ಬೆಳಗಾವಿ: ಕಳೆದ ಒಂದು ದಶಕದಿಂದ ಸಾಲು ಸಾಲು ಭೀಕರ ರಸ್ತೆ ಅಪಘಾತಗಳು ಹಾಗೂ ಹತ್ತಾರು ಅಮಾಯಕರ ಸಾವುಗಳಿಗೆ ಕಾರಣವಾಗಿದ್ದ ಬೆಳಗಾವಿಯ (Belagavi) ಬಡೆಕೋಳಮಠದ ಬಳಿಯ ‘ಡೆಡ್ಲಿ’ ರಾಷ್ಟ್ರೀಯ ಹೆದ್ದಾರಿಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ
ಅಪಾಯಕಾರಿ ತಿರುವು ಹಾಗೂ ವಿನ್ಯಾಸ ದೋಷದಿಂದ ಕೂಡಿರುವ ಪುಣೆ-ಬೆಂಗಳೂರು ಹೆದ್ದಾರಿ(Pune-Bengaluru Highway) ದುರಸ್ತಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.
ಬಡೆಕೋಳಮಠದ ಬಳಿ ಇರುವ ಈ ಹೆದ್ದಾರಿ ಭಾಗದಲ್ಲಿ ತೀವ್ರವಾದ ಇಳಿಜಾರು ಮತ್ತು ಅಪಾಯಕಾರಿ ತಿರುವು ಇದೆ. ಇದರಿಂದಾಗಿ ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಲಾರಿ, ಬಸ್, ಗೂಡ್ಸ್ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸರಣಿ ಅಪಘಾತಕ್ಕೆ ಈಡಾಗುತ್ತಲೇ ಬಂದಿದ್ದವು. ಕಳೆದ 10 ವರ್ಷಗಳಲ್ಲಿ ಈ ಭಾಗದಲ್ಲಿ ಹತ್ತಾರು ಜನರು ಪ್ರಾಣ ಕಳೆದುಕೊಂಡಿದ್ದರು.

ಈ ಸರಣಿ ಅಪಘಾತಗಳನ್ನು ತಡೆಯಲು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ ಭೂಷಣ್ ಜಿ. ಬೊರಸೆ (Bhushan Gulabrao Borase) ಅವರು ವಿಶೇಷ ಮುತುವರ್ಜಿ ವಹಿಸಿದ್ದರು. ಕಳೆದ 10 ವರ್ಷಗಳಲ್ಲಿ ಬಡೆಕೋಳಮಠದ ಬಳಿ ಸಂಭವಿಸಿದ ಅಪಘಾತಗಳು ಹಾಗೂ ಸಾವು-ನೋವುಗಳ ಸಂಪೂರ್ಣ ಅಂಕಿ-ಅಂಶಗಳ ಮಾಹಿತಿಯನ್ನು ಸಂಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿ; 20 ಮಂದಿಗೆ ಗಾಯ, ಓರ್ವ ಸಾವು
ಪೊಲೀಸ್ ಇಲಾಖೆ ಮನವಿ ಸಲ್ಲಿಕೆ ಮಾಡಿದ ನಂತರವೂ ಸಹ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿರಲಿಲ್ಲ. ಕಳೆದ ಒಂದೇ ವರ್ಷದ ಅವಧಿಯಲ್ಲಿ ಮತ್ತೆ 20 ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ವರದಿಯಾಗಿದ್ದು, NHAI ಮೇಲಿನ ಒತ್ತಡ ಹೆಚ್ಚಾಗುವಂತೆ ಮಾಡಿತ್ತು.
ಪೊಲೀಸ್ ಆಯುಕ್ತರ ಪತ್ರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಸ್ಪಂದಿಸಿರುವ NHAI, ಇದೀಗ ರಸ್ತೆ ಅಭಿವೃದ್ಧಿ ಹಾಗೂ ವಿನ್ಯಾಸ ಸರಿಪಡಿಸಲು ಟೆಂಡರ್ ಆಹ್ವಾನಿಸಿದೆ. ಖಾಯಂ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸವಾರರ ಸುರಕ್ಷತೆಗಾಗಿ ಹೆದ್ದಾರಿ ಪ್ರಾಧಿಕಾರ ತಾತ್ಕಾಲಿಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ:
ಅಪಾಯಕಾರಿ ತಿರುವುಗಳಲ್ಲಿ ಡ್ರಮ್‌ಗಳನ್ನು ಬಳಸಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ವಾಹನ ಸವಾರರನ್ನು ಎಚ್ಚರಿಸಲು ಮಾನವಾಕೃತಿಯ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

