಾಳಕ್ಕೆ, 21 ಮಂದಿ ದೆಹಲಿಗೆ
ಪ್ರವಾಹ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರಲ್ಲಿ 96 ಮಂದಿ ಈಗಾಗಲೇ ನೇಪಾಳಕ್ಕೆ ತೆರಳಿದ್ದಾರೆ. ಮತ್ತೊಂದೆಡೆ, ಕಠ್ಮಂಡುವಿಗೆ ತಲುಪಿದ್ದ 21 ಮಂದಿ ಇದೀಗ ದೆಹಲಿಗೆ ಆಗಮಿಸಿದ್ದಾರೆ. ಈ 21 ಮಂದಿ ತಮಿಳುನಾಡಿನವರಾಗಿದ್ದು, ಇಂಡಿಗೋ ವಿಮಾನದ ಮೂಲಕ ರಾಷ್ಟ್ರ ರಾಜಧಾನಿಗೆ ಬಂದಿಳಿದಿದ್ದಾರೆ. ಇದಲ್ಲದೆ, ತ್ರಿಶೂಲ್ ಒನ್‌ನಲ್ಲಿ ಕೆಲಸ ಮಾಡುತ್ತಿದ್ದ 63 ಭಾರತೀಯರನ್ನು ರಕ್ಷಿಸಲಾಗಿದೆ. ಸಿಲುಕಿರುವ ಇತರ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯವೂ ಮುಂದುವರಿದಿದೆ ಎಂದು MEA ತಿಳಿಸಿದೆ.
ಚೀನಾದಿಂದ ಭಾರತೀಯರ ಸ್ಥಳಾಂತರಕ್ಕೆ ಸಿದ್ಧತೆ
ಚೀನಾದ ಭಾಗದಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂಬುದು ದೃಢಪಟ್ಟಿದ್ದರೂ, ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಭಾರತ ಸರ್ಕಾರ ಚೀನಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ನಮ್ಮ ರಾಯಭಾರ ಕಚೇರಿ ಚೀನಾದ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಅಲ್ಲಿರುವ ಭಾರತೀಯರನ್ನು ಹೇಗೆ ಸ್ಥಳಾಂತರಿಸಬಹುದು ಎಂಬುದರ ಕುರಿತು ಅವರು ಕಾರ್ಯಯೋಜನೆ ರೂಪಿಸುತ್ತಿದ್ದಾರೆ ಎಂದು ಎಂಇಎ ಹೇಳಿದೆ.

ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ಹಾಗೂ ಪ್ರವಾಹ ಪೀಡಿತ ನೇಪಾಳಕ್ಕೆ ಅಗತ್ಯ ನೆರವು ಮತ್ತು ಪರಿಹಾರ ಒದಗಿಸಲು ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ.
