ಬಳ್ಳಾರಿ: ಲೋಕಸಭಾ ಚುನಾವಣೆಯ (Lok Sabha Election) ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ತುಕಾರಾಂ ಅವರು ರಾಜೀನಾಮೆ ನೀಡುವಾಗಲೇ ತಮ್ಮ ಕುಟುಂಬಕ್ಕೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿತ್ತು ಎಂದು ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ(Annapoorna Tukaram) ಹೇಳಿದ್ದಾರೆ.
ಸಂಡೂರು ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಸಂಪುಟ ವಿಸ್ತರಣೆ (Cabinet Expansion) ಮತ್ತು ಸಚಿವ ಸ್ಥಾನದ ಕುರಿತು ಮುಕ್ತವಾಗಿ ಮಾತನಾಡಿದರು.
ಸಂಡೂರಿನ ಜನರಿಗೆ ಉಪಚುನಾವಣೆಯ (By Election) ಅವಶ್ಯಕತೆಯೇ ಇರಲಿಲ್ಲ. ಸ್ಥಳೀಯವಾಗಿ ತುಕಾರಾಂ ಅವರು ಉತ್ತಮ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಹೈಕಮಾಂಡ್‌ಗೆ ಬಳ್ಳಾರಿ ಲೋಕಸಭಾ (Ballari Lok Sabha) ಕ್ಷೇತ್ರ ಗೆಲ್ಲುವುದು ಪ್ರತಿಷ್ಠೆಯ ವಿಷಯವಾಗಿತ್ತು. ಪಕ್ಷದ ಸೂಚನೆಯಂತೆ ಶಾಸಕ ಸ್ಥಾನ ತ್ಯಾಗ ಮಾಡಿ ಲೋಕಸಭೆಗೆ ಸ್ಪರ್ಧಿಸಲಾಯಿತು. ಸಂಡೂರಿನ ಜನರೂ ತ್ಯಾಗ ಮಾಡಿ ಉಪಚುನಾವಣೆಯನ್ನು ಎದುರಿಸಿದರು ಎಂದು ತಿಳಿಸಿದರು.
ತುಕಾರಾಂ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಮಯದಲ್ಲೇ ಹೈಕಮಾಂಡ್ ನಮ್ಮ ಕುಟುಂಬಕ್ಕೆ ಸಚಿವ ಸ್ಥಾನ ನೀಡುವ ಭರವಸೆ ನೀಡಿತ್ತು. ಅವರು ಶಾಸಕರಾಗಿ ಮುಂದುವರಿದಿದ್ದರೆ ನ್ಯಾಯಯುತವಾಗಿ ಸಚಿವ ಸ್ಥಾನ ಸಿಗುತ್ತಿತ್ತು. ಅವರು ನಾಲ್ಕು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಹಾಗೂ ಪ್ರಸ್ತುತ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ನನಗೆ ಸಚಿವ ಸ್ಥಾನ ನೀಡಲೇಬೇಕು, ಅದನ್ನು ಬಿಟ್ಟು ಬೇರೆ ಮಾತುಕತೆ ಇಲ್ಲ: ಕೃಷ್ಣಪ್ಪ ಖಡಕ್ ಮಾತು
ಸಚಿವ ಸ್ಥಾನಕ್ಕೆ ಪ್ರಯತ್ನಿಸುವುದು ರನ್ನಿಂಗ್ ರೇಸ್ ಇದ್ದಂತೆ. ಎಲ್ಲರೂ ಓಡುತ್ತಿರುತ್ತಾರೆ, ಅದರಲ್ಲಿ ಯಾರಾದರೂ ಒಬ್ಬರು ಗೆಲ್ಲಲೇಬೇಕು. ಅರ್ಹತೆ ಇದ್ದಾಗ ಸ್ಪರ್ಧೆ ಮಾಡುವುದರಲ್ಲಿ ಹಾಗೂ ಸಚಿವ ಸ್ಥಾನಕ್ಕೆ ಸಿಎಂ ಮತ್ತು ಮಾಜಿ ಸಿಎಂ ಬಳಿ ಮನವಿ ಮಾಡುವುದರಲ್ಲಿ ತಪ್ಪೇನೂ ಇಲ್ಲ. ನಮಗೆ ಸಚಿವ ಸ್ಥಾನಕ್ಕೆ ಇನ್ನೂ ಅವಕಾಶಗಳಿವೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಐದು ಜನ ಮಹಿಳಾ ಶಾಸಕರಿದ್ದೇವೆ. ಮಹಿಳಾ ಕೋಟಾದಡಿಯಲ್ಲಿ ಸಚಿವ ಸ್ಥಾನ ಸಿಗುವ ಆಶಾಭಾವನೆಯಿದೆ. ನಮ್ಮ ಐವರಲ್ಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಮತ್ತು ಯಾರಿಗೆ ನೀಡಿದರೂ ನಮಗೆ ಸಂತೋಷವೇ ಎಂದು ಸ್ಪಷ್ಟಪಡಿಸಿದರು.



