ಬೆಂಗಳೂರು: ಬೆಂಗಳೂರಿನ ಸಾಹಸಿಗರ ಸಂಸ್ಥೆಯೊಂದು ಆ.15, 16ರಂದು ಕುದುರೆಮುಖದಲ್ಲಿ (Kudremukha) ಆಫ್ ರೋಡ್ (Off-Roading) ಸಾಹಸ ಆಯೋಜಿಸಿದ್ದು, ಇದರಿಂದ ಜಲಮೂಲ ಕಲುಷಿತವಾದರೆ ಮತ್ತು ಗ್ರಾಮೀಣ ರಸ್ತೆ ನಾಶವಾದರೆ ಕಠಿಣ ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ಆ.15, 16ರಂದು ಚಿಕ್ಕಮಗಳೂರು ಜಿಲ್ಲೆ ಕುದುರೆಮುಖದಲ್ಲಿ ಆಫ್ ರೋಡ್ ಅಡ್ವೆಂಚರ್ ನಡೆಸುತ್ತಿರುವುದಾಗಿ ಬೆಂಗಳೂರಿನ ಒಂದು ಸಂಸ್ಥೆ ಪ್ರಚಾರ ಮಾಡಿದ್ದು, ಈ ಆಫ್ -ರೋಡ್‌ನಲ್ಲಿ ನದಿಗಳನ್ನು ದಾಟುವ, ಮಣ್ಣು ದಾರಿಯಲ್ಲಿ ಸಾಗುವ, ಬೆಟ್ಟ ಗುಡ್ಡ ಹತ್ತಿ ಇಳಿಯುವ ಸಾಹಸದ ಅವಕಾಶವಿದೆ ಎಂದು ಹೇಳಿಕೊಂಡಿದೆ. ಇದರಿಂದ ರಸ್ತೆಗಳು ಹಾಳಾಗದಂತೆ ಕ್ರಮ ವಹಿಸಲು ಸೂಚಿಸಿದ್ದಾರೆ.
ದೇಶದ ಪವಿತ್ರ ಸಂವಿಧಾನ ವಿಧಿ 51ಎ(ಜಿ)ರಲ್ಲಿರುವ `ಭಾರತದ ಪ್ರಜೆಯಾಗಿ ನಾನು ಅರಣ್ಯ, ಸರೋವರ, ನದಿ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುತ್ತೇನೆ ಮತ್ತು ಸುಧಾರಿಸುತ್ತೇನೆ. ಭಾರತದ ಸಂವಿಧಾನದ ಆಶಯದಂತೆ ನಾನು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿರುತ್ತೇನೆ’ ಎಂಬ ಅಂಶವನ್ನು ಉಲ್ಲೇಖಿಸಿ, ನದಿ, ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5,000 ಕ್ಕೂ ಹೆಚ್ಚು ವೆಬ್‌ಪೇಜ್‌ಗಳಲ್ಲಿ ಅಶ್ಲೀಲ ಫೋಟೋ ಬಳಕೆ – ಜಾನ್ವಿ ಕಪೂರ್‌ಗೆ ಮಧ್ಯಂತರ ರಕ್ಷಣೆ ನೀಡಿದ ಕೋರ್ಟ್
ಈ ಸಾಹಸದಲ್ಲಿ ಬಳಸಲಾಗುವ ವಾಹನಗಳಿಗೆ ಪರಿವರ್ತಿತ (ಮಾಡಿಫೈಡ್) ದಪ್ಪ ಟೈರ್‌ಗಳನ್ನು ಹಾಕುವ ಕಾರಣ ಮತ್ತು ಆ ವಾಹನಗಳು ಮಳೆಯಿಂದ ತೊಯ್ದ ರಸ್ತೆಯಲ್ಲಿ ಅತಿ ರಭಸದಿಂದ ಸಾಗುವ ಕಾರಣ ಗ್ರಾಮೀಣ ರಸ್ತೆಗಳು ಹಾಳಾಗುವ ಅಪಾಯ ಇರುವುದಲ್ಲದೆ, ಬೆಟ್ಟ ಗುಡ್ಡಗಳ ಮೇಲಿನ ಮೇಲ್ಮೈ ಪದರ ಸವಕಳಿಯಾಗಿ ಮಳೆ ಬಂದಾಗ ಕೊಚ್ಚಿಕೊಂಡು ಬಂದು ಕೆರೆ, ಕಟ್ಟೆ, ಸರೋವರ ಇತ್ಯಾದಿ ಜಲ ಮೂಲಗಳಲ್ಲಿ ಹೂಳು ಹೆಚ್ಚಾಗಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದೂ ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
ಆಫ್ ರೋಡ್ ಟ್ರಯಲ್‌ಗಳು ಶಬ್ದಮಾಲಿನ್ಯ, ವಾಯುಮಾಲಿನ್ಯಕ್ಕೂ ಕಾರಣವಾಗಲಿದ್ದು, ಹಲವು ಜೀವಿಜಂತುಗಳ ಸಾವಿಗೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕುಡಿಯುವ ನೀರು ಪೂರೈಸುವ ಜಲ ಮೂಲಗಳಾದ ನದಿ, ತೊರೆ, ಕಾಲುವೆಗಳಲ್ಲಿ ಯಾವುದೇ ಸಾಹಸಿ ವಾಹನ ಸಂಚರಿಸಿ ನೀರು ಕಲುಷಿತಗೊಳಿಸದಂತೆ ಮತ್ತು ಗ್ರಾಮೀಣ ರಸ್ತೆಗಳು ಹಾಳಾಗದಂತೆ ಕ್ರಮ ವಹಿಸಲು, ಒಂದೊಮ್ಮೆ ರಸ್ತೆ ಹಾಳಾದರೆ, ಜಲಮೂಲ ಕಲುಷಿತವಾದರೆ ನಿರ್ದಾಕ್ಷಿಣ್ಯವಾಗಿ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪೂಜೆಗೆ ನೀರು ತರಲು ಹೋದ ವ್ಯಕ್ತಿ ವರದಾ ನದಿಯಲ್ಲಿ ಮುಳುಗಿ ನಾಪತ್ತೆ

