ನವದೆಹಲಿ: ಭಾರತದಲ್ಲಿ ತಮ್ಮ ಸ್ಟಾರ್ಲಿಂಕ್ (Starlink) ಸ್ಯಾಟಲೈಟ್ ಇಂಟರ್ನೆಟ್ ಸೇವೆ ಆರಂಭಿಸಲು ಕೆಲ ಪ್ರಭಾವಿ ಟೆಲಿಕಾಂ ದೊರೆಗಳು (Oligarchs) ಅಡ್ಡಿಪಡಿಸುತ್ತಿದ್ದಾರೆ ಎಂಬ ಶತಕೋಟ್ಯಧಿಪತಿ ಎಲಾನ್ ಮಸ್ಕ್ ಅವರ ಗಂಭೀರ ಆರೋಪವನ್ನು ಕೇಂದ್ರ ಸರ್ಕಾರ ಗುರುವಾರ ಸಾರಾಸಗಟಾಗಿ ತಳ್ಳಿಹಾಕಿದೆ.
ಭಾರತದ ಉಪಗ್ರಹ ಸಂವಹನ ನಿಯಂತ್ರಣಾ ಚೌಕಟ್ಟು (Regulatory Framework) ಸಂಪೂರ್ಣ ಪಾರದರ್ಶಕ, ನ್ಯಾಯಸಮ್ಮತ ಮತ್ತು ತಾರತಮ್ಯ ರಹಿತವಾಗಿದೆ ಎಂದು ಕೇಂದ್ರ ಸಂವಹನ ಸಚಿವಾಲಯ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಸಾಮಾಜಿಕ ಜಾಲತಾಣ ಹರಿದಾಡುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆ ನೀಡಿರುವ ಸಂವಹನ ಸಚಿವಾಲಯ, “ಉಪಗ್ರಹ ಸಂವಹನ ಸೇವೆಗಳ ನಿಯಂತ್ರಣಾ ವ್ಯವಸ್ಥೆಯು ತಾರತಮ್ಯದಿಂದ ಕೂಡಿದೆ ಎಂಬ ತಪ್ಪು ಸಂದೇಶಗಳು ಹರಡುತ್ತಿವೆ. ಭಾರತ ಸರ್ಕಾರವು ಸ್ಯಾಟಲೈಟ್ ಸೇವೆಗಳು ಸೇರಿದಂತೆ ಎಲ್ಲಾ ಟೆಲಿಕಾಂ ಸೇವೆಗಳಿಗೂ ನ್ಯಾಯಸಮ್ಮತ ಹಾಗೂ ತಾರತಮ್ಯ ರಹಿತವಾದ ವ್ಯವಸ್ಥೆಯನ್ನು ರೂಪಿಸಿದೆ. ಇದರ ಅಡಿಯಲ್ಲಿ ಮೂರು ಪ್ರಮುಖ ಜಾಗತಿಕ ಸ್ಯಾಟಲೈಟ್ ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ. ಪರವಾನಗಿಯ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಕಂಪನಿಯೂ ದೇಶದ ಭದ್ರತಾ ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ” ಎಂದು ತಿಳಿಸಿದೆ. ಇದನ್ನೂ ಓದಿ: ಭಾರತದಲ್ಲಿ ಸ್ಟಾರ್ಲಿಂಕ್ಗೆ ದೇಶಿ ಟೆಲಿಕಾಂ ದೊರೆಗಳಿಂದ ಅಡ್ಡಿ: ಮಸ್ಕ್ ಕಿಡಿ

ಬಳಕೆದಾರರ ಹಿತದೃಷ್ಟಿ ಹಾಗೂ ಅವರ ಡೇಟಾ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಈ ಕಠಿಣ ಭದ್ರತಾ ಪರಿಶೀಲನೆ ನಡೆಸಲಾಗುತ್ತದೆ. ಸದ್ಯ ಪರವಾನಗಿ ಪಡೆದಿರುವ ಮೂರೂ ಕಂಪನಿಗಳ ಭದ್ರತಾ ಪರಿಶೀಲನೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಆಯಾ ಸಂಸ್ಥೆಗಳು ಮುಂದಿನ ಹಂತವಾದ ಸ್ಪೆಕ್ಟ್ರಮ್ ಹಂಚಿಕೆಗೆ ಮುಂದುವರಿಯಲು ಸಾಧ್ಯ. ಪ್ರಸ್ತುತ ಮೂರೂ ಕಂಪನಿಗಳು ನಿಯಮಾವಳಿಗಳ ಒಂದೇ ಹಂತದಲ್ಲಿರುವುದರಿಂದ, ಭಾರತದ ನಿಯಮಗಳು ಅನ್ಯಾಯ ಅಥವಾ ತಾರತಮ್ಯದಿಂದ ಕೂಡಿವೆ ಎಂಬ ಆರೋಪ ಸಂಪೂರ್ಣ ಆಧಾರರಹಿತ ಹಾಗೂ ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ಸಚಿವಾಲಯ ತೀಕ್ಷ್ಣವಾಗಿ ಉತ್ತರಿಸಿದೆ.
ಭಾರತದ ನಿಯಮಗಳಿಗೆ ತಕ್ಕಂತೆ ಭದ್ರತಾ ವ್ಯವಸ್ಥೆಗಳನ್ನು ರೂಪಿಸಲಾಗಿದ್ದು, ಭಾರತೀಯ ಬಳಕೆದಾರರ ಡೇಟಾವನ್ನು ದೇಶದೊಳಗೇ ಇರಿಸಲಾಗುವುದು ಎಂದು ಸ್ಟಾರ್ಲಿಂಕ್ ಬಿಸಿನೆಸ್ ಆಪರೇಷನ್ಸ್ ಉಪಾಧ್ಯಕ್ಷೆ ಲಾರೆನ್ ಡ್ರೇಯರ್ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ, ರಾಷ್ಟ್ರೀಯ ಭದ್ರತಾ ತಪಾಸಣೆಗಳಲ್ಲಿ ಯಾವುದೇ ರಿಯಾಯಿತಿ ನೀಡದೆ ಎಲ್ಲ ಸಂಸ್ಥೆಗಳಿಗೂ ಸಮಾನ ನಿಯಮ ಅನ್ವಯಿಸುವುದಾಗಿ ಖಡಕ್ ಸಂದೇಶ ರವಾನಿಸಿದೆ.

